ವಾಲ್ಮೀಕಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ನೀಡಲು ಆಗ್ರಹ

ಕೊಗ್ಗನೂರು ಗ್ರಾಮದ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಜಿ.ಪಂ.ಸದಸ್ಯ ಕೆ.ಎಸ್. ಬಸವಂತಪ್ಪ

ದಾವಣಗೆರೆ, ಅ.31- ಆನಗೋಡು ಹೋಬಳಿ ಕೊಗ್ಗನೂರು ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಯವರ ಜಯಂತಿ ಕಾರ್ಯಕ್ರಮವನ್ನು ಶ್ರದ್ಧಾ-ಭಕ್ತಿ ಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಕೆ.ಎಸ್.ಬಸವಂತಪ್ಪ ಮಾತನಾಡಿ, ವಾಲ್ಮೀಕಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯಲ್ಲಿ ಶೇ. 7.5 ರಷ್ಟು ಹೆಚ್ಚಿಸಿ, ಸಮುದಾಯವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಉನ್ನತ ಸ್ಥಾನಕ್ಕೆ ಬರಲು ಸರ್ಕಾರ ನೆರವಾಗಿ ನುಡಿದಂತೆ ನಡೆದುಕೊಳ್ಳಬೇಕೆಂದು ಆಗ್ರಹಿಸಿದರು. 

ವಾಲ್ಮೀಕಿ ಗುರುಪೀಠದಿಂದ ಬೆಂಗಳೂರಿನ ವರೆಗೆ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಲು ಪರಮ ಪೂಜ್ಯ ಶ್ರೀಗಳ ನೇತೃ ತ್ವದಲ್ಲಿ ಪಾದಯಾತ್ರೆ ಮಾಡಿ, ಸರ್ಕಾರವನ್ನು ಎಚ್ಚರಿಸಿದ್ದರೂ ಸಹ ಸರ್ಕಾರ ಜಾಣ ಕಿವುಡು ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದರು.  

ಹಿಂದಿನ ಸಿದ್ಧರಾಮಯ್ಯ ಸರ್ಕಾರ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದವರ ಅಭಿವೃದ್ಧಿಗಾಗಿ ಅನುದಾನವನ್ನು ಜನಸಂಖ್ಯೆಗೆ ಅನುಗುಣವಾಗಿ ಕಾಯ್ದೆಯನ್ನು ರೂಪಿಸಿ, ಅನುದಾನವನ್ನು ಮೀಸಲಿಟ್ಟು ಪ್ರತಿ ವರ್ಷ ಸುಮಾರು 30 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ, ಪ.ಜಾ. ಮತ್ತು ಪ.ಪಂ. ಸಮುದಾಯದ ಅಭಿವೃ ದ್ಧಿಗೆ ಶ್ರಮಿಸಿದ್ದರು. ಆದರೆ, ಈಗಿನ ಸರ್ಕಾರ ಈ ಸಮುದಾಯಗಳನ್ನು ಕಡೆಗಣಿಸಿ, ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಟೀಕಿಸಿದರು.

ಮಹರ್ಷಿ ವಾಲ್ಮೀಕಿಯವರು ರಾಮಾಯಣವನ್ನು ರಚಿಸಿ, ಶ್ರೀರಾಮನ ಆದರ್ಶಗಳನ್ನು ಸಮುದಾಯದ ಎಲ್ಲಾ ವರ್ಗಗಳಿಗೂ ಮಾರ್ಗದರ್ಶನ ನೀಡಿದ್ದರು. ಶ್ರೀ ರಾಮ ಮಂದಿರ  ನಿರ್ಮಾಣದ ಸ್ಥಳದಲ್ಲಿಯೇ ಮಹರ್ಷಿ ವಾಲ್ಮೀಕಿಯವರ ಮಂದಿರವನ್ನು ನಿರ್ಮಿಸಿ, ಅವರ ಆದರ್ಶಗಳನ್ನು ಜನತೆಗೆ ತಿಳಿಸಲು ನೆರವಾಗಬೇಕೆಂದು ಆಗ್ರಹಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕುಬೇರಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಮಾಜಿ ಸದಸ್ಯ ಹನುಮಂತಪ್ಪ, ಗೌಡ್ರು ಕರಿಬ ಸಪ್ಪ, ಮಂಜುನಾಥ್, ಕೆ.ಸಿ.ನಾಗಪ್ಪ, ಲೋಕೇ ಶಪ್ಪ, ಮಾಜಿ ಸದಸ್ಯರಾದ ಬಸವರಾಜಪ್ಪ, ಟಿ. ಹನುಮಂತಪ್ಪ, ಬಿ.ಬೀರಪ್ಪ, ಕೆ.ಕೆ.ವಿಜಯ್, ಮಾದಪ್ಪ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

error: Content is protected !!