ವ್ಯಾಪಾರ ವಹಿವಾಟಿಗೆ ವಿಧಿಸಿದ್ದ ಸಮಯ ನಿರ್ಬಂಧ ಸಡಿಲ

ವ್ಯಾಪಾರ ವಹಿವಾಟಿಗೆ ವಿಧಿಸಿದ್ದ ಸಮಯ ನಿರ್ಬಂಧ ಸಡಿಲ - Janathavani

ಹರಿಹರ, ಆ.4- ನಗರದಲ್ಲಿ ವ್ಯಾಪಾರ ವಹಿವಾಟು ಅವಧಿಯನ್ನು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಸಮಯ ನಿಗದಿ ಮಾಡಲಾಗಿತ್ತು. ಸೋಮವಾರದಿಂದ ನಿರ್ಬಂಧಗಳನ್ನು ಸಡಿಲಗೊಳಿಸಿ ಮೊದಲಿನಂತೆ ವ್ಯಾಪಾರ ವಹಿವಾಟು ಮಾಡಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಶಾಸಕ ಎಸ್. ರಾಮಪ್ಪ ತಿಳಿಸಿದರು. 

ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಕೊರೊನಾ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರದ ಆದೇಶ ಇದೆ ಎಂದು ಕಂಡ ಕಂಡ ವ್ಯಕ್ತಿಗಳಿಗೆ ತಪಾಸಣೆ ಮಾಡಿ ಕೊರೊನಾ ಬಂದಿದೆ ಎಂದು ಕರೆದುಕೊಂಡು ಹೋಗುವುದನ್ನು ಕೈ ಬಿಡಬೇಕು. ಕಂಟೈ ನ್ಮೆಂಟ್ ಝೋನ್‌ಗಳೆಂದು ಬಡಾವಣೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರು ಓಡಾಡದಂತೆ ಬ್ಯಾರಿಕೇಟ್ ಹಾಕುವುದು ಸರಿಯಾದ ಕ್ರಮವಲ್ಲ. ಯಾವ ವ್ಯಕ್ತಿಗೆ ಕೊರೊನಾ ರೋಗ ಬಂದಿರುತ್ತದೆ ಅವರ ಮನೆಯನ್ನು ಮಾತ್ರ ಸೀಲ್ ಡೌನ್ ಮಾಡುವಂತೆ ಹೇಳಿದರು.

ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ದಿನದ ಇಪ್ಪತ್ತುನಾಲ್ಕು ಗಂಟೆಗಳ ಸಮಯದಲ್ಲಿ ಸಾರ್ವಜನಿಕರಿಗೆ ನಿರಂತರವಾಗಿ ಸೇವೆಗಳನ್ನು ಒದಗಿಸಲು ವೈದ್ಯರು ಮುಂದಾಗಬೇಕು. ಮತ್ತು ಕಾಟಾಚಾರದ ಚಿಕಿತ್ಸೆ ನೀಡದೆ, ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಕೆಲವು ಕೊರೊನಾ ರೋಗದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಎರಡು ಮೂರು ಮಾತ್ರೆಗಳನ್ನು ನೀಡಿ ಮನೆಗಳಿಗೆ ವಾಪಸ್ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ ಸರಿಯಾದ ರೀತಿಯಲ್ಲಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಹೇಳಿದರು.

ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಕೆಲಸ ಕಾರ್ಯ ನಿರ್ವಹಿಸಲು 3 ಬಾಡಿಗೆ ವಾಹನ ಬಳಕೆ ಮಾಡಿದ್ದು, ಇದಕ್ಕೆ 1 ಲಕ್ಷದ 87 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಊಟದ ವ್ಯವಸ್ಥೆ ಬಿ.ಸಿ.ಎಂ ಹಾಸ್ಟೆಲ್‌ನವರು, ಶಾಮಿಯಾನ, ತಗಡು, ಕುರ್ಚಿಗಳ ಪೂರೈಕೆಯನ್ನು ನಗರಸಭೆ, ವಹಿಸಿಕೊಂಡಿದ್ದು ಬ್ಯಾರಿಕೇಡ್‌ಗಳನ್ನು  ಪೊಲೀಸ್ ಇಲಾಖೆ ವಹಿಸಿಕೊಂಡಿದೆ. ತಪಾಸಣೆ ಖರ್ಚು ಆರೋಗ್ಯ ಇಲಾಖೆಯು ನೋಡಿಕೊಳ್ಳುತ್ತಿದೆ.  ಕೊರೊನಾ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.

ಸಿಪಿಐ ಎಸ್ ಶಿವಪ್ರಸಾದ್ ಮಾತನಾಡಿ ಕೆಲವು ಬಡಾವಣೆಯಲ್ಲಿ ವ್ಯಕ್ತಿಗೆ ಕೊರೊನಾ ಬಂದಿದ್ದರು ಸಹ ಅಂತಹ ವ್ಯಕ್ತಿಗಳ ಮಾಹಿತಿಯನ್ನು ಮುಚ್ಚಿಡುವ ಕೆಲಸವನ್ನು ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಅದನ್ನು ಮಾಡಬಾರದು. ಇಲಾಖೆಯ ಜೊತೆಗೆ ಕೈ ಜೋಡಿಸುವ ಮೂಲಕ ಕೊರೊನಾ ರೋಗ ಲಕ್ಷಣಗಳು ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ತಡೆಯಲು ಸಹಕರಿಸುವಂತೆ ಕೋರಿದರು. 

ನಗರಸಭೆ ಪೌರಾಯುಕ್ತರಾದ ಎಸ್. ಲಕ್ಷ್ಮೀ ಮಾತನಾಡಿ, ನಗರದ ಹಲವಾರು ವಾರ್ಡ್‌ಗಳಲ್ಲಿ ಸಾರ್ವಜನಿಕರಿಗೆ ತಪಾಸಣೆ ಮಾಡಲಾಗುತ್ತದೆ. ಆದರೆ, ಅಲ್ಲಿನ ಟಾಸ್ಕ್‌ಪೋರ್ಸ್‌ ಸಮಿತಿಯ ಸದಸ್ಯರು ಸರಿಯಾಗಿ ಸ್ಪಂದಿಸುವ ಕೆಲಸವನ್ನು ಮಾಡುತ್ತಿಲ್ಲ. ಇನ್ನೂ ಮುಂದೆ ಹಾಗಾಗದಂತೆ ವಾರ್ಡ್ ಸದಸ್ಯರು ಸಹಕರಿಸಲು ವಿನಂತಿ ಮಾಡಿಕೊಂಡರು.

ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವೇಳೆ ಬಹಳ ದೊಡ್ಡ ಮಟ್ಟದಲ್ಲಿ ತಾರತಮ್ಯವನ್ನು ಮಾಡುತ್ತಿದ್ದಾರೆ. ಅಲ್ಲಿ ಸಾರ್ವಜನಿಕರಿಗೆ ಯಾವ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿ ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು. 

ಆರೋಗ್ಯ ಇಲಾಖೆ ಡಾ. ಚಂದ್ರಮೋಹನ್, ಡಾ. ಹನುಮನಾಯ್ಕ್ , ಸಮಾಜ ಕಲ್ಯಾಣ ಇಲಾಖೆ ಪರಮೇಶ್ವರಪ್ಪ, ಹಲಸಬಾಳು ಬಸವರಾಜಪ್ಪ, ಎಂ. ಬಿ. ಅಭಿದಾಲಿ, ಇತರರು ಹಾಜರಿದ್ದರು. 

error: Content is protected !!