ಶಾಲಾ – ಕಾಲೇಜುಗಳಲ್ಲಿ ಪಠ್ಯ ಪುಸ್ತಕ, ಲೇಖನ ಸಾಮಗ್ರಿ ಮಾರಾಟ ನಿಲ್ಲಲಿ

ದಾವಣಗೆರೆ, ಜು. 31-  ಶಾಲಾ-ಕಾಲೇಜುಗಳಲ್ಲಿ ಪಠ್ಯ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳ ಮಾರಾಟ ನಿಲ್ಲಿಸಲು ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪುಸ್ತಕ ಮತ್ತು ಸ್ಟೇಷನರಿ ಮಾರಾಟಗಾರರ ಸಂಘ ಒತ್ತಾಯಿಸಿದೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸಲಹೆಗಾರ ಎಸ್.ಟಿ. ವಿಜೇಂದ್ರ,  ಸುಮಾರು ವರ್ಷಗಳಿಂದಲೂ ಶಾಲಾ-ಕಾಲೇಜುಗಳಲ್ಲಿ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ನೇರವಾಗಿ ಹೆಚ್ಚಿನ ಎಂ.ಆರ್.ಪಿ. ಮುದ್ರಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಶಾಲೆಗಳ ಈ ಕ್ರಮದಿಂದ ಪೋಷಕರಿಗೆ ಹೊರೆಯಾಗು ತ್ತಿದ್ದರೂ, ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ತೊಡಕಾಗಬಾರದು ಎಂದು ಮೌನ ವಹಿಸುತ್ತಿದ್ದಾರೆ. ಪೋಷಕರು ಸ್ವಾತಂತ್ರ್ಯವಿಲ್ಲದೇ ಅಧಿಕ ಬೆಲೆ ತೆತ್ತು ಕೊಂಡುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.

ಪುಸ್ತಕ ಮತ್ತು ಸ್ಟೇಷನರಿ ವ್ಯಾಪಾರಿಗಳ ವ್ಯಾಪಾರವನ್ನು ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಕಸಿದುಕೊಂಡಂತಾಗಿದೆ. ಸರ್ಕಾರಕ್ಕೂ ಸಹ ಕೋಟಿ ಕೋಟಿ ವ್ಯವಹಾರದ ತೆರಿಗೆ ಖೋತಾ ಆಗುತ್ತಿದೆ. ಶಿಕ್ಷಣ ವ್ಯಾಪಾರಿ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿದೆ ಎಂದು ದೂರಿದರು. 

ಪೊಷಕರು ಮಾರುಕಟ್ಟೆಯಲ್ಲಿ ಖರೀದಿಸಲು ಸ್ವತಂತ್ರ ರಾಗಿರಬೇಕು ಎಂದು ಶಿಕ್ಷಣ ಇಲಾಖೆ ಅಧಿನಿಯಮ ಹೊರಡಿಸಿದೆ. ಉಚ್ಛ ನ್ಯಾಯಾಲಯವೂ ಇದೇ ರೀತಿ ಆದೇಶ ನೀಡಿದೆ. ಆದರೆ ಇದಾವುದೂ ಪಾಲನೆಯಾಗುತ್ತಿಲ್ಲ. ಇದರ ಹಿಂದೆ ಸಂಬಂಧಿಸಿದ ಅಧಿಕಾರಿಗಳು ಶಾಮೀಲಾಗಿರುವ ಅನುಮಾನವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಹೆಚ್.ಲಕ್ಷ್ಮಣ, ಕಾರ್ಯದರ್ಶಿ ಕೆ.ಎಂ. ರೇವಣಸಿದ್ದಯ್ಯ, ಕೋಶಾಧ್ಯಕ್ಷ ಎಂ.ಆರ್. ಮಹೇಂದ್ರಕುಮಾರ್, ಉಪಾಧ್ಯಕ್ಷ ಎ.ರುದ್ರೇಶ್, ಸಹ ಕಾರ್ಯದರ್ಶಿ ಗಿರೀಶ್ ಗುತ್ತಲ್, ಪ್ರವೀಣ್ ಮಾಗಾನಹಳ್ಳಿ, ಸಂಘಟನಾ ಕಾರ್ಯದರ್ಶಿ ಎಂ.ಮಂಜುನಾಥ್ ಉಪಸ್ಥಿತರಿದ್ದರು.

error: Content is protected !!