ಶಿವಸಿಂಪಿ ಸಮಾಜದ ಸಾಮಾಜಿಕ ನ್ಯಾಯಕ್ಕೆ ನಾಯಕತ್ವ ಅಗತ್ಯವಿದೆ : ಬಸವಪ್ರಭು ಶ್ರೀ

ಶಿವಸಿಂಪಿ ಸಮಾಜದ ಸಾಮಾಜಿಕ ನ್ಯಾಯಕ್ಕೆ ನಾಯಕತ್ವ ಅಗತ್ಯವಿದೆ : ಬಸವಪ್ರಭು ಶ್ರೀ - Janathavaniದಾವಣಗೆರೆ, ನ.8- ಸಂಘಟನೆಯಿಂದ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ಸಮಾಜಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ದೊರೆಯಲು ಸಾಧ್ಯ ಎಂದು ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಶಿವಸಿಂಪಿ ಸಮಾಜದ ವತಿಯಿಂದ ಸಮಾಜದ ಕಚೇರಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸರಳ ಕನ್ನಡ ರಾಜ್ಯೋತ್ಸವ, ಮುರುಘಾ ಶ್ರೀ ಪ್ರಶಸ್ತಿಗೆ ಭಾಜನರಾದ ಚಿತ್ರದುರ್ಗದ ಷಣ್ಮುಖಪ್ಪ ಅವರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ನಿಮ್ಮ ಕಾಯಕ ಸೂಜಿ ಕಾಯಕ. ಆ ಸೂಜಿ ಕಾಯಕದಂತೆ ಕೆಲಸ ಮಾಡಿ ಒಗ್ಗಟ್ಟಾದಾಗ, ಸುಂದರ ಸಮಾಜ ರೂಪುಗೊಳ್ಳುತ್ತದೆ. ಗುಂಪುಗಾರಿಕೆ ಯಿಂದ ಸಮಾಜ ಹಿನ್ನೆಡೆಯಾಗಲಿದೆ. ಅದಕ್ಕಾಗಿ ಒಬ್ಬ ನಾಯಕ ಬೇಕು. ಆ ನಾಯಕತ್ವ ಸಾಮರ್ಥ್ಯ  ಷಣ್ಮುಖಪ್ಪ ಅವರಲ್ಲಿ ಇದೆ. ಆದ್ದರಿಂದಲೇ ಮುರುಘಾ ಶರಣರು ಮುರುಘಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಎಂದು ಹೇಳಿದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಷಣ್ಮುಖಪ್ಪ ಅವರು, ಎಸ್. ನಿಜಲಿಂಗಪ್ಪ ಅವರು ದಾವಣಗೆರೆಯನ್ನು ರಾಜಧಾನಿ ಮಾಡಲು ಸಂಸತ್ತಿನಲ್ಲಿ ಮಂಡಿಸಿದಾಗ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತರಾಯ ಬೆಂಗಳೂರನ್ನು  ರಾಜಧಾನಿಯಾಗಿ ಮಾಡಿದರು. ಇಲ್ಲದಿದ್ದರೆ ದಾವಣಗೆರೆ ರಾಜಧಾನಿಯಾಗಿರುತ್ತಿತ್ತು ಎಂದರು. 

ಶಿವಸಿಂಪಿ ಸಮಾಜದಲ್ಲಿ ಎಲ್ಲರೂ ನಾಯಕರುಗಳಾಗಿ ಗುಂಪುಗಾರಿಕೆ ನಡೆಯುತ್ತಿದೆ. ಹೇಳಿದ ಮಾತುಗಳನ್ನು ಕೇಳುತ್ತಿಲ್ಲ. ಹಾಗಾಗಿ ಸಮಾಜ ಹಿನ್ನಡೆ ಕಾಣುತ್ತಿದೆ. ಇದಕ್ಕೆ ಒಬ್ಬ ಉತ್ತಮವಾದ ನಾಯಕ ಬೇಕು. ನಾಯಕರೂ ಸಹ ಸಾಮಾನ್ಯ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಸಮಾಜವನ್ನು ಮುನ್ನಡೆಸಿಕೊಂಡು ಹೋಗಲು ಸಾಧ್ಯ. ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಿಗಲಿವೆ. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಹೋಗೋಣವೆಂದರು.

ಶ್ರೀಗಳು ನನಗೆ ಪ್ರಶಸ್ತಿ ನೀಡುವುದಾಗಿ ಹೇಳಿದಾಗ ನಾನು ಬೇಡವೆಂದೆ. ಆದರೂ ಸಹ ಶ್ರೀಗಳು ಒತ್ತಾಯ ಮಾಡಿ ಪ್ರಶಸ್ತಿ ನೀಡಿದ್ದಾರೆ. ಈ ಪ್ರಶಸ್ತಿ ನನಗಲ್ಲ ನಮ್ಮ ಸಮಾಜಕ್ಕೆ ಸಿಕ್ಕ ಗೌರವವಾಗಿದೆ. ಈ ಪ್ರಶಸ್ತಿಯಿಂದ ನನಗೆ ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಿದಂತಾಗಿದೆ ಎಂದರು.

ಕಾರ್ಯದರ್ಶಿ ಪ್ರಕಾಶ್ ಬೂಸ್ನೂರ್  ಮಾತನಾಡಿ, ಕನ್ನಡಿಗರಿಗೆ ಇನ್ನೂ ಸಹ ಕೆಲವೆಡೆ ಸೌಲಭ್ಯಗಳು ಸಿಗುತ್ತಿಲ್ಲ. ಬ್ಯಾಂಕ್ ಸೇರಿದಂತೆ ಹಲವೆಡೆ ಕನ್ನಡದಲ್ಲೇ ವ್ಯವಹಾರಗಳು ನಡೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಗೌರವ ಅಧ್ಯಕ್ಷ ಗುರುಬಸಪ್ಪ ಬೂಸ್ನೂರ್ ಮಾತನಾಡಿದರು. ಸಾವಳಗಿ ಫಾರ್ಮದ ಜಗದೀಶ್ ಮಾಸ್ಕ್ ವಿತರಣೆ ಮಾಡಿದರು. 

ಸುಜಾತಮ್ಮ ಪ್ರಾರ್ಥಿಸಿದರು. ಜ್ಞಾನೇಶ್ವರ್ ಜವಳಿ  ನಿರೂಪಿಸಿದರು, ಜಗದೀಶ್ ಬಾವಿಕಟ್ಟಿ ವಂದಿಸಿದರು.

 

error: Content is protected !!