ಅಧಿಕಾರಿಗಳಿಗೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸಿ

ಮಾನ್ಯರೇ,

ವಿವಾದಿತ ಜಮೀನಿನ ಸರ್ವೆ ಕಾರ್ಯಕ್ಕೆ ಹೋಗಿದ್ದ ಬಂಗಾರಪೇಟೆ ತಾಲೂಕಿನ ತಹಶೀಲ್ದಾರ್ ಬಿ.ಕೆ. ಚಂದ್ರಮೌಳೇಶ್ವರ ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವುದು ನಿಜಕ್ಕೂ ಖಂಡನೀಯ.

ಈ ಪ್ರಕರಣದಲ್ಲಿ ಭದ್ರತಾ ವೈಫಲ್ಯ ಹೆಚ್ಚಾಗಿ ಕಂಡು ಬರುತ್ತದೆ.  ಉನ್ನತ ಮಟ್ಟದ  ಅಧಿಕಾರಿಗಳಿಗೇ ಹೀಗಾದರೆ ಇನ್ನು ಕೆಳಹಂತದ ಸಾಮಾನ್ಯ ಅಧಿಕಾರಿಗಳು/ನೌಕರರ ಪಾಡೇನು? ಈ ರೀತಿಯ ಕೊಲೆ, ಹಲ್ಲೆ, ಕಿರುಕುಳ, ಬೆದರಿಕೆಯಯಂತಹ ಪ್ರಕರಣಗಳು ಇಂದು, ನಿನ್ನೆಯದಲ್ಲ.  ಪ್ರತಿನಿತ್ಯ ಆಗಾಗ ಪತ್ರಿಕೆಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಗ್ರಾಮ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಹಿಡಿದು ಐ ಎ ಎಸ್ ಅಧಿಕಾರಿಗಳು ಕೂಡ ಇಂತಹವುಗಳನ್ನು  ಸಾಕಷ್ಟು ಬಾರಿ ಎದುರಿಸಿರುತ್ತಾರೆ.

ಕೆಲವೊಮ್ಮೆ ಉಳ್ಳವರ ಪ್ರಭಾವ ಮತ್ತು ಒತ್ತಡ ತಾಳಲಾರದೆ  ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಸಹ ಸಾಕಷ್ಟಿವೆ. ಅಧಿಕಾರಿಗಳಿಗೆ ನಿರ್ಭೀತರಾಗಿ ಕೆಲಸ ಮಾಡುವ ಮುಕ್ತ ವಾತಾವರಣ ಕಲ್ಪಿಸಿಕೊಡಬೇಕಾಗಿದೆ. ರಾಜ್ಯ ಸರ್ಕಾರ ಬರೀ ಸರ್ಕಾರಿ ಅಧಿಕಾರಿಗಳ ಸೇವೆಯನ್ನು ಅಪೇಕ್ಷಿಸದೆ ಅವರ ವೈಯುಕ್ತಿಕ ಹಿತಾಸಕ್ತಿಯನ್ನು ಕಾಪಾಡುವುದರ ಜೊತೆಗೆ ಇನ್ನೂ ಹೆಚ್ಚಿನ ಸೂಕ್ತ ಭದ್ರತೆ ನೀಡಿ  ಇಂತಹ ಘಟನೆಗಳು ಭವಿಷ್ಯದಲ್ಲಿ  ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ಡಿ. ಮುರುಗೇಶ್, ದಾವಣಗೆರೆ.
[email protected]

error: Content is protected !!