ಸಾಣೇಹಳ್ಳಿ, ನ.4- ಸಮಯ ಪ್ರಜ್ಞೆಗೆ ಮತ್ತೊಂದು ಹೆಸರೇ ಶ್ರೀ ಶಿವಕುಮಾರ ಶಿವಾ ಚಾರ್ಯ ಮಹಾಸ್ವಾಮಿಗಳು. ಅವರ ಪರಂ ಪರೆಯನ್ನು ನಾವೂ ಮುಂದುವರೆಸಿಕೊಂಡು ಬಂದಿದ್ದೇವೆ ಎನ್ನುವ ಆತ್ಮ ಸಂತೋಷವಿದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದ ನಿಮಿತ್ತ ಮುಂಜಾನೆ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಆಯೋಜನೆಗೊಂಡಿದ್ದ ಚಿಂತನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ರೈತರು ಕಾಲ-ಕಾಲಕ್ಕೆ ಸರಿಯಾಗಿ ಭೂಮಿಯನ್ನು ಉತ್ತಿ-ಬಿತ್ತಿದರೆ ಮಾತ್ರ ಬೆಳೆ ಬೆಳೆದುಕೊಳ್ಳಲು ಸಾಧ್ಯ. `ಹರ್ಷದ ಕೂಳಿಗೆ ಹೋಗಿ ವರ್ಷದ ಕೂಳನ್ನು ಕಳೆದುಕೊಂಡರು’ ಎನ್ನುವ ಮಾತು ಸಮಯ ಪ್ರಜ್ಞೆ ಇಲ್ಲದೇ ಇರುವುದನ್ನು ತೋರಿಸುತ್ತದೆ. ಸರಿಯಾದ ಸಮಯಕ್ಕೆ ಸರಿಯಾಗಿ ಕೆಲಸ ಮಾಡದೆ ನಂತರ ಪಶ್ಚಾತ್ತಾಪ ಪಟ್ಟರೆ ಉಪಯೋಗವಿಲ್ಲ ಎಂದರು.
`ಸಮಯ ಪ್ರಜ್ಞೆ’ ಕುರಿತು ಸಾಣೇಹಳ್ಳಿಯ ಅಧ್ಯಾಪಕಿ ಎಂ ಸುಧಾ ಮಾತನಾಡಿ, 12ನೇ ಶತಮಾನದ ಶರಣೆ ಮುಕ್ತಾಯಕ್ಕ ತನ್ನ ಒಂದು ವಚನದಲ್ಲಿ `ಸುಮ್ಮನೇಕೆ ಸಮಯ ಕಳೆಯುವಿರಿ ಸ್ವಾಮಿಗಳಿರಾ. ನಿತ್ಯ ಶಿವರಾತ್ರಿ ಮಾಡಿ’ ಎನ್ನುವ ಮೂಲಕ ಸಮಯದ ಮಹತ್ವವನ್ನು ಸಾರಿ ಹೇಳಿದ್ದಾಳೆ. ಬಸವಣ್ಣನವರು ಸಹ `ಹೊತ್ತು ಹೋಗದ ಮುನ್ನ, ಮೃತ್ಯು ಮುಟ್ಟದ ಮುನ್ನ ತೊತ್ತು ಕೆಲಸವ ಮಾಡು’ ಎನ್ನುವ ಮೂಲಕ ಅಮೂಲ್ಯವಾದ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಲು ಕರೆ ಕೊಟ್ಟಿದ್ದಾರೆ ಎಂದರು.
ಶಿವಸಂಚಾರದ ನಾಗರಾಜ್ ಸಾಣೇಹಳ್ಳಿ ಸಾಮೂಹಿಕ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಅಧ್ಯಾಪಕ ಸಂತೋಷ್ ಕಾರ್ಯಕ್ರಮ ನಡೆಸಿಕೊಟ್ಟರು.