ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ

ನಗರದಲ್ಲಿ ಮಾಯಕೊಂಡ ಬ್ಲಾಕ್‌ ಕಾಂಗ್ರೆಸ್‌ನಿಂದ ಪ್ರತಿಭಟನಾ ಮೆರವಣಿಗೆ

ದಾವಣಗೆರೆ, ನ. 2- ಉತ್ತಮ ಮಳೆಯಾಗಿ ಜಿಲ್ಲೆಯಲ್ಲಿ ಸಾಧಾರಣವಾಗಿ ಮೆಕ್ಕೆಜೋಳ ಹಾಗೂ ಭತ್ತದ ಬೆಳೆ ಬಂದಿರುತ್ತದೆ. ಆದರೆ, ರೈತ ತಾನು ಬೆಳೆದ ಮೆಕ್ಕೆಜೋಳ ಹಾಗೂ ಭತ್ತದ ಬೆಲೆ ನೆಲಕ್ಕೆ ಕುಸಿದು ಸಂಕಷ್ಟ ಅನುಭವಿಸುತ್ತಿದ್ದಾನೆ. ಆದ್ದರಿಂದ ಭತ್ತ ಹಾಗೂ ಮೆಕ್ಕೆಜೋಳದ ಖರೀದಿ ಕೇಂದ್ರವನ್ನು ತೆರೆದು ರೂ.2000/-ಗಳ ದರದಲ್ಲಿ ಮೆಕ್ಕೆಜೋಳ ಹಾಗೂ ರೂ.2500/-ಗಳ ದರದಲ್ಲಿ ಭತ್ತವನ್ನು ಖರೀದಿಸಬೇಕೆಂದು ಜಿ.ಪಂ. ಸದಸ್ಯ ಕೆ.ಎಸ್. ಬಸವಂತಪ್ಪ ಒತ್ತಾಯಿಸಿದರು.

ನಗರದ ಜಯದೇವ ವೃತ್ತದಲ್ಲಿ ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಇಂದು ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರ ರೈತರಿಗೆ ಅನುಕೂಲವಾಗಲು ಜಿಲ್ಲಾ ಮಟ್ಟದಲ್ಲಿ ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರಿಗೆ ನೆರವಾಗಿದ್ದನ್ನು ಸ್ಮರಿಸಿದರು. 

ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಬಂದರೆ ರೈತರ ಬದುಕನ್ನು ಹಸನಾಗಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಈಗ ರೈತರನ್ನು ಸಂಕಷ್ಟಕ್ಕೆ ದೂಡಿ ರೈತರಿಗೆ ಹಗಲು ಕನಸು ತೋರಿಸಿದೆ. ಇದರಿಂದ ರೈತರು ಆತ್ಮಹತ್ಯೆಯಂತಹ ಗಂಭೀರ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.  

ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮೆಕ್ಕೆಜೋಳ ಹಾಗೂ ಭತ್ತದ ಫಸಲಿಗೆ ಬಹುತೇಕ ಹಾನಿಯಾಗಿ ರೈತರು ಸಂಕಷ್ಟದ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಸರ್ಕಾರವು ಅವರ ನೆರವಿಗೂ ಸಹ ಬರಬೇಕು ಎಂದು ಬಸವಂತಪ್ಪ ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡ ಮುದೇಗೌಡ್ರ ಗಿರೀಶ್ ಮಾತನಾಡಿ, ಈಗಾಗಲೇ ಎಪಿಎಂಸಿ ಯಿಂದ ಖರೀದಿ ಕೇಂದ್ರ ಆರಂಭಿಸಲು ಸರ್ಕಾ ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸದರಿ ಖರೀದಿ ಕೇಂದ್ರ ಆರಂಭಿಸಿದರೆ ಮೆಕ್ಕೆಜೋಳ ಹಾಗೂ ಭತ್ತವನ್ನು ಸಂಗ್ರಹಿಸಲು ಎ.ಪಿ.ಎಂ.ಸಿ.ಯಿಂದ ಗೋಡೌನ್ ನೀಡುವುದಾಗಿ ತಿಳಿಸಿದರು.

ಖರೀದಿ ಕೇಂದ್ರವನ್ನು ಜಿಲ್ಲಾ ಕೇಂದ್ರದಲ್ಲಿ ಆರಂಭಿಸದೇ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಿ ದರೆ ರೈತರು ತಾವುಗಳು ಬೆಳೆದ ಬೆಳೆಯನ್ನು ಖರೀದಿ ಕೇಂದ್ರಗಳಿಗೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ. ಇದರಿಂದ ರೈತರಿಗೆ ಬೆಳೆ ಸಾಗಾಣಿಕೆಗೆ ಬಾಡಿಗೆ ಕಟ್ಟುವ ಹಣವೂ ಉಳಿಯುತ್ತದೆ ಎಂದರು.

ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್, ಶಂಭುಲಿಂಗಪ್ಪ, ಕರಿಬಸಪ್ಪ, ಅಂಜಿನಪ್ಪ ಅವರು ಮಾತನಾಡಿ, ಬಿಜೆಪಿ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿದರು.

ಕಾಂಗ್ರೆಸ್ ಮುಖಂಡರಾದ ರಾಮ ಗೊಂಡನಹಳ್ಳಿ ಶರಣಪ್ಪ, ಶ್ಯಾಗಲೆ ಸತೀಶ್, ವೆಂಕಟೇಶ್, ಕಾಂಗ್ರೆಸ್ ಕಿಸಾನ್ ಸಮಿತಿ ಅಧ್ಯಕ್ಷ ಹಾಲೇಶ್, ದೇವೇಂದ್ರಪ್ಪ, ಸಿದ್ದನೂರು ಪ್ರಕಾಶ್, ಆನಗೋಡು ಬಸವರಾಜಪ್ಪ, ಹರೋಸಾಗರ ಪ್ರಕಾಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!