ಭದ್ರಾ ಚಾನಲ್‌ಗೆ ನೀರು ಬಿಡದಂತೆ ಅಡಿಕೆ ಬೆಳೆಗಾರರ ಲಾಬಿ

ದಾವಣಗೆರೆ, ಆ.2- ಅಡಿಕೆ ಬೆಳೆಗಾರರ ಲಾಬಿಗೆ ಮಣಿಯುತ್ತಿರುವ ಅಧಿಕಾರಿಗಳು ಹೇಳಿಕೆಗಳನ್ನು ನೀಡುವ ಮೂಲಕ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ರೈತ ಮುಖಂಡ ಹೆಚ್.ಆರ್. ಲಿಂಗರಾಜ್ ಆರೋಪಿಸಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಜಲಾಶಯ ಭರ್ತಿಯಾಗಲು 71.535 ಟಿಎಂಸಿ ನೀರು ಬೇಕು. ಸದ್ಯ 37.64 ಟಿಎಂಸಿ ನೀರು ಸಂಗ್ರಹವಾಗಿದೆ. ಕುಡಿಯುವ ನೀರಿಗೆ 1.5 ಟಿಎಂಸಿ ನೀರು ಮೀಸಲಿಟ್ಟರೂ ಲೈವ್ ಸ್ಟೋರೇಜ್ 25 ಟಿಎಂಸಿ ನೀರು ಲಭ್ಯವಿರಲಿದೆ.

ಭದ್ರಾ ಇಲಾಖೆ ಇಂಜಿನಿಯರ್ ಗಳಿಗೆ ನೀರು ನಿರ್ವಹಣೆಯ ಒಂದಿಷ್ಟೂ ಅರಿವಿಲ್ಲ. ಪ್ರತಿ ವರ್ಷ ಆಗಸ್ಟ್ ತಿಂಗಳಿನಲ್ಲಿಯೇ ಉತ್ತಮ ಮಳೆಯಾಗಿ ಜಲಾಶಯಕ್ಕೆ ಹೆಚ್ಚು ನೀರು ಸಂಗ್ರಹವಾಗುತ್ತದೆ. ಆದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಿನ ತೊಂದರೆಯಾಗದು. ಆದರೆ ಅಧಿಕಾರಿಗಳು ಮಾತ್ರ ನೀರು ಸಿಗುವುದಿಲ್ಲ ಎಂದು ಭಯವನ್ನು ರೈತರಲ್ಲಿ ಹುಟ್ಟಿಸುತ್ತಿದ್ದಾರೆ ಎಂದರು.

ಈಗಾಗಲೇ ಈ ಭಾಗದಲ್ಲಿ ಶೇ.25ರಷ್ಟು ನಾಟಿ ಮುಗಿದಿದೆ. ರೈತರು ಗೊಂದಲಕ್ಕೆ ಒಳಗಾಗದೆ ಎಲ್ಲರೂ ನಾಟಿ ಕಾರ್ಯ ಪೂರೈಸಲಿ. ಅಧಿಕಾರಿಗಳು ಕೊನೆ ಭಾಗಗಳಿಗೂ ನೀರು ಕೊಡುವ ಕೆಲಸ ಮಾಡಲಿ ಎಂದು ಹೇಳಿದರು.

ರೈತ ಮುಖಂಡ ನಾಗೇಶ್ವರರಾವ್ ಮಾತನಾಡಿ, ಅಧಿಕಾರಿಗಳು ಒಂದು ವೇಳೆ ಭತ್ತದ ಬೆಳೆಗೆ ನೀರು ಹರಿಸದೇ ಇದ್ದರೆ ನಾವೇ ಗೇಟ್ ಓಪನ್ ಮಾಡಿ ನೀರು ತರುತ್ತೇವೆ ಎಂದು ಎಚ್ಚರಿಸಿದರು. ಅಕ್ರಮ  ಪಂಪ್ ಸೆಟ್ ತೆರವು ವಿಚಾರದಲ್ಲಿ ಪೊಲೀಸರು, ವಿದ್ಯುತ್ ಇಲಾಖೆ ಅಧಿಕಾರಿಗಳು ಹಾಗೂ  ಭದ್ರಾ ಇಲಾಖೆ ಇಂಜಿನಿಯರ್‌ಗಳು ಕಳ್ಳ-ಪೊಲೀಸ್ ಆಟವಾಡುತ್ತಿದ್ದಾರೆ. ಅಕ್ರಮ ಪಂಪ್ ಸೆಟ್ ಹಾಕಿಸಿರುವವರ ಒಂದು ಟಿಸಿ ಸುಟ್ಟರೆ 24 ಗಂಟೆಯಲ್ಲಿಯೇ ರಿಪೇರಿ ಮಾಡುತ್ತಾರೆ. ಆದರೆ, ಬೇರೆ ರೈತರ ಟಿಸಿ ಸುಟ್ಟರೆ ತಿಂಗಳುಗಟ್ಟಲೇ ಕಾಯಬೇಕು. ಎಲ್ಲರೂ ಅಡಿಕೆ ಬೆಳೆಗಾರರ ಪ್ರಭಾವಕ್ಕೆ ಮಣಿದಿದ್ದಾರೆ ಎಂದರು.

error: Content is protected !!