ಕಲಿಕೆಯಲ್ಲಿ ನಿರಂತರ ಪ್ರಯತ್ನವಿದ್ದರೆ ಯಶಸ್ಸು ಸಾಧ್ಯ

ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅಭಿಮತ

ದಾವಣಗೆರೆ, ನ. 8- ಯಾವುದೇ ಕಲಿಕೆಯಾಗಲೀ ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷರೂ, ಹಿರಿಯ ಗಾಯಕರೂ ಆದ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಪ್ರತಿಪಾದಿಸಿದರು.

ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಮತ್ತು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಇವರ ಜಂಟಿ ಆಶ್ರಯದಲ್ಲಿ ನಗರದ ಆರ್.ಎಚ್. ಗೀತಾ ಮಂದಿರದಲ್ಲಿ ಇಂದು ನಡೆದ ಫೇಸ್‍ಬುಕ್‍ಗಾಗಿ ಗೀತ ಗಾಯನ ತರಬೇತಿ ಶಿಬಿರದ ಚಿತ್ರೀಕರಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗಷ್ಟೇ ಸೀಮಿತವಾಗಿರದೇ ಅದು ನಿತ್ಯೋತ್ಸವ ಆಗಬೇಕು. ಆಗ ಕನ್ನಡ ಭಾಷೆಯನ್ನು ಬೆಳೆಸಿ, ಉಳಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟ ಅವರು, ಹಿರಿಯ ಗಾಯಕ, ಸಂಗೀತ ನಿರ್ದೇಶಕ ಸಿ. ಅಶ್ವತ್ಥ್ ನಾಡಿನ ದೇಶದ ಮೂಲೆ ಮೂಲೆಗಳನ್ನು ತಿರುಗಿ ಸುಗಮ ಸಂಗೀತ ಬೆಳೆಸಲು ಶ್ರಮಿಸಿದ್ದಾರೆ. ಅಂತಹ ವ್ಯಕ್ತಿಗಳನ್ನು ನಾವೆಂದೂ ಮರೆಯುವಂತಿಲ್ಲ ಎಂದು ಹೇಳಿದರು.

ಹರಿಹರದ ಶಂಕರ ಸಂಗೀತ ಪಾಠಶಾಲೆ ಪ್ರಾಚಾರ್ಯರಾದ ಮಾಧುರಿ ಶೇಷಗಿರಿ ಮಾತನಾಡಿ, ನಮ್ಮ ಮನಸ್ಸಿಗೆ ನೋವಾದಾಗ ಆಸಕ್ತಿಯಿಂದ ಸಂಗೀತ, ಭಗವಂತನ ಹಾಡುಗಳನ್ನು ಕೇಳಿದಾಗ ಮನಸ್ಸಿಗೆ ಉಲ್ಲಾಸ, ಶಾಂತಿ, ನೆಮ್ಮದಿ ಸಿಗುತ್ತದೆ. ಅಂತಹ ಅಮೃತವನ್ನು ಗೀತ ಗಾಯನ ಶಿಬಿರ ಕೊಡುತ್ತಾ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ಸಾಲಿಗ್ರಾಮ ಗಣೇಶ ಶೆಣೈ, ಗಾನಶ್ರೀ ಸ್ವರಾಲಯದ ಪ್ರಾಚಾರ್ಯರಾದ ವಿದುಷಿ ಸಂಗೀತ ರಾಘವೇಂದ್ರ, ಕಲಾಕುಂಚ ಸಂಸ್ಥೆ ಅಧ್ಯಕ್ಷ ಕೆ.ಎಚ್.ಮಂಜುನಾಥ, ಲಿಖಿತ್ ಕೃಷ್ಣ, ಶ್ರೀಧರ, ಮದನ್‍ಕುಮಾರ್, ಜ್ಯೋತಿ ಗಣೇಶ್ ಶೆಣೈ, ನೀಲಾವರ ಭಾಸ್ಕರ ನಾಯಕ್, ಬೇಳೂರು ಸಂತೋಷಕುಮಾರ ಶೆಟ್ಟಿ, ಶೈಲಾ ವಿಜಯಕುಮಾರ್  ಮತ್ತಿತರರು ಪಾಲ್ಗೊಂಡಿದ್ದರು.

 

error: Content is protected !!