ರೈತ ಧರೆಯ ದೇವದೂತ

ಬೆವರು ಸುರಿಸಿ ಉಸಿರ ಬಸಿದು
ಜಗಕೆ ಆಸರಾಗುವ
ಏಳು-ಬೀಳು ಏನೇ ಇರಲಿ
ದಿಟ್ಟತನವ ತೋರುವ.

ಇಳೆಗೆ ಮಳೆಯು ರಮಿಸಿದಾಗ
ಹಿಗ್ಗಿ ಹಿಗ್ಗಿ ನಲಿಯುವ
ರಂಟೆ- ಕುಂಟೆ ಹೊಡೆದು
ಹೊಲವ ತಿದ್ದಿ ಹಸನುಗೊಳಿಸುವ.

ಬಸವ ಜೋಡು ಎತ್ತುಗಳೇ
ಇವಗೆ ಪರಮ ಮಿತ್ರರು
ನಿತ್ಯ ದುಡಿವ ಸತ್ಯ ವ್ರತದ
ಕಾಯಕದ ನಿಷ್ಠರು.

ಪೈರು- ಪಚ್ಚೆ ಬೆಳೆಯುವಲ್ಲಿ
ಅದನು ನೋಡಿ ನಲಿಯುವ
ಬೆಳೆಯ ಜೊತೆಗೆ ತಾನು
ಬೆಳೆದು ಹರುಷದಿಂದ ಹಿಗ್ಗುವ.

ಬೆಳೆದ ಬೆಳೆಗೆ ಸೂಕ್ತ ಬೆಲೆಯು
ಇಲ್ಲವಾಗಿ ನೋಯುವ
ಸಾಲದ ಸುಳಿಯಲ್ಲಿ ಸಿಲುಕಿ
ನರಳಿ ನರಳಿ ಬೇಯುವ.

ಏನೇ ಇರಲಿ ಏನೇ ಬರಲಿ
ಜಗಕೆ ಅನ್ನ ನೀಡುತ
ನೀನಲ್ಲದೆ ಬೇರಾರೂ ಅಲ್ಲ
ಧರೆಗಿಳಿದ ದೇವದೂತ.

ರೈತ ನಾಡಿನ ಜೀವನಾಡಿ
ಅವನಿಗೆ ತೊಂದರೆ ಕೊಡಬೇಡಿ
ಎಲ್ಲರೂ ಅರಿಯಬೇಕು ಇದರ ಮರ್ಮ
“ನೇಗಿಲ ಮೇಲೆಯೆ ನಿಂತಿದೆ ಧರ್ಮ”.


ಮಾ.ಬ.ನಾಗರಾಜ್.
ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.
[email protected]

error: Content is protected !!