22 ಕೆರೆ ನೀರಾವರಿ ಯೋಜನೆ : ಮೋಟಾರ್ ಚಾಲನೆಗಾಗಿ ಆಗ್ರಹ

ದಾವಣಗೆರೆ, ನ. 2- 22 ಕೆರೆಗಳ ಏತ ನೀರಾ ವರಿ ಮೋಟಾರ್ ಗಳನ್ನು ಚಾಲನೆ ಗೊಳಿಸಲು ಆಗ್ರಹಿಸಿ 22 ಕೆರೆಗಳ ಏತ ನೀರಾವರಿ ಹೋರಾಟ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು.

22 ಕೆರೆಗಳ ಏತ ನೀರಾವರಿ ಯೋಜನೆಯ ಮೋಟಾರ್‍ಗಳು ಕಳೆದ 30 ದಿನಗಳಿಂದ ಸ್ಥಗಿತಗೊಂಡಿವೆ. ತುಂಗಭದ್ರಾ ನದಿಯಲ್ಲಿ ಮೋಟಾರ್ ಚಾಲನೆಗೊಳ್ಳಲು ಬೇಕಾದ ಅಗತ್ಯ ಪ್ರಮಾಣದಲ್ಲಿ ನೀರು ಲಭ್ಯವಿದೆ. ಆದರೂ ಸಹ ಇಲ್ಲಿಯವರೆಗೂ ಮೋಟಾರ್ ಚಾಲನೆಯಾಗಿಲ್ಲ. ಇನ್ನೆರಡು ತಿಂಗಳು ಕಳೆದರೆ ಬೇಸಿಗೆ ಆರಂಭವಾಗಲಿದೆ. ಆದ್ದರಿಂದ ಜನ – ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೂಡಲೇ ಸ್ಥಗಿತ ಗೊಂಡಿರುವ ಮೋಟಾರ್‍ಗಳನ್ನು ಚಾಲನೆಗೊಳಿಸಿ ಕೆರೆಗಳಿಗೆ ನೀರನ್ನು ಹರಿಸಲು ಕ್ರಮವನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಖರೀದಿ ಕೇಂದ್ರ ಆರಂಭಕ್ಕೆ ಮನವಿ: ಅಷ್ಟೇ ಅಲ್ಲದೆ ಮೆಕ್ಕೆಜೋಳ ಖರೀದಿ ಕೇಂದ್ರ ವನ್ನು ತೆರೆಯುವಂತೆ ಒತ್ತಾಯಿಸಿ ಜಿಲ್ಲಾಧಿ ಕಾರಿ ಮಹಾಂತೇಶ್ ಬೀಳಗಿ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಈ ಮುಂಗಾರು ಹಂಗಾಮಿನಲ್ಲಿ ಉತ್ತಮವಾಗಿ ಮಳೆಯಾಗಿರುವ ಕಾರಣ ಮೆಕ್ಕೆಜೋಳದ ಫಸಲು ಅತ್ಯುತ್ತಮವಾಗಿ ಬಂದಿರುತ್ತದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯ ಮೂಲಕ ಖರೀದಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಕೊಟ್ರೇಶ್‍ನಾಯ್ಕ್, ಜಿ.ಎಸ್. ಪ್ರದೀಪ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!