ಮುಚ್ಚಿರುವ ಶಾಲಾ ಕೊಠಡಿಗಳಿಂದ ತೆರೆದ ಆನ್‌ಲೈನ್ ತರಗತಿಗಳು

ದಾವಣಗೆರೆ, ಆ.1- ಕಳೆದ ನಾಲ್ಕು ತಿಂಗಳಿನಿಂದ ಕೋವಿಡ್-19 ಕಾರಣದಿಂದ ಮಕ್ಕಳು ಮನೆಯಲ್ಲೇ ಲಾಕ್‌ಡೌನ್ ಆಗಿದ್ದಾರೆ. ಕೆಲವರ ಮನೆಗಳು ಸೀಲ್‌ಡೌನ್ ಆಗಿವೆ.

ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆ `ಮುಚ್ಚಿರುವ ಶಾಲಾ ಕೊಠಡಿಗಳ ಮೂಲಕ ಆನ್‌ಲೈನ್ ತರಗತಿ’ ಗಳನ್ನು ಮಕ್ಕಳಿಗೆ ತಲುಪಿಸಿ ಅವರ ಶೈಕ್ಷಣಿಕ ಚಟುವಟಿಕೆಗಳು ಕುಂಠಿತವಾಗದಂತೆ ವ್ಯವಸ್ಥೆ ಮಾಡುತ್ತಿದೆ.

ನಗರದ ಸಿದ್ಧಗಂಗಾ ಸ್ಕೂಲ್ ಯೂಟ್ಯೂಬ್ ಚಾನೆಲ್ ಮೂಲಕ ಇಲ್ಲಿಯವರೆಗೆ 1300 ವೀಡಿಯೋಗಳನ್ನು ಮಕ್ಕಳ ವಾಟ್ಸಾಪ್ ಗ್ರೂಪ್‌ಗಳಿಗೆ ಕಳಿಸಿದ್ದಾರೆ. ದ್ವಿತೀಯ ಪಿ.ಯು.ಸಿಯ 417 ಪ್ರಥಮ ಪಿ.ಯು.ಸಿಯ 179, 10ನೇ ತರಗತಿಯ 243, 9ನೇ ತರಗತಿಯ 139, 8ನೇ ತರಗತಿಯ 25  ವಿಡಿಯೋಗಳನ್ನು ಮಕ್ಕಳು ಇಲ್ಲಿಯವರೆಗೆ ವೀಕ್ಷಿಸಿದ್ದಾರೆ. ಸೋಮವಾರದಿಂದ 6 ಮತ್ತು 7ನೇ ತರಗತಿಗಳಿಗೆ ಪಾಠಗಳು ರವಾನೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಎಲ್‌ಕೆಜಿಯಿಂದ 5ನೇ ತರಗತಿ ಮಕ್ಕಳಿಗೂ ಇದನ್ನು ವಿಸ್ತರಿಸುವ ಯೋಜನೆ ಇದೆ ಎಂದು ಸಂಸ್ಥೆ ನಿರ್ದೇಶಕ ಡಾ. ಜಯಂತ್ ತಿಳಿಸುತ್ತಾರೆ.

ನಿಗದಿತ ಸಮಯದಲ್ಲಿ ಪ್ರಸಾರವಾಗುವ ಈ ವಿಡಿಯೋಗಳನ್ನು ತಮ್ಮ ಶಾಲೆಯ ಮಕ್ಕಳಲ್ಲದೆ, ಕರ್ನಾಟಕದಾದ್ಯಂತ ಎಲ್ಲ ಮಕ್ಕಳೂ ವೀಕ್ಷಿಸಬಹುದಾಗಿದೆ. ರಾಜ್ಯ ಪಠ್ಯಕ್ರಮದ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಹಾಗೂ ಕೇಂದ್ರ ಪಠ್ಯಕ್ರಮದಲ್ಲಿ ತರಗತಿಗಳು ನಡೆಯುತ್ತಿವೆ. ಮಕ್ಕಳಿಗೆ ಟೆಸ್ಟ್ ಕೊಡುವ, ಗೃಹಪಾಠ ಕೊಡುವ ವ್ಯವಸ್ಥೆಯೂ ಇದೆ ಎಂದು ಸಂಸ್ಥೆ ಕಾರ್ಯದರ್ಶಿ ಹೇಮಂತ್‌ ಹೇಳುತ್ತಾರೆ.

ಸಾಫ್ಟ್‌ವೇರ್ ಇಂಜಿನಿಯರ್ ಪ್ರಶಾಂತ್‌ ನೇತೃತ್ವದಲ್ಲಿ ಎಂಟು ಜನರ ತಂಡ 8 ಸ್ಟುಡಿಯೋಗಳಲ್ಲಿ ನಿರಂತರ ಕಾರ್ಯನಿರ್ವಹಿಸುತ್ತಿದ್ದಾರೆ. ಅನುಭವಿ ಪ್ರಾಧ್ಯಾಪಕರು, ಶಿಕ್ಷಕರು ಬೋಧನಾ ಕಾರ್ಯದಲ್ಲಿ ನಿರತರಾಗಿದ್ದಾರೆ.ಆನ್‌ಲೈನ್ ಪಾಠಗಳು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯ ಎನ್ನುತ್ತಾರೆ ಸಂಸ್ಥೆಯ ಪ್ರಾಚಾರ್ಯೆ ಗಾಯತ್ರಿ ಚಿಮ್ಮದ್ ಹಾಗೂ ಮುಖ್ಯಶಿಕ್ಷಕಿ ರೇಖಾರಾಣಿ ಅವರು.

ಶಾಲೆಗಳು ನಡೆಯುವಾಗ ಯಾವ ಮಕ್ಕಳಿಗೆ ನಾವು ಮೊಬೈಲ್ ಮುಟ್ಟಬೇಡಿ, ನೋಡಬೇಡಿ ಎಂದು ತಾಕೀತು ಮಾಡುತ್ತಿದ್ದೆವೋ ಅದೇ ಮಕ್ಕಳಿಗೆ ಈಗ ಸ್ಮಾರ್ಟ್‌ಫೋನ್‌ ಮೂಲಕ ಪಾಠ ನೋಡಿ ಎಂದು ಹೇಳುವ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ. ಮಕ್ಕಳ ಸಂತೋಷ ಕಸಿದಿರುವ ಕೊರೊನಾದಿಂದ ಬೇಗ ಮುಕ್ತಿ ಸಿಗಲಿ. ಶಾಲೆಯ ಬಾಗಿಲು ತೆರೆಯುವಂತಾಗಲಿ, ಅಂಗಳದಲ್ಲಿ ಮಕ್ಕಳ ಕಲರವ ಕೇಳಲಿ ಎಂದು ಅವರು ಆಶಿಸುತ್ತಾರೆ.

ಆನ್‌ಲೈನ್ ತರಗತಿಗಳಿಗೆ ಪೋಷಕರ ಬೆಂಬಲ ಮತ್ತು ಪ್ರೋತ್ಸಾಹವಿದೆ. ಈಗಾಗಲೇ 12 ಸಾವಿರಕ್ಕೂ ಹೆಚ್ಚು ಮಕ್ಕಳು ಸಿದ್ಧಗಂಗಾ ಸ್ಕೂಲ್ ದಾವಣಗೆರೆ ಯೂಟ್ಯೂಬ್ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿದ್ದಾರೆ. ಇಲ್ಲಿಯವರೆಗೆ 20 ಲಕ್ಷ ವೀಕ್ಷಣೆಯಾಗಿದೆ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಸಿದ್ಧಗಂಗಾ ಶಾಲೆಯ ಈ ಪ್ರಯತ್ನ ಹಲವಾರು ಶಾಲೆಗಳ ಮಕ್ಕಳ ವೀಕ್ಷಣೆಗೂ ಅನುವು ಮಾಡಿಕೊಟ್ಟಿದೆ. ಕೋವಿಡ್‌ನ ಏಕತಾನತೆಯಿಂದ ಮಕ್ಕಳು ಹೊರಬಂದು ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯೂ ಸಹ ಪಠ್ಯಪುಸ್ತಕಗಳ ಸರಬರಾಜು ಮಾಡಿರುವುದರಿಂದ `ಮಕ್ಕಳ ಇಸ್ಕೂಲ್ ಮನೇಲೇ’ ನಡೀತಿದೆ. ಚಂದನ ಟಿ.ವಿಯ ಮೂಲಕವೂ ಶಿಕ್ಷಣ ಇಲಾಖೆ ಉತ್ತಮ ಕಾರ್ಯ ಮಾಡುತ್ತಿದೆ.  ಕೆಲವು ಮಕ್ಕಳಿಗೆ ಸ್ಮಾರ್ಟ್‌ ಫೋನ್ ಇಲ್ಲದೆ ಪಾಠಗಳ ವೀಕ್ಷಣೆ ಸಾಧ್ಯವಾಗುತ್ತಿ ಲ್ಲವೆಂಬ ಅಸಹಾಯಕತೆಯನ್ನು ಪಾಲಕರು ಹೇಳಿಕೊಳ್ಳುತ್ತಿದ್ದಾರೆ. ಅಂತಹ ಕೆಲವು ಮಕ್ಕಳಿಗೆ ಶಾಲೆಯಿಂದ ಟ್ಯಾಬ್‌ಗಳನ್ನು ಕೊಡುತ್ತಿದ್ದೇವೆ. ಕೆಲ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಸಂಘಟಿಸಿರುವ `ನರ್ಚರ್’ ಸಂಸ್ಥೆಯವರು ತಮ್ಮ ಸಹೋದ್ಯೋಗಿಗಳಿಂದ ಹಳೆಯ ಉಪಯೋಗಿಸದ ಸ್ಮಾರ್ಟ್‌ಫೋನ್‌ಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಡಾ. ಜಯಂತ್‌ ಅವರು ತಮ್ಮ ಸಹಪಾಠಿಗಳಿಂದಲೂ ಈ ಮನವಿ ಮಾಡುತ್ತಿದ್ದಾರೆ. ಇದು ಫಲಪ್ರದವಾದರೆ ಆನ್‌ಲೈನ್ ಪಾಠಗಳಿಂದ ವಂಚಿತರಾಗುತ್ತಿರುವ ಮಕ್ಕಳಿಗೂ ಅವರ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಿದಂತಾಗುತ್ತದೆ.

error: Content is protected !!