ಶಿಕ್ಷಣದಲ್ಲಿ ರಾಜ್ಯಭಾಷೆಯೇ ಸಾರ್ವಭೌಮ

ದಾವಣಗೆರೆ, ನ. 1 – ಶಿಕ್ಷಣದಲ್ಲಿ ರಾಜ್ಯಗಳ ರಾಜ್ಯಭಾಷೆಗಳು ಸಾರ್ವಭೌಮವೇ ಹೊರತು ಬೇರೆ ಭಾಷೆ ಅಲ್ಲ ಎಂದಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಆಂಗ್ಲಭಾಷೆಯ ಬಳಕೆಗೆ ಪರಿಮಿತಿ ಹಾಕೋಣ ಎಂದು ಕರೆ ನೀಡಿದ್ದಾರೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 65ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿದೆ. ರಾಜ್ಯಭಾಷೆಯು ಈ ನೆಲದ ಸಾರ್ವಭೌಮ ಭಾಷೆ ಎಂದು ಸಂವಿಧಾನ ಅಂಗೀಕರಿಸಿ ಮಾನ್ಯ ಮಾಡಿದೆ ಎಂದವರು ಹೇಳಿದರು.

ಜಗತ್ತಿನ ಜ್ಞಾನ ವಿಜ್ಞಾನಗಳನ್ನು ಅರಗಿಸಿಕೊಳ್ಳಲು ಆಂಗ್ಲ ಭಾಷೆ ಒಂದು ಬೆಳಕಿಂಡಿಯಿದ್ದಂತೆ. ಆದರೆ, ಆಂಗ್ಲ ಭಾಷೆ ಎಲ್ಲಿ ಅವಶ್ಯಕವೋ ಅಲ್ಲಿ ಮಾತ್ರ ಬಳಸಬೇಕು. ಅದಕ್ಕೊಂದು ಪರಿಮಿತಿ ಹಾಕಬೇಕು ಎಂದು ಬೀಳಗಿ ಹೇಳಿದರು.

ಕನ್ನಡಾಭಿಮಾನ ಬೆಳೆಸಿಕೊಳ್ಳುವುದೆಂದರೆ ಇತರೆ ಭಾಷೆಗಳನ್ನು ದ್ವೇಷಿಸಬೇಕೆಂಬ ತಪ್ಪು ಕಲ್ಪನೆ ಸರಿಯಲ್ಲ. ಹಲವು ಹೂಗಳ ಸುಂದರ ತೋಟದಂತೆ, ಹಲವು ಭಾಷೆಗಳ ವೈವಿಧ್ಯಪೂರ್ಣ ದೇಶ ನಮ್ಮದು ಎಂದವರು ತಿಳಿಸಿದರು.

ಕೊರೊನಾ ಸಂದರ್ಭವನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ಕೊರೊನಾ ಮಹಾಮಾರಿ ಹಿಮ್ಮೆಟ್ಟಿಸುವಲ್ಲಿ ಜಿಲ್ಲಾಡಳಿತ ಅಹರ್ನಿಶಿ ಶ್ರಮಿಸುತ್ತಿದೆ. ಸಾರ್ವಜನಿಕರೂ ಸಹ ದೈಹಿಕ ಅಂತರ, ಸ್ಯಾನಿಟೈಸರ್ ಬಳಕೆ ಮತ್ತು ಮಾಸ್ಕ್ ಕಡ್ಡಾಯವಾಗಿ ಧರಿಸಿ ಸಾಮಾಜಿಕ ಅಂತರ ಕಾಪಾಡಲು ಗಮನ ನೀಡಬೇಕಿದೆ ಎಂದು ಕಿವಿಮಾತು ಹೇಳಿದರು.

ಮುಂಬರುವ ಚಳಿಗಾಲದಲ್ಲಿ ಕೊರೊನಾ ಹೆಚ್ಚಾಗುವ ಸಾಧ್ಯತೆ ಇದ್ದು, ಯಾರೂ ಮೈ ಮರೆಯದೇ ಹೆಚ್ಚು ಜಾಗರೂಕರಾಗಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಸಮಾರಂಭಕ್ಕೆ ಗೈರಾಗಿದ್ದರು. ಹೀಗಾಗಿ ಧ್ವಜಾರೋಹಣ ಹಾಗೂ ರಾಜ್ಯೋತ್ಸವ ಸಂದೇಶವನ್ನು ಜಿಲ್ಲಾಧಿಕಾರಿ ಬೀಳಗಿ ನೆರವೇರಿಸಿದರು.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಅಧಿಕಾರಿಗಳಾದ ಎಸ್.ಆರ್. ಕಿರಣ್‍ಕುಮಾರ್ ಹಾಗೂ ಹೊನ್ನೂರಪ್ಪ ಅವರ ತಂಡದಿಂದ ಗೌರವ ವಂದನೆ ಸಲ್ಲಿಕೆ ಕಾರ್ಯಕ್ರಮ ನೆರವೇರಿತು.

ಶಾಸಕ ಎಸ್.ಎ. ರವೀಂದ್ರನಾಥ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಎಸ್‌ಪಿ ಹನುಮಂತರಾಯ, ಜಿ.ಪಂ. ಸಿಇಒ ಪದ್ಮ ಬಸವಂತಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!