ದಾವಣಗೆರೆ, ನ.5- ರೈತ, ಕಾರ್ಮಿಕ, ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಹಾಗೂ ರೈತ ಬೆಳೆಯುವ ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್ಸಿಸಿ) ಮತ್ತು ರೈತ ಐಕ್ಯತಾ ಹೋರಾಟ ಸಮಿತಿ ಜಂಟಿಯಾಗಿ ನಗರದಲ್ಲಿ ಇಂದು ಹೆದ್ದಾರಿ ತಡೆಯುವ ಮೂಲಕ ಪ್ರತಿಭಟನೆ ನಡೆಸಿದವು.
ಜಿಲ್ಲಾ ಪಂಚಾಯತಿ ಮುಂಭಾಗದಲ್ಲಿನ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಜಮಾಯಿಸಿದ್ದ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸುತ್ತಾ ಹೆದ್ದಾರಿ ತಡೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್, ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 1850 ರೂ. ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ವರ್ತಕರು, ದಲ್ಲಾಲರು 1050ರಿಂದ 1200 ರೂ.ನಂತೆ ಮೆಕ್ಕೆಜೋಳ ಖರೀದಿಸುತ್ತಿದ್ದಾರೆ. ರೈತರ ಶಾಲು ಹಾಕಿಕೊಂಡು ನಾನು ರೈತರ ಪರವಾಗಿದ್ದೇನೆಂದು ಮೊಸಳೆ ಕಣ್ಣೀರು ಸುರಿಸುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವರ್ತಕರನ್ನು ನಿಯಂತ್ರಿಸುವ ಶಕ್ತಿ ಇಲ್ಲವೇ. ಇನ್ನೂ ಮುಂದೆ ರೈತರ ಶಾಲು ಹಾಕಿಕೊಳ್ಳುವುದಾದರೆ ಸರ್ಕಾರ ನಿಗದಿ ಮಾಡಿರುವ ದರಕ್ಕೆ ಕೃಷಿ ಉತ್ಪನ್ನಗಳು ಖರೀದಿ ಆಗುವಂತೆ ನೋಡಿಕೊಳ್ಳಬೇಕು. ಕ್ವಿಂಟಾಲ್ ಮೆಕ್ಕೆಜೋಳಕ್ಕೆ 3500 ರೂ. ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿದರು.
ಸದನದಲ್ಲಿ ಯಾವುದೇ ರೀತಿಯ ಚರ್ಚೆ ನಡೆಸದೆಯೇ ಭೂ ಸುಧಾರಣಾ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯಪಾಲರ ಅಂಕಿತ ಹಾಕಿಸುವ ಮೂಲಕ ಆ ತಿದ್ದುಪಡಿಗಳನ್ನು ಹಿಂಬಾಗಿಲ ಮೂಲಕ ಜಾರಿ ಮಾಡಲು ಮುಂದಾಗಿರುವ ಸರ್ಕಾರದ ಅಪ್ರಜಾತಾಂತ್ರಿಕ ನೀತಿಯನ್ನು ರೈತರು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಆದ್ದರಿಂದ ತಕ್ಷಣವೇ ತಿದ್ದುಪಡಿಗಳನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಸುಮಾರು ವರ್ಷಗಳಿಂದ ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಆಧಾರದಲ್ಲಿ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ರೈತ ಸಂಘಟನೆಗಳು ಮನವಿ ಮಾಡುತ್ತಾ ಬಂದಿವೆ. ಆದರೂ, ಸರ್ಕಾರಗಳು ರೈತರ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.
ಕೋವಿಡ್ ಸಂದರ್ಭದಲ್ಲಿ ರೈತರು ಮತ್ತು ಜನರು ಸೇರದಿದ್ದ ಕಾರಣಕ್ಕೆ ಸರ್ಕಾರಗಳು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದವು. ಯಾವುದೇ ಕಾಯ್ದೆಗೆ ಬೇಕಾದರೆ ತಿದ್ದುಪಡಿ ತನ್ನಿ ರಾಷ್ಟ್ರೀಯ, ಅಂತರರಾಷ್ಟ್ರೀಯ ವರ್ತಕರಿಗೆ ಬೇಕಾದರೆ ಅವಕಾಶ ಮಾಡಿಕೊಡಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕನಿಷ್ಠ ಬೆಂಬಲ ಬೆಲೆ ಕಾಯ್ದೆಗೆ ಮಾನ್ಯತೆ ನೀಡಿ ಬೆಲೆ ನಿಗದಿ ಮಾಡಬೇಕೆಂದು ಆಗ್ರಹಿಸಿದರು.
ಎಐಕೆಎಸ್ನ ಜಿಲ್ಲಾಧ್ಯಕ್ಷ ಹೆಚ್.ಜಿ. ಉಮೇಶ್, ನಿಟ್ಟುವಳ್ಳಿ ಅಂಜಿನಪ್ಪ, ಹೊನ್ನೂರು ಮುನಿಯಪ್ಪ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಐರಣಿ ಚಂದ್ರು, ಕೆ. ಬಾನಪ್ಪ, ಆವರಗೆರೆ ಹನುಮಂತಪ್ಪ, ನಾಗೇಂದ್ರಪ್ಪ, ಬಲ್ಲೂರು ರವಿಕುಮಾರ್, ಸಿದ್ದೇಶ್ ಆನೆಕಲ್ಲು, ಪ್ರಸಾದ್, ಶೇಖರನಾಯ್ಕ, ತಿಪ್ಪೇಸ್ವಾಮಿ, ಅನಿಲ್ಕುಮಾರ್, ಶಿವಕುಮಾರ್, ಚಂದ್ರು, ಹನುಮಂತಪ್ಪ, ಭೀಮಾರೆಡ್ಡಿ, ಬಸವರಾಜ ರಾಮಪುರ, ಪಾಲವ್ವನಹಳ್ಳಿ ಪ್ರಸನ್ನಕುಮಾರ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.