ಹರಪನಹಳ್ಳಿ, ಆ. 4 – ಅಣ್ಣ – ತಂಗಿಯರ ಸಂಬಂಧಕ್ಕೆ ಅರ್ಥ ಕಲ್ಪಿಸುವ ಪವಿತ್ರವಾದ ನೂಲು ಹುಣ್ಣುಮೆಯ ರಾಖಿ ಹಬ್ಬವನ್ನು ಪಟ್ಟಣದಲ್ಲಿ ವಿವೇಕ ಟೈಲರ್ ನ ಮಾಲೀಕ ನಟರಾಜ ಅವರು ಕೊರೊನಾ ವಾರಿಯರ್ಸ್ಗಳಿಗೆ ಉಚಿತವಾಗಿ ರಾಖಿ ವಿತರಿಸುವ ಮೂಲಕ ರಾಖಿ ಹಬ್ಬಕ್ಕೆ ಕಳೆ ತಂದರು.
ವಿವೇಕ ಟೈಲರ್ ನ ಮಾಲೀಕ ನಟರಾಜ ಸ್ವತಃ ಕೆಂಪು, ಬಿಳಿಪು, ಹಳದಿ ನೂಲಿನಿಂದ ಮೂರು ನಮೂನೆ ರಾಖಿಗಳನ್ನು ತಯಾರಿಸಿ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಮಹಿಳಾ ವೈದ್ಯರು, ನರ್ಸ್ಗಳು, ಹೆರಿಗೆ ವಾರ್ಡನಲ್ಲಿ ದಾಖಲಾದವರಿಗೆ ರಾಖಿ ನೀಡಿ ಧನ್ಯವಾದ ತಿಳಿಸಿ ಶುಭ ಕೋರಿದರು.
ಹೀಗೆ ಒಟ್ಟು ಒಂದು ಸಾವಿರಕ್ಕೂ ಹೆಚ್ಚು ರಾಖಿಗಳನ್ನು ಸುಂದರವಾಗಿ ತಯಾರಿಸಿ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೂ ನೀಡಿದರು.
ತಾಲ್ಲೂಕಿನ ಗೋವೇರಹಳ್ಳಿ ಗ್ರಾಮದವರಾದ ಈ ಟೈಲರ್ ಈ ಹಿಂದೆ ರೀಚ್ ಎಂಬ ಸ್ವಯಂ ಸೇವಾ ಸಂಸ್ಥೆಯಲ್ಲಿದ್ದು ಸಮಾಜಮುಖಿ ಕಾರ್ಯ ಮಾಡಿದ್ದಾರೆ. ಒಂದು ರಾಖಿಗೆ 12 ರು.ಗಳೆಂದರೂ 1 ಸಾವಿರ ರಾಖಿಗೆ ಅಂದಾಜು 12 ಸಾವಿರ ರೂ.ಗಳು ತಗುಲುತ್ತವೆ. ಈ ಸಂದರ್ಭದಲ್ಲಿ ಟೈಲರ್ ನಿಂದ ರಾಖಿ ಸ್ವೀಕರಿಸಿದ ನೇತ್ರ ತಜ್ಞರಾದ ಡಾ.ಸಂಗೀತಾ ಭಾಗವತ್ ಅವರು ಮಾರಕಟ್ಟೆಯಲ್ಲಿ ಭಿನ್ನವಾದ ರಾಖಿಗಳು, ದುಬಾರಿ ಬೆಲೆಯಲ್ಲಿ ದೊರೆಯುತ್ತವೆ. ಆದರೆ, ಟೈಲರ್ ಹಾಗೂ ಅವರ ಕುಟುಂಬದವರು ದೇಶಿಯವಾಗಿ ತಯಾರು ಮಾಡಲಾದ ರಾಖಿಗಳನ್ನು ಉಚಿತವಾಗಿ, ಅದರಲ್ಲೂ ಕೊರೊನಾ ವಾರಿಯರ್ಸ್ ಗಳಿಗೆ ವಿತರಣೆ ಮಾಡಿರುವುದು ಖುಷಿ ಕೊಡುವುದರ ಜೊತೆಗೆ ಅರ್ಥ ಪೂರ್ಣವಾಗಿದೆ ಎಂದು ಹೇಳಿದರು.