ದಾವಣಗೆರೆ, ಆ.3- ಅಯೋಧ್ಯೆಯಲ್ಲಿ ನಾಡಿದ್ದು ದಿನಾಂಕ 5 ರ ಬುಧವಾರ ಪ್ರಧಾನಿ ನರೇಂದ್ರ ಮೋದಿ ಶ್ರೀರಾಮ ಮಂದಿರದ ಭೂಮಿ ಪೂಜೆ ನೆರವೇರಿಸಲಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ನಗರದ ಶ್ರೀರಾಮ ಮಂದಿರದಲ್ಲಿ ಬುಧವಾರ ಬೆಳಿಗ್ಗೆ 8 ಕ್ಕೆ ವಿಶೇಷ ಪೂಜೆ ನಡೆಸಲಾಗುವುದು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ತಿಳಿಸಿದ್ದಾರೆ.
ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಂದು ಶ್ರೀರಾಮನ ಮೂರ್ತಿಗೆ ಅಭಿಷೇಕ ಹಾಗೂ ಪೂಜೆ ಸಲ್ಲಿಸಿ, ನಾಡಿಗೆ ಸೇವೆ ಸಲ್ಲಿಸಿದ ಹುತಾತ್ಮರುಗಳಾದ ಸಂಗೊಳ್ಳಿ ರಾಯಣ್ಣ, ಜಗಜ್ಯೋತಿ ಬಸವೇಶ್ವರ, ರಾಜವೀರ ಮದಕರಿನಾಯಕ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಶಿವಾಜಿ ವೃತ್ತದಲ್ಲಿರುವ ಶ್ರೀ ರಾಮಮೂರ್ತಿಗೆ ಪೂಜೆ ಸಲ್ಲಿಸಿ, ಭಕ್ತರಿಗೆ ಸಿಹಿ ಹಂಚಲಾಗುವುದು ಎಂದು ಹೇಳಿದರು.
ಅಯೋಧ್ಯೆಗೆ 15 ಕೆಜಿ ಬೆಳ್ಳಿ ಇಟ್ಟಿಗೆ : ಅಕ್ಟೋಬರ್ 6ಕ್ಕೆ ದಾವಣಗೆರೆಗೆ ರಥಯಾತ್ರೆ ಆಗಮಿಸಿ 30 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ಯಿಂದ 15 ಕೆ.ಜಿ. ಬೆಳ್ಳಿ ಇಟ್ಟಿಗೆಯನ್ನು ಅಯೋಧ್ಯೆಗೆ ಕಳುಹಿಸಿಕೊಡ ಲಾಗುವುದು ಎಂದು ಜಾಧವ್ ಹೇಳಿದರು.
1990 ಅಕ್ಟೋಬರ್ 6 ರಂದು ಶ್ರೀರಾಮ ಜ್ಯೋತಿ ಮೆರವಣಿಗೆ ಸಂದರ್ಭದಲ್ಲಿ ಗೋಲಿಬಾರ್ಗೆ ತುತ್ತಾಗಿ ಹುತಾತ್ಮರಾದ ಚಂದ್ರಶೇಖರ್ ರಾವ್ ಶಿಂಧೆ, ಶಿವಾಜಿರಾವ್ ಘಾಟ್ಗೆ, ಆರ್.ಜಿ. ಶ್ರೀನಿವಾಸ ರಾವ್, ಪಿ.ರಾಮಕೃಷ್ಣ ಸಾವಳಗಿ, ಎಲೆಬೇತೂರು ದುರುಗಪ್ಪ, ಹಮಾಲಿ ಚಿನ್ನಪ್ಪ, ಅಂಬರೀಷ, ಹೆಚ್.ನಾಗರಾಜ್ ಇವರುಗಳ ಹೆಸರನ್ನು ಬೆಳ್ಳಿ ಇಟ್ಟಿಗೆಯ ಮೇಲೆ ಬರೆಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗೋಲಿಬಾರ್ಗೆ ತುತ್ತಾಗಿ ಗಾಯಗೊಂಡ 72 ರಾಮಭಕ್ತರ ಕುಟುಂಬಕ್ಕೆ ಹಿಂದೂ ಸಂಘಟನೆಗಳ ಮೂಲಕ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಬೆಳ್ಳಿ ಇಟ್ಟಿಗೆ ಹಾಗೂ ಕಾರ್ಯಕ್ರಮಕ್ಕೆ ಯಾರಿಂದಲೂ ದೇಣಿಗೆ ಸಂಗ್ರಹಿಸುವುದಿಲ್ಲ. ಆದರೆ ಸ್ವಯಂ ಪ್ರೇರಿತರಾಗಿ ನೀಡುವವರು ಹಣ ನೀಡಬಹುದಾಗಿದೆ ಎಂದು ಜಾಧವ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಿ.ಸಿ. ಮಹಾ ಭಲೇಶ್, ಪಿ.ಸಿ. ಶ್ರೀನಿವಾಸ್, ಶಿವಪ್ರಕಾಶ್, ರಾಜು, ರಾಕೇಶ್ ಜಾಧವ್ ಉಪಸ್ಥಿತರಿದ್ದರು.