ಭದ್ರಾ : ಕುಸಿದ ಒಳಹರಿವು, ಆತಂಕದಲ್ಲಿ ರೈತರು

ಭದ್ರಾ : ಕುಸಿದ ಒಳಹರಿವು, ಆತಂಕದಲ್ಲಿ ರೈತರು - Janathavaniಮಲೇಬೆನ್ನೂರು, ಆ.2- ಮಲೆನಾಡಿನಲ್ಲಿ ನಿರೀಕ್ಷಿತ ಮಳೆ ಬರದಿರುವುದರಿಂದ ಭದ್ರಾ ಜಲಾಶಯಕ್ಕೆ ನೀರಿನ ಒಳ ಹರಿವು ದಿನೇ ದಿನೇ ಕುಸಿತ ಕಂಡಿದ್ದು, ಅಚ್ಚು ಕಟ್ಟಿನ ರೈತರು ಗೊಂದಲಕ್ಕೆ ಒಳಗಾಗುವಂತಾಗಿದೆ.

ಶಾಸಕರ ಹಾಗೂ ರೈತ ಒಕ್ಕೂಟದ ಮನವಿ ಮೇರೆಗೆ ಜುಲೈ 21 ರಂದು ಭದ್ರಾ ಮುಖ್ಯ ಇಂಜಿನಿಯರ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜುಲೈ 22 ರಿಂದ  ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವ ತೀರ್ಮಾನ ಕೈಗೊಂಡರು.

ಆ ಸಂದರ್ಭದಲ್ಲಿ ಜಲಾಶಯಕ್ಕೆ 5 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿತ್ತು. ಮಲೆನಾಡಿನ ಮಳೆ ವಾತಾವರಣವಿತ್ತು.

ಜುಲೈ 23 ರಿಂದ ನಾಲೆಗೆ ನೀರು ಬಿಡುಗಡೆ ಮಾಡಿದ ನಂತರ ಸಂಪೂರ್ಣ ನೀರನ್ನು ದಾವಣಗೆರೆ ವಿಭಾಗಕ್ಕೆ ಹರಿಸಿ, ಜುಲೈ 25ರ ನಂತರ ಮಲೇಬೆನ್ನೂರು ವಿಭಾಗಕ್ಕೆ ನೀರು ಬಿಡುವ ನಿರ್ಧಾರವನ್ನು ಕೂಡಾ ಮಾಡಲಾಗಿತ್ತು.

ಆ ಪ್ರಕಾರ ದಾವಣಗೆರೆ ವಿಭಾಗಕ್ಕೆ ಬಿಟ್ಟ ನೀರನ್ನು ದಾವಣಗೆರೆ ನಗರಕ್ಕೆ ಕುಡಿಯುವ ನೀರಿನ ಯೋಜನೆಗೆ ಮತ್ತು ಹಲವು ರೈತರು ನಾಟಿ ಮಾಡಲು ಬಳಸಿದರು.

ಇದಕ್ಕೂ ಮುನ್ನ ದೇವರಬೆಳಕೆರೆ ಪಿಕಪ್ ಮತ್ತು ತುಂಗಭದ್ರಾ ನದಿ ಹಾಗೂ ಬೋರ್ ವೆಲ್ ನೀರಿನ ಸೌಲಭ್ಯ ಇರುವ ರೈತರು ಮುಂಚೆಯೇ ಭತ್ತದ ಸಸಿ ಬೆಳೆಸಿ ನಾಟಿ ಮಾಡಿದ್ದರು. ಆದರೀಗ ಭದ್ರಾ ಜಲಾಶಯಕ್ಕೆ ನೀರಿನ ಒಳ ಹರಿವು 1468 ಕ್ಯೂಸೆಕ್ಸ್ ಗೆ ಕುಸಿದಿದ್ದರೆ, ಹೊರ ಹರಿವು 2278 ಕ್ಯೂಸೆಕ್ಸ್ ಆಗಿದೆ. ಜಲಾಶಯದ ನೀರಿನ ಮಟ್ಟ 153 ಅಡಿ 9 ಇಂಚು ಇದೆ. 71.535 ಟಿಎಂಸಿ ನೀರಿನ ಸಾಮರ್ಥ್ಯದ ಜಲಾಶಯದಲ್ಲೀಗ 37.371 ಟಿಎಂಸಿ ನೀರು ಸಂಗ್ರಹವಾಗಿದೆ.

ಸದ್ಯದ ಮಾಹಿತಿ ಪ್ರಕಾರ ಕುಡಿಯುವ ನೀರಿಗಾಗಿ 7 ಟಿಎಂಸಿ ಮತ್ತು ಡೆಡ್ ಸ್ಟೋರೇಜ್ 13 ಟಿಎಂಸಿ ಸೇರಿ ಒಟ್ಟು 20 ಟಿಎಂಸಿ ಆಗುತ್ತದೆ. ಉಳಿದ 17.371 ಟಿಎಂಸಿ ನೀರನ್ನು ಭತ್ತದ ಬೆಳೆಗೆ ಸತತವಾಗಿ ಹರಿಸಿದರೆ 60 ದಿವಸ ಆಗಬಹುದು ಎಂದು ಹೇಳಲಾಗುತ್ತಿದೆ. ಮಲೇಬೆನ್ನೂರು ವಿಭಾಗದ ಅನೇಕ ರೈತರು ನಾಲೆ ನೀರಿನಲ್ಲೇ ಭತ್ತದ ಸಸಿ ಮಡಿ ಚೆಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಮ್ಮ ಗತಿ ಏನು ಎಂಬ ಪ್ರಶ್ನೆ ಸಹಜವಾಗಿಯೇ ಅಚ್ಚುಕಟ್ಟಿನ ರೈತರನ್ನು ಕಾಡುತ್ತಿದೆ. ಆದರೆ, ಭದ್ರಾ ಕಾಡಾ ಮಾಜಿ ಅಧ್ಯಕ್ಷರೂ ಆದ ಮಾಜಿ ಶಾಸಕ ಬಿ.ಪಿ. ಹರೀಶ್ ಅವರು, ಯಾವುದೇ ಕಾರಣಕ್ಕೂ ರೈತರು ಹೆದರಬೇಡಿ. ಜಲಾಶಯದ ಇತಿಹಾಸ ನೋಡಿದರೆ ಆಗಸ್ಟ್ ತಿಂಗಳಲ್ಲೇ ಹೆಚ್ಚು ಮಳೆಯಾಗಿ ಜಲಾಶಯ ತುಂಬಿರುವ ಉದಾಹರಣೆಗಳಿವೆ.

ಕಳೆದ ವರ್ಷವೂ ಆಗಸ್ಟ್ ತಿಂಗಳಲ್ಲಿ ಸುರಿದ ಮಹಾಮಳೆಯಿಂದಾಗಿ ಕೇವಲ ಒಂದು ವಾರದಲ್ಲೇ ಡ್ಯಾಂ ಭರ್ತಿಯಾಗಿ, ಆಗಸ್ಟ್ 15 ರಿಂದ ನಾಲೆಗೆ ನೀರು ಬಿಡುಗಡೆ ಮಾಡಲಾಗಿತ್ತು. ಆದ್ದರಿಂದ ರೈತರು ದೇವರ ಮೇಲೆ ಭಾರ ಹಾಕಿ ನಂಬಿಕೆ, ವಿಶ್ವಾಸದೊಂದಿಗೆ ನಾಟಿ ಮಾಡಬಹುದು ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಳೆಗಾಲದ ಬೆಳೆ ಆಗಿರುವುದರಿಂದ ಮಳೆದೇವ ಕೈ ಹಿಡಿಯುತ್ತಾನೆಂಬ ನಂಬಿಕೆ, ಜೊತೆಗೆ ರೈತರು ಅತೀ ಬೇಗ ಕಟಾವಿಗೆ ಬರುವ ತಳಿಯನ್ನು ನಾಡಿ ಮಾಡಬೇಕೆಂದು ಹರೀಶ್ ಮನವಿ ಮಾಡಿದ್ದಾರೆ.

ಕೊನೆ ಭಾಗ ತಲುಪಿಲ್ಲ : ಜಲಾಶಯ ದಿಂದ ನಾಲೆಗೆ ನೀರು ಬಿಟ್ಟು 10 ದಿನಗಳಾಗಿ ದ್ದರೂ ಅಚ್ಚುಕಟ್ಟಿನ ಕೊನೆ ಭಾಗಕ್ಕೆ ನೀರು ತಲುಪಿಲ್ಲ ಎಂಬುದು ಕೊನೆ ಭಾಗದ ರೈತರ ದೂರಾಗಿದೆ. ಮುಂಚೆಯೇ ಸಸಿ ಮಡಿ ಬೆಳೆಸಿ ಕೊಂಡಿರುವ ಅಚ್ಚು ಕಟ್ಟಿನ ಮಲೇಬೆನ್ನೂರು ಸಮೀಪದ ರೈತರು ನಾಟಿ ಮಾಡುವ ಸಿದ್ಧತೆಯಲ್ಲಿದ್ದಾರೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಭದ್ರಾ ಮುಖ್ಯ ಇಂಜಿನಿಯರ್ ಮತ್ತು ಅಧೀಕ್ಷಕ ಇಂಜಿನಿಯರ್ ಅವರು ಆಗಸ್ಟ್ 10ರೊಳಗೆ ಮಳೆಯ ವಾತಾವರಣ ವನ್ನು ಆಧರಿಸಿ ಅಚ್ಚುಕಟ್ಟಿನ ಜನಪ್ರತಿನಿಧಿಗಳ, ರೈತ ಮುಖಂಡರ ಸಭೆ ಕರೆದು ಚರ್ಚಿಸುವುದು ಸೂಕ್ತ ಎಂದು ಭಾನುವಳ್ಳಿ ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಮತ್ತು ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ ಮನವಿ ಮಾಡಿದ್ದಾರೆ.


ಜಿಗಳಿ ಪ್ರಕಾಶ್‌
[email protected]

error: Content is protected !!