ಸರ್ಕಾರದ ಸಹಾಯಕ್ಕಾಗಿ ಕೀಳಾಗಲು ಎಲ್ಲರೂ ಸಿದ್ದರಾಗಿದ್ದಾರೆ: ಸಾಣೇಹಳ್ಳಿ ಶ್ರೀ

ಸರ್ಕಾರದ ಸಹಾಯಕ್ಕಾಗಿ ಕೀಳಾಗಲು ಎಲ್ಲರೂ ಸಿದ್ದರಾಗಿದ್ದಾರೆ: ಸಾಣೇಹಳ್ಳಿ ಶ್ರೀ - Janathavaniಸಾಣೇಹಳ್ಳಿ, ನ.2- ಸರ್ಕಾರದಿಂದ ಸಹಾಯ ಸಿಗುತ್ತದೆ ಎಂದರೆ ಎಲ್ಲ ಸಮಾಜದವರೂ ಅದರ ಲಾಭ ಪಡೆದುಕೊಳ್ಳಲು ತಮ್ಮನ್ನು ತಾವು ಕೀಳು ಮಾಡಿಕೊಳ್ಳುವಲ್ಲಿ ಹಿಂದೆ ಮುಂದೆ ನೋಡುತ್ತಿಲ್ಲ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಬಸವಣ್ಣ ನವರು ಹೇಳಿದ ಕೀಳಿಗೂ, ಇವತ್ತಿನ ಕೀಳಿಗೂ ಹೋಲಿಕೆ ಮಾಡುವುದಾದರೂ ಹೇಗೆ? ಇದನ್ನೆಲ್ಲ ನೋಡಿದಾಗ ಲಾಭ ಕೋರ ಸಮಾಜದ ನಡುವೆ ನಾವಿದ್ದೇವೆ ಎನಿಸುತ್ತಿದೆ ಎಂದರು.

ಅಸಹಾಯಕರಿಗೆ ಸಹಾಯವಾಗಲಿ ಎಂದು ಸರ್ಕಾರ ಕೆಲವು ಸೌಲಭ್ಯಗಳನ್ನು ನೀಡಿದರೆ, ಆ ಸೌಲಭ್ಯ ನಮಗೂ ಬೇಕು ಎಂದು ಕೈ ಒಡ್ಡುವ, ಪ್ರತಿಭಟಿಸುವ ಜನರೂ ಇದ್ದಾರೆ. ಎಲ್ಲ ಜಾತಿಯವರೂ ನಮಗೂ ಮೀಸಲಾತಿ ಕೊಡಿ ಎಂದು ಹಕ್ಕೊತ್ತಾಯ ಮಾಡುವಂತಾಗಿದೆ ಎಂದರು,

 ಸರ್ಕಾರ ಸದುದ್ದೇಶದಿಂದ ಮಾಡಿದ ಯೋಜನೆಗಳು ದುರ್ಬಳಕೆಯಾಗುವುದರ ಹಿಂದೆ ಕೆಲಸ ಮಾಡುತ್ತಿರುವುದು ಪ್ರಚಲಿತ ಮೌಲ್ಯರಹಿತ ರಾಜಕಾರಣ ಮತ್ತು ಸಮಾ ಜದ ಹೊಣೆಗೇಡಿತನವಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದರಿಂದ ಸಮಾಜದಲ್ಲಿ ಹಲವು ರೀತಿಯ ಆರೋಗ್ಯಪೂರ್ಣ ಬದಲಾವಣೆ ಕಂಡುಕೊಳ್ಳಲು ಸಾಧ್ಯವಾಗಿದೆೆ.  ಸಮಾಜ ಯಾವಾಗಲೂ ಬದಲಾವಣೆ ಬಯಸುತ್ತಿ ರುತ್ತದೆ. ಅದಕ್ಕೆ ರಾಜಕೀಯ ಶಕ್ತಿಗಳು ಪೂರಕವಾಗಿದ್ದರೆ, ಬೇಕಾದಷ್ಟು ಸಾ ಮಾಜಿಕ ಸುಧಾರಣೆಗಳನ್ನು ತರಬಹುದು. 

ರಾಜಕೀಯ ಸಿದ್ಧಾಂತಗಳಿಗೆ ತಕ್ಕಂತೆ ಸಾಮಾಜಿಕ ಪರಿವರ್ತನೆ ಆಗುತ್ತದೆ. ತಮಿಳುನಾಡಿನಲ್ಲಿ ಪೆರಿಯಾರ್ ಚಳುವಳಿ, ಮೈಸೂರಿನಲ್ಲಿ ಅಬ್ರಾಹ್ಮಣ್ಯ ಚಳುವಳಿ ರಾಜ ಶಕ್ತಿಯನ್ನೇ ವಿರೋಧ ಮಾಡಿದ್ದು ಗಮನಾರ್ಹ. ಅಬ್ರಾಹ್ಮಣ್ಯ ಚಳವಳಿಯ ಕಾರಣದಿಂದಾಗಿ ವಿಶ್ವೇಶ್ವರಯ್ಯನವರು ರಾಜೀನಾಮೆ ಕೊಡುವ ಪರಿಸ್ಥಿತಿ ಬರು ತ್ತದೆ. ರಾಜ್ಯಾಡಳಿತ ಜನಪರವಾಗಿದ್ದ ರಿಂದ ಅವರ ರಾಜೀನಾಮೆ ಅಂಗೀಕಾರವಾಯ್ತು. ಅಷ್ಟೇ ಅಲ್ಲ; ಕನ್ನಂಬಾಡಿ ಅಣೆಕಟ್ಟು ಕಟ್ಟಲು ಅರಮನೆಯ ಬಂಗಾರವನ್ನೇ ಬಳಸಲು ಸಾಧ್ಯವಾಯಿತು. ಆಡಳಿತ ನಿಂತ ನೀರಾದಾಗ ಸಮಾಜದ ಜನರು ಅದರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯ ಎಂದು ನುಡಿದರು.

ಸಮಾಜದ ಪರಿವರ್ತನೆಗೆ ರಾಜಕೀಯ ಶಕ್ತಿಯ ಕೊಡುಗೆ ಬಹಳ ಮುಖ್ಯ. ರಾಜಕೀಯ ಸಿದ್ಧಾಂತಗಳ ಬದಲಾವಣೆಯಲ್ಲಿ ಸಾಮಾಜಿಕ, ಧಾರ್ಮಿಕ ನೇತಾರರ ಆಶೋತ್ತರಗಳೂ ಸೇರಿರುತ್ತವೆ. ಅವು ಸಮಾನಾಂತರ ರೇಖೆಯಲ್ಲಿ ಸಾಗಿದಾಗ ಸಮಾಜದಲ್ಲಿ ಅದ್ಭುತ ಬದಲಾವಣೆ ಸಾಧ್ಯ ಎಂದರು.

ಪ್ರಸ್ತುತ ದಿನಗಳಲ್ಲಿ ರಾಜಕೀಯ ಶಕ್ತಿಯ ಕೈ ಮೇಲಾಗಿದೆ. ಇದಕ್ಕೆ ಕಾರಣ ಸಮಾಜದಲ್ಲಿ ಸಂಘಟನಾ ಶಕ್ತಿ ಕಡಿಮೆ ಆಗಿರುವುದು. ಇವತ್ತು ಸಾಮಾಜಿಕ ಹೊಣೆಗಾರಿಕೆ ಯಾರಿಗೆ ಇದೆ ಎನ್ನುವುದು ಪ್ರಶ್ನಾರ್ಹ. ಅದನ್ನು ಕಟ್ಟಿಕೊಂಡು ನನಗೇನಾಗಬೇಕಾಗಿದೆ? ನಾನು ಹೇಗೋ ಬದುಕಿದರಾಯ್ತು ಎನ್ನುವ ಪಲಾಯನವಾದ ಸಮಾಜದಲ್ಲಿ ಹೆಚ್ಚುತ್ತಿದೆ. ಹಿಂದೆ ಒಂದು ಊರಲ್ಲಿ ಏನಾದರೂ ಅನ್ಯಾಯ ನಡೆದಾಗ ಊರವರೆಲ್ಲರೂ ಒಂದಾಗಿ ಅದನ್ನು ಸರಿಪಡಿಸುತ್ತಿದ್ದರು. ಇವತ್ತು ಹಾಗಿಲ್ಲ. ಸ್ವಾರ್ಥ ಹೆಚ್ಚಾಗಿದೆ. ಸಾಮಾಜಿಕ ರಾಜಕಾರಣವೂ ಇದರ ಹಿಂದೆ ಕೆಲಸ ಮಾಡುತ್ತಿದೆ ಎಂದು ಶ್ರೀಗಳು ನುಡಿದರು.

`ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರ’ ಕುರಿತು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ವೆಂಕಟಾಚಲ ಹೆಗಡೆ ಮಾತನಾಡಿದರು.

ಬೆಂಗಳೂರಿನ ಮಾನವ ಸಂಪನ್ಮೂಲ ಅಭಿವೃದ್ಧಿಯ ವಿಕಾಸಕರಾದ ಮುಕ್ತಾ ಬಿ  ಕಾಗಲಿ ಪಂಡಿತಾರಾಧ್ಯ ಶ್ರೀಗಳ `ಸಂಸ್ಕಾರ’ ಕೃತಿ ಲೋಕಾರ್ಪಣೆಗೊಳಿಸಿದರು.

ಶಿವಸಂಚಾರದ ಕಲಾವಿದದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪಾಪು ಗಾಂಧಿ; ಗಾಂಧಿ ಬಾಪು ಆದ ಕಥೆ  ನಾಟಕ ಪ್ರದರ್ಶನಗೊಂಡಿತು.

error: Content is protected !!