ದುಡಿಮೆ ಇರಲಿ, ಪಾರ್ಕಿಂಗ್ ಜವಾಬ್ದಾರಿ ಬೇಡ !

ಪಾರ್ಕಿಂಗ್‌ಗೆ ಜಾಗ ಬಿಡದ ವಾಣಿಜ್ಯ ಸಂಕೀರ್ಣಗಳ ತೆರವು: ಜಿಲ್ಲಾಧಿಕಾರಿ ಎಚ್ಚರಿಕೆ

ದಾವಣಗೆರೆ, ನ. 5 – ದುಡಿಮೆ ಸ್ವಂತಕ್ಕೆ, ಸರ್ಕಾರಿ ಜಾಗ ಪಾರ್ಕಿಂಗ್‌ಗೆ. ವ್ಯಾಪಾರ ನಮಗೆ, ಅಂಗಡಿ ಮುಂದಿನ ಸಂಚಾರ ನಿಯಂತ್ರಣದ ಜವಾಬ್ದಾರಿ ಪೊಲೀಸರಿಗೆ ಎಂಬ ಪರಿಸ್ಥಿತಿ ನಗರದ ಕೆಲ ಪ್ರಮುಖ ವ್ಯಾಪಾರಿಗಳದ್ದಾಗಿದೆ ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಅತಿ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಕೆಲ ಅಂಗಡಿ ಹಾಗೂ ಹೋಟೆಲ್‌ಗಳು ವಾಹನ ನಿಲುಗಡೆ ಮತ್ತು ಸಂಚಾರ ನಿಯಂತ್ರಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದು ಸಂಚಾರಿ ಪೊಲೀಸರ ಮೇಲಿನ ಹೊರೆ ಹೆಚ್ಚಿಸುತ್ತಿದೆ. ಇದರ ಜೊತೆಗೆ ಪಿ.ಜೆ. ಬಡಾವಣೆಯಲ್ಲಿ ಮನೆಗಳನ್ನೇ ಕ್ಲಿನಿಕ್‌ಗಳಾಗಿ ಪರಿವರ್ತಿಸಿ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಹಾಗೂ ಟ್ಯಾಕ್ಸಿ ಡ್ರೈವರ್ ಸಂಘದ ಕೆ.ಡಿ. ದೀಕ್ಷಿತ್ ಆಕ್ಷೇಪಿಸಿದರು.

ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ವಾಣಿಜ್ಯ ಸಂಕೀರ್ಣಗಳನ್ನು ಕಟ್ಟಿಕೊಂಡವರು ಪಾರ್ಕಿಂಗ್‌ಗೆ ಜಾಗ ಬಿಡದೇ ಹೋದರೆ ವಾರದಲ್ಲೇ ಕಟ್ಟಡ ಕೆಡವುವ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಪಾರ್ಕಿಂಗ್ ಜಾಗ ಒತ್ತುವರಿ ಮಾಡಿಕೊಂಡವರು ತಕ್ಷಣವೇ ತೆರವುಗೊಳಿಸಬೇಕು. ಈ ಕ್ರಮಕ್ಕೆ ಪ್ರತ್ಯೇಕ ನೋಟಿಸ್ ನೀಡುವ ಅಗತ್ಯವೂ ಇಲ್ಲ. ಮಾಧ್ಯಮದ ಮೂಲಕ ನೀಡಿರುವ ಹೇಳಿಕೆಯನ್ನೇ ನೋಟಿಸ್ ಎಂದು ಪರಿಗಣಿಸಿ ಮಾಲೀಕರು ಕ್ರಮಕ್ಕೆ ಮುಂದಾಗಬೇಕು ಎಂದವರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಸಂಚಾರಕ್ಕೆ ಸಮಸ್ಯೆಯಾಗುವಂತೆ ವಾಣಿಜ್ಯ ಚಟುವಟಿಕೆ ನಡೆಸು ತ್ತಿರುವವರಿಗೆ ಈಗಾಗಲೇ ನೋಟಿಸ್ ಕಳಿಸಲಾಗಿದೆ. ಹೆಚ್ಚಿನ ಗ್ರಾಹಕರನ್ನು ಹೊಂದಿರುವವರು ಸ್ವಂತವಾಗಿ ಗಾರ್ಡ್‌ಗಳನ್ನು ನೇಮಿಸಿಕೊಳ್ಳಲು ಹಾಗೂ ಸಿಸಿಟಿವಿ ಅಳವಡಿಸಿಕೊಳ್ಳಲು ತಿಳಿಸಲಾಗಿದೆ ಎಂದರು.

ವಾರದ ಅಭಿಯಾನ : ಟ್ರ್ಯಾಕ್ಟರ್‌ಗಳು ಸೇರಿದಂತೆ ವಾಹನಗಳು, ಅಪಘಾತ ತಡೆಯಲು ರಿಫ್ಲೆಕ್ಟರ್‌ ಅಂಟಿಸಿಕೊಳ್ಳುವ, ಇಂಡಿಕೇಟರ್ ಇಲ್ಲವೇ ಲೈಟ್‌ಗಳನ್ನು ಹಾಕಿಕೊಳ್ಳಬೇಕು ಎಂದು ಸಭೆಗೆ ಆರ್.ಟಿ.ಒ. ಶ್ರೀಧರ್ ಮಲ್ನಾಡ್ ತಿಳಿಸಿದರು. ಟ್ರ್ಯಾಕ್ಟರ್‌ಗಳು ಕೆಲವೊಮ್ಮೆ ಡಬಲ್ ಟ್ರಾಲಿಯಲ್ಲಿ ಹೋಗುತ್ತವೆ. ಆ ಬಗ್ಗೆ ರಾತ್ರಿ ವೇಳೆ ಗೊತ್ತಾಗುವುದೇ ಇಲ್ಲ ಎಂದು ಹೇಳಿದ ಎಸ್ಪಿ ಹನುಮಂತರಾಯ, ಎಂ -ಸ್ಯಾಂಡ್ ವಾಹನಗಳು ಅಸ್ತವ್ಯಸ್ತವಾಗಿ ಚಲಿಸುವುದೂ ಸೇರಿದಂತೆ ಹಲವಾರು ಸಮಸ್ಯೆಗಳ ವಿರುದ್ಧ ವಾರದ ಅಭಿಯಾನ ಹಮ್ಮಿಕೊಳ್ಳಬೇಕೆಂದು ಸೂಚಿಸಿದರು.

ನಗರದ ವಿದ್ಯಾರ್ಥಿ ಭವನದಿಂದ ಹದಡಿ ರಸ್ತೆ ಯವರೆಗೆ ಬೀದಿ ದೀಪಗಳಿಲ್ಲದೇ ಸಮಸ್ಯೆಯಾಗಿದೆ ಹಾಗೂ ಕೆಲ ಎಂ. ಸ್ಯಾಂಡ್ ವಾಹನಗಳು ಹೆಚ್ಚಿನ ಲೋಡ್‌ ಹೊಂದಿದ್ದು ಹಾಗೂ ಅತಿ ವೇಗವಾಗಿ ಚಲಿಸುತ್ತಿವೆ. ಇದರಿಂದಾಗಿ ರಸ್ತೆ ಹಾಳಾಗುವುದರ ಜೊತೆಗೆ ಜನರ ಜೀವಕ್ಕೂ ಅಪಾಯವಾಗುತ್ತಿದೆ ಎಂಬ ಆಕ್ಷೇಪಗಳು ಸಭೆಯಲ್ಲಿ ಕೇಳಿ ಬಂದವು.

ಸಭೆಯಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿ ರವೀಂದ್ರ ಮಲ್ಲಾಪುರ, ದೂಡಾ ಆಯುಕ್ತ ಕುಮಾರಸ್ವಾಮಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್, ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!