ಕಳೆದ ವರ್ಷಕ್ಕೆ ಹೋಲಿಸಿದರೆ ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಸಾವುಗಳ ಪ್ರಮಾಣ ಶೇ.80ರಷ್ಟು ಹೆಚ್ಚಳ
ದಾವಣಗೆರೆ, ಅ. 30 – ಕೊರೊನಾ ಸೋಂಕು ಹೆಚ್ಚಾಗಿರುವುದರ ನಡುವೆ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾವುಗಳ ಪ್ರಮಾಣ ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಶೇ.80 ರಷ್ಟು ಗಣನೀಯ ಏರಿಕೆಯಾಗಿದೆ.
2019ರ ಆಗಸ್ಟ್ ತಿಂಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ 370 ಸಾವುಗಳು ಸಂಭವಿಸಿದ್ದರೆ, ಈ ವರ್ಷ ಆಗಸ್ಟ್‌ನಲ್ಲಿ ಸಾವುಗಳ ಸಂಖ್ಯೆ 788ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣ ಕಳೆದ ಸಾಲಿಗೆ ಹೋಲಿಸಿದರೆ ಎರಡು ಪಟ್ಟಿನಷ್ಟು ಹೆಚ್ಚಾಗಿದೆ.
2019ರ ಸೆಪ್ಟೆಂಬರ್‌ನಲ್ಲಿ 488 ಸಾವುಗಳು ಸಂಭವಿಸಿದ್ದರೆ, ಈ ವರ್ಷ 763 ಸಾವುಗಳು ಉಂಟಾಗಿವೆ. ಇದು ಕಳೆದ ಸಾಲಿಗೆ ಹೋಲಿಸಿದರೆ ಒಂದೂವರೆ ಪಟ್ಟು ಹೆಚ್ಚಾಗಿದೆ.
ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳುಗಳಲ್ಲಿ ಕಳೆದ 2019ಕ್ಕೆ ಹೋಲಿಸಿದರೆ, ಈ ವರ್ಷ ಸಾವಿನ ಪ್ರಮಾಣ ಶೇ.80ರಷ್ಟು ಹೆಚ್ಚಳ ವಾಗಿರುವುದು ಆಘಾತಕಾರಿ ಯಾಗಿದೆ.
ಸರ್ಕಾರದ ಮಾಹಿತಿಯ ಪ್ರಕಾರ ಈ ವರ್ಷ ಆಗಸ್ಟ್ ತಿಂಗ ಳಲ್ಲಿ 5 ಸಾವಿರದಷ್ಟು ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಆರು ಸಾವಿರದಷ್ಟು ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದವು. ಈ ಎರಡು ತಿಂಗಳಲ್ಲಿ ಒಟ್ಟಾರೆ 143 ಸಾವುಗಳು ಕೊರೊನಾದಿಂದ ಸಂಭವಿಸಿವೆ ಎಂದು ಸರ್ಕಾರದ ಅಂಕಿ, ಅಂಶಗಳು ತಿಳಿಸಿವೆ.
ಆದರೆ, ಈ ಎರಡು ತಿಂಗಳ ಅವಧಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿ ದರೆ ಪಾಲಿಕೆ ವ್ಯಾಪ್ತಿ ಯಲ್ಲಿ 858 ಹೆಚ್ಚು ಸಾವುಗಳು ಸಂಭವಿಸಿರುವುದು ಗಮನಾರ್ಹ ವಾಗಿದೆ. ಆಸಕ್ತಿಕರ ಅಂಶವೆಂದರೆ ಅದಕ್ಕೂ ಹಿಂದಿನ ತಿಂಗಳುಗಳಲ್ಲಿ ಕಳೆದ ವರ್ಷ ಹಾಗೂ ಈಗಿನ ವರ್ಷದ ಸಾವುಗಳ ನಡುವೆ ಹೆಚ್ಚೇನೂ ವ್ಯತ್ಯಾಸವಿಲ್ಲ.
2020ರ ಜನವರಿಯಿಂದ ಮೇ ತಿಂಗಳ ನಡುವೆ ಪಾಲಿಕೆಯಲ್ಲಿ ದಾಖಲಾದ ಸಾವುಗಳ ಪ್ರಮಾಣ ಕಳೆದ ವರ್ಷಕ್ಕಿಂತ ಕಡಿಮೆ ಇದೆ.
ಅದರಲ್ಲೂ ಲಾಕ್‌ಡೌನ್ ಹೇರಿಕೆಯಾದ ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಸಾವುಗಳ ಪ್ರಮಾಣ ಶೇ.20ರಷ್ಟು ಕಡಿಮೆಯಾಗಿದೆ. ಮಾರ್ಚ್‌ನಿಂದ ಮೇ ನಡುವಿನ ಮೂರು ತಿಂಗಳಲ್ಲಿ ಕಳೆದ ವರ್ಷ 1063 ಸಾವುಗಳು ಸಂಭವಿಸಿದ್ದವು. ಈ ವರ್ಷ ಇದೇ ಮೂರು ತಿಂಗಳಿನಲ್ಲಿ 850 ಸಾವುಗಳು ಉಂಟಾಗಿವೆ.
ಕಳೆದ ವರ್ಷ ಜೂನ್ ಹಾಗೂ ಜುಲೈ ತಿಂಗಳಲ್ಲಿ 715 ಸಾವುಗಳು ಸಂಭವಿಸಿದ್ದವು. ಈ ವರ್ಷ ಈ ತಿಂಗಳುಗಳಲ್ಲಿ 807 ಸಾವುಗಳು ಕಂಡು ಬಂದಿವೆ. ಸಾವಿನ ಸಂಖ್ಯೆಯಲ್ಲಿ ಶೇ.12ರಷ್ಟು ಹೆಚ್ಚಳವಾಗಿದೆ.
ಜುಲೈ ಅಂತ್ಯದವರೆಗೆ ಜಿಲ್ಲೆಯಲ್ಲಿ 2098 ಕೊರೊನಾ ಪ್ರಕರಣಗಳು ಕಂಡು ಬಂದಿದ್ದರೆ, ಸೋಂಕಿನಿಂದ 48 ಸಾವುಗಳು ದಾಖಲಾಗಿದ್ದವು. ಅಲ್ಲಿಯವರೆಗೂ ಕಳೆದ ವರ್ಷ ಹಾಗೂ ಈ ವರ್ಷದ ಸಾವುಗಳಲ್ಲಿ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ಆದರೆ, ಆಗಸ್ಟ್ ತಿಂಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಕಂಡು ಬಂದಿದ್ದವು. ಇದೇ ತಿಂಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ 788 ಸಾವುಗಳು ದಾಖಲಾಗಿವೆ. ಸೆಪ್ಟೆಂಬರ್‌ನಲ್ಲಿ 6 ಸಾವಿರಕ್ಕೂ ಹೆಚ್ಚು ಸೋಂಕುಗಳು ಕಂಡು ಬಂದಿದ್ದವು. ಇದೇ ತಿಂಗಳು ಪಾಲಿಕೆ ವ್ಯಾಪ್ತಿಯಲ್ಲಿ 763 ಸಾವುಗಳು ಉಂಟಾಗಿವೆ.
ನೋಂದಣಿಯಾದ ಸಾವುಗಳು : ಪಾಲಿಕೆ ವ್ಯಾಪ್ತಿಯಲ್ಲಿ ನೋಂದಣಿಯಾದ ಸಾವುಗಳು ಹಾಗೂ ಸಂಭವಿಸಿದ ಸಾವುಗಳ ನಡುವೆ ವ್ಯತ್ಯಾಸ ಇದೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದ ನಿವಾಸಿ ಮೃತಪಟ್ಟಾಗ ಹೊರಗಡೆ ಅಂತ್ಯಸಂಸ್ಕಾರ ನಡೆಸಿರಬಹುದು. ಆಗ ಸಾವಿನ ಲೆಕ್ಕ ಬೇರೆಡೆಗೆ ದಾಖಲಾಗುತ್ತದೆ. ಅದೇ ರೀತಿ ಹೊರಗಡೆಯವರ ಅಂತ್ಯಸಂಸ್ಕಾರ ಇಲ್ಲಿ ನಡೆಸಿದಾಗ ಪಾಲಿಕೆಯಲ್ಲಿ ಸಾವು ದಾಖಲಾಗುತ್ತದೆ ಎಂದವರು ವಿವರಿಸಿದ್ದಾರೆ.