ಕನ್ನಡದ ಉಳಿವಿಗೆ ಗೋಕಾಕ್ ಚಳವಳಿ ಮಾದರಿ ಹೋರಾಟ ಅಗತ್ಯ

ಕನ್ನಡದ ಉಳಿವಿಗೆ ಗೋಕಾಕ್ ಚಳವಳಿ ಮಾದರಿ ಹೋರಾಟ ಅಗತ್ಯ - Janathavaniದಾವಣಗೆರೆ, ನ. 1- ಕನ್ನಡ ನಾಡು-ನುಡಿ ಉಳಿವಿಗಾಗಿ ಗೋಕಾಕ್ ಮಾದರಿ ಚಳವಳಿ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಎಸ್.ಟಿ. ಶಾಂತಗಂಗಾಧರ್ ಅಭಿಪ್ರಾಯಪಟ್ಟರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 65ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಅಂತರ್ಜಾಲ ಮೂಲಕ ಕನ್ನಡ ನುಡಿ ಹಬ್ಬ ಕಾರ್ಯಕ್ರಮದಲ್ಲಿ `ಕನ್ನಡ ವೆನೆ ಕುಣಿದಾಡುವುದೆನ್ನದೆ, ಕನ್ನಡವೆನೆ ಕಿವಿ ನಿಮಿರುವುದು’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಕನ್ನಡದಲ್ಲಿ ಏನಿದೆ ಎಂದು ಅರ್ಥ ಮಾಡಿಕೊಳ್ಳದ ಹೊರತು ಕನ್ನಡದ ಶ್ರೇಷ್ಟತೆ ಕಾಣಲು ಸಾಧ್ಯವಿಲ್ಲ. ಜನ ಸಾಮಾನ್ಯರಲ್ಲಿ ಕನ್ನಡ ಬೆಳೆಯಬೇಕೇ ಹೊರತು, ಅಕಾಡೆಮಿಗಳು, ಪರಿಷತ್ತುಗಳು, ಸಂಘ-ಸಂಸ್ಥೆಗಳಿಂದಲ್ಲ ಎಂದು ಹೇಳಿದರು.

ಕನ್ನಡ ಉಳಿಸಬೇಕಾದ ಸರ್ಕಾರ ಇಂದು ಹಣದ ಆಸೆಗಾಗಿ ಕನ್ನಡ ವಿರೋಧಿ ಶಾಲೆಗಳನ್ನು ಪ್ರಾರಂಭಿಸುತ್ತಿದೆ. ನಮ್ಮೂರ ಶಾಲೆ ಎಂದು ಹಳ್ಳಿಗಳಲ್ಲಿ ಫಲಕ ಕಾಣುತ್ತೇವೆ. ಆದರೆ ನಮ್ಮೂರ ಮಕ್ಕಳು ಆ ಶಾಲೆಯಲ್ಲಿ ಓದದೆ ಬೇರೆ ಊರುಗಳ ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಮಾತೃಭಾಷೆಯಲ್ಲಿ ಅರ್ಥ ಮಾಡಿಕೊಂಡಷ್ಟು ಸುಲಭವಾಗಿ ಪರಭಾಷೆಯಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು. ಕನ್ನಡ ನುಡಿಯಾಗಬೇಕು ಎನ್ನುವುದಕ್ಕಿಂತ ನಡೆ ಆದಾಗ ಮಾತ್ರ ನುಡಿ ಬದುಕಲು ಸಾಧ್ಯ, ಕನ್ನಡದ ಕೆಚ್ಚು ಬೆಳೆಯಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು.

ಜಪಾನ್, ಜರ್ಮನಿ, ಚೀನಾ ಮುಂತಾದ ಅನೇಕ ದೇಶಗಳು ಇಂಗ್ಲಿಷ್ ಭಾಷೆಯನ್ನು ಮಾಧ್ಯಮವನ್ನಾಗಿ ಮಾಡಿಕೊಳ್ಳದೆಯೇ ತಂತ್ರಜ್ಞಾನದಲ್ಲಿ ಜಗತ್ತನ್ನೇ ಮೀರಿಸಿವೆ. ಆದರೆ ನಾವು, ತಂತ್ರಜ್ಞಾನ, ವೈದ್ಯ ವಿಜ್ಞಾನಕ್ಕೆ ಇಂಗ್ಲಿಷ್ ಅನಿವಾರ್ಯ ಎಂಬ ತಪ್ಪು ಕಲ್ಪನೆಯಲ್ಲಿದ್ದೇವೆ ಎಂದರು.

ಕನ್ನಡ ಎಷ್ಟು ಶ್ರೇಷ್ಠ ಎಂಬ ಜ್ಞಾನವನ್ನು 1 ರಿಂದ 10ನೇ ತರಗತಿ ಮಕ್ಕಳಿಗೆ ಕಲಿಸಿದರೆ ಕನ್ನಡ ಶ್ರೇಷ್ಠತೆ ಅರ್ಥವಾಗುತ್ತದೆ. ಆಗ ನಾವೂ ಸಹ ಬಂಗಾಳ, ತಮಿಳು ನಾಡು, ಆಂಧ್ರ ಪ್ರದೇಶದಂತಹ ಭಾಷಾ ಪ್ರೇಮ, ಬೆಳೆಸಿಕೊಂಡು ಕನ್ನಡ ನಾಡು ಬೆಳೆಸುವ ಜೊತೆ ನುಡಿಯನ್ನೂ  ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ಕನ್ನಡ ಭಾಷೆಗೆ ಮಿಗಿಲಾದ ವನಸಂಪತ್ತು, ಖನಿಜ ಸಂಪತ್ತು ಲೂಟಿಯಾಗಿದೆ.  ನಾಡಿನ ಬೆಳೆಯ ವೈವಿಧ್ಯವೂ ಭಾಷಾ ವೈವಿಧ್ಯದಂತೆ ಹಾಳಾಗಿ ಹೋಗಿದೆ. ಬೆಳೆ, ಬದುಕು, ಸಂಸ್ಕೃತಿ, ಭಾಷೆ ನಾಶವಾಗಿವೆ. ಇವೆಲ್ಲವೂ ಇಲ್ಲದಿದ್ದರೆ ನಮ್ಮ ಬದುಕೆಲ್ಲಿ? ಎಂದು ಆಲೋಚಿಸುವ ಜ್ಞಾನಿಕ ದೃಷ್ಟಿ ನಮ್ಮಲ್ಲಿ ಬೆಳೆಯಬೇಕಿದೆ. ಆಗ ಮಾತ್ರ ರಾಜ್ಯೋತ್ಸವದ ಮೂಲ ಉದ್ದೇಶ ಈಡೇರಿದಂತಾಗುತ್ತದೆ ಎಂದು ಹೇಳಿದರು.

ಕನ್ನಡವನ್ನು ಧೀಮಂತ ಸಂಸ್ಕೃತಿ ಉಳ್ಳ ನಾಡು ಎಂಬ ಕಲ್ಪನೆ ಇಟ್ಟುಕೊಂಡು ಹೋರಾಡಿದಾಗ ಮಾತ್ರ ಕುವೆಂಪು ಅವರ `ಕನ್ನಡವೆನೆ ಕುಣಿದಾಡುವುದೆನ್ನದೆ’ ಎನ್ನುವ ಆಶಯ ಈಡೇರುತ್ತದೆ ಎಂದರು.

ಹಿರಿಯ ಕವಿ ಡಾ.ಹೆಚ್.ಎಸ್. ವೆಂಕಟೇಶ ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ, ಈ ತಿಂಗಳು ಕನ್ನಡ ನಾಡು-ನುಡಿ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ಉಪನ್ಯಾಸ ಸರಣಿ ಸಾರ್ಥಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ,  ವೈವಿಧ್ಯಮಯ ಉಪನ್ಯಾಸ, ಗೀತಗಾಯನ ಮೂಲಕ ಕನ್ನಡ ಕಟ್ಟುವ, ಅಭಿಮಾನ ಮೂಡಿಸುವ ಹಾಗೂ ಹೊರನಾಡಿನ ಕನ್ನಡಿಗರಿಗೆ ಭಾಷೆ ಗೊತ್ತು ಪಡಿಸುವ, ಕಲಿಕೆಗೆ ಪ್ರೇರಣೆ ನೀಡುವ ಕಾರ್ಯಕ್ರಮ ಇದಾಗಿದೆ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.  ಗೌರವ ಕಾರ್ಯದರ್ಶಿ ಇ.ಎಂ. ಮಂಜುನಾಥ ಸ್ವಾಗತಿಸಿದರು. ರೇಖಾ ಓಂಕಾರಪ್ಪ ಮತ್ತು ತಂಡ ಹಾಗೂ ವಿನೂತನ ಮಹಿಳಾ ಸಮಾಜದ ಸದಸ್ಯರು ನಾಡಗೀತೆ ಹಾಡಿದರು.

error: Content is protected !!