ಕಲೆ ಆರಾಧಿಸಿದರೆ ಬದುಕು ಹಸನು: ನಳಿನಿ ಅಚ್ಯುತ್

ದಾವಣಗೆರೆ, ನ.4- ಮಕ್ಕಳನ್ನು ಕೇವಲ ಅಂಕ ಗಳಿಕೆಗಷ್ಟೇ ಸೀಮಿತಗೊಳಿಸದೇ  ಅವರಲ್ಲಿರುವ ಸುಪ್ತ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸಿದರೆ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುವುದಲ್ಲದೇ, ಮುಂದೆ ಭವಿಷ್ಯದಲ್ಲಿ ಬದುಕು ರೂಪಿಸಿಕೊಳ್ಳಲು ದಾರಿಯಾಗಲಿದೆ ಎಂದು ಬ್ರಾಹ್ಮಣ ಸಮಾಜದ ಮಹಿಳಾ ಘಟಕದ ಅಧ್ಯಕ್ಷರಾದ ನಳಿನಿ ಅಚ್ಯುತ್ ತಿಳಿಸಿದರು.

ಅವರು, ಇಂದು ನಗರದ ಎಂಸಿಸಿ ಬಿ ಬ್ಲಾಕ್‍ನಲ್ಲಿರುವ ಸಂಕಲನ ಚಿತ್ರ ಕುಟೀರ ದಲ್ಲಿ ಸಂಕಲನ ಸಮೂಹ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದೀಪ್ತಿ ಜೋಷಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ದೃಶ್ಯ ದರ್ಶನ ಉದ್ಘಾಟಿಸಿ ಮಾತನಾಡಿದರು.

ಸಂಗೀತ, ಸಾಹಿತ್ಯ, ಚಿತ್ರಕಲೆ ಸೇರಿದಂತೆ ಯಾವುದಾದರೂ ಒಂದು ಕಲೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ನಿತ್ಯ ಜೀವನ ಜಂಜಾಟದ ಮಾನಸಿಕ ಒತ್ತಡಗಳಿಗೆ ವಿರಾಮ ಸಿಗಲಿದೆ. ಕಲೆಯನ್ನು ಆರಾಧಿಸಿದರೆ ಬದುಕು ಹಸನಾಗಲಿದೆ ಎಂದು ಹೇಳಿದರು.

ಪ್ರತಿಭೆ ಎಲ್ಲರಲ್ಲೂ ಇರಲಿದ್ದು, ಅದು ಹೊರ ಬರಲು ಒಂದು ಸೂಕ್ತ ವೇದಿಕೆ ಬೇಕು. ಪೋಷಕರು ತಮ್ಮ ಮಕ್ಕಳ ಕಲಾ ಪ್ರತಿಭೆ ಅರಳಲು ಪ್ರೋತ್ಸಾಹಿಸಬೇಕು. ಯುವ ಪೀಳಿಗೆಗೆ ಚಿತ್ರಕಲೆ ಸೇರಿದಂತೆ ನಮ್ಮ ದೇಶೀ ಕಲೆಗಳ ಬಗ್ಗೆ ತಿಳಿಸಿ ಅದರಲ್ಲಿ ತೊಡಗಿಸಿದಾಗ ಕಲೆಯ ಜೊತೆಗೆ ಕಲಾರಾಧ ಕರೂ ಜೀವಂತಿಕೆ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ದೃಶ್ಯ ಕಲಾ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಸಂತೋಷಕುಮಾರ ಕುಲಕರ್ಣಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪೋಷಕರು ಮಕ್ಕಳನ್ನು ಕೇವಲ ಡಾಕ್ಟರ್, ಇಂಜಿನಿಯರ್ ಆಗಬೇಕೆಂದಷ್ಟೇ ಒತ್ತಡ ಹೇರಬಾರದು. ಚಿತ್ರಕಲೆ, ಸಂಗೀತ ಸೇರಿದಂತೆ ಅವರಲ್ಲಿ ಅಡಗಿರುವ ಪಠ್ಯೇತ್ತರ ಚಟುವಟಿಕೆಗಳ ಪ್ರತಿಭೆ ಪ್ರದರ್ಶನಕ್ಕೆ ಆಸಕ್ತಿ ತೋರಿದಾಗ ಚಿಗುರುವ ಸಮಯದಲ್ಲಿ ಮೊಟಕುಗೊಳಿಸದೇ ಗುರುತಿಸಿ, ಪ್ರೋತ್ಸಾಹಿಸಬೇಕೆಂದರು.

ಚಿತ್ರ ಕಲಾವಿದೆ ದೀಪ್ತಿ ಜೋಷಿ ಮಾತನಾಡಿ, ನನಗೆ ಚಿತ್ರಕಲೆ ಕಲಿಕೆಗೆ ಸಂಕಲನ ಸಮೂಹ ಸಂಸ್ಥೆ ಉತ್ತಮ ವೇದಿಕೆಯಾಯಿತು. ಲೆಕ್ಕ ಪರಿಶೋಧನೆಯ ಕೆಲಸದ ಒತ್ತಡಗಳ ಮಧ್ಯೆಯೂ ಚಿತ್ರಕಲೆ ಕಡೆಗೆ ಗಮನ ಹರಿಸುವುದರಿಂದ ನನ್ನ ಮನಸ್ಸಿಗೆ ಉಲ್ಲಾಸ ಸಿಗುತ್ತದೆ ಹಾಗೂ ಮನಸ್ಸಿನ ಒತ್ತಡಗಳಿಗೆ ವಿರಾಮ ಹಾಡಿದಂತಾಗುತ್ತದೆ. ಹೊಸದನ್ನು ಕಲಿಯಲು ಆಸಕ್ತಿ ಇರುವ ಮಕ್ಕಳಿಗೆ ಪೋಷಕರು, ಶಿಕ್ಷಕರು ಪ್ರೋತ್ಸಾಹಿಸಬೇಕೆಂದರು.

ಕಾರ್ಯಕ್ರಮದಲ್ಲಿ ದೃಶ್ಯ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರವೀಂದ್ರ ಎಸ್. ಕಮ್ಮಾರ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ಕಲಾವಿದ ರವೀಂದ್ರ ಅರಳಗುಪ್ಪಿ, ಸಂಕಲನ ಸಂಸ್ಥೆಯ ಕಾರ್ಯದರ್ಶಿ ಎಂ.ಜಿ. ಉಷಾ, ದತ್ತಾತ್ರೇಯ ಭಟ್, ಚಿತ್ರ ಕಲಾವಿದೆ ದೀಪ್ತಿ ಜೋಷಿ ಪೋಷಕರಾದ ರಘು ಜೋಷಿ, ಸುಶೀಲಾ ಜೋಷಿ ಸೇರಿದಂತೆ ಇತರರು ಇದ್ದರು.

error: Content is protected !!