ಕೋವಿಡ್‌ಗೆ ಟಿ.ವಿ ಮಾಧ್ಯಮಗಳಲ್ಲಿ ಹೆಚ್ಚು ವೈಭವೀಕರಣ ಬೇಡ

ಹರಪನಹಳ್ಳಿ, ಜು.27- ಕೋವಿಡ್ ವಿಚಾರವನ್ನು ಟಿ.ವಿ ಮಾಧ್ಯಮಗಳಲ್ಲಿ ಹೆಚ್ಚು ವೈಭವೀಕರಿಸುವ ಬದಲು ಜನರಲ್ಲಿ ಜಾಗೃತಿ ಮೂಡಿಸುವ ಜನಸಾಮಾನ್ಯರಿಗೆ ಧೈರ್ಯ ಹೇಳುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಕರುಣಾಕರ ರೆಡ್ಡಿ ಹೇಳಿದರು.

ಅನಾರೋಗ್ಯದಿಂದ ನಿಧನರಾದ   ಅರಸಿಕೇರಿ ಪೊಲೀಸ್ ಠಾಣೆಯಲ್ಲಿ ಸೇವೆಯಲ್ಲಿದ್ದ ಕೊರೊನಾ ವಾರಿಯರ್ ಮುಖ್ಯ ಪೇದೆ ಎಂ.ರವಿ ಉಪ್ಪಾರ ಅವರ ಗೋವೇರಹಳ್ಳಿಯಲ್ಲಿರುವ ಮನೆಗೆ ಇಂದು ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಪಟ್ಟಣದ ತಮ್ಮ ಕಚೇರಿ ಆವರಣದಲ್ಲಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಕೊರೊನಾ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಕೋವಿಡ್ ಚಿಕಿತ್ಸಾ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳು ಇನ್ನೂ ಸುಧಾರಿಸಬೇಕಾಗಿದೆ. ಕೊರೊನಾಗೆ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಲಸಿಕೆ ಲಭ್ಯವಾಗುತ್ತದೆ. ಅಲ್ಲಿಯವರೆಗೂ ಬಹಳ ಜಾಗೃತರಾಗಿ ಇರಬೇಕು ಎಂದರು. ಬಿಜೆಪಿ ಯುವ ಮೋರ್ಚಾದಿಂದ ಹಳ್ಳಿ ಹಳ್ಳಿಗಳಲ್ಲಿ ಕೊರೊನಾ ಜಾಗೃತಿ ಜಾಥಾ ಬರುತ್ತದೆ. ಜನರು ಸಹಕಾರ ನೀಡಬೇಕು ಎಂದರು. 

ಗೋವೇರಹಳ್ಳಿ ಗ್ರಾಮದ ಮುಖ್ಯ ಪೇದೆ ರವಿ ಉಸಿರಾಟದ ಸಮಸ್ಯೆ ಎಂದು ದಾವಣಗೆರೆಯ ಎಸ್.ಎಸ್.ಹೈಟೆಕ್ ಆಸ್ಪತ್ರೆ ಸೇರಿಸಿದಾಗ 7 ತಾಸು ಚಿಕಿತ್ಸೆ ನೀಡದೆ ಸತಾಯಿಸಿದ್ದು, ನಂತರ ಆತ ಮೃತಪಟ್ಟಿದ್ದಾನೆ. ಅಂತಹ ಆಸ್ಪತ್ರೆ ವಿರುದ್ಧ ಸೂಕ್ತ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಕೋವಿಡ್ ಸಂಕಷ್ಟದಲ್ಲೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಿಂತಿಲ್ಲ ಎಂದು ಕುರುಣಾಕರ ರೆಡ್ಡಿ ತಿಳಿಸಿದ್ದಾರೆ. ಅವರು ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ್ದು, ಕೊರೊನಾದ ಸಂಕಷ್ಟದಲ್ಲೂ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿಲ್ಲ. ನೆರೆ ಹಾವಳಿ ನಂತರ ಕೋವಿಡ್ ಅನ್ನು ಸಮರ್ಥವಾಗಿ ಯಡಿಯೂರಪ್ಪ ನಿಭಾಯಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್‌, ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ, ಜಿಲ್ಲಾ ಬಿಜೆಪಿ ಎಸ್ಟಿ ಘಟಕದ ಕಾರ್ಯದರ್ಶಿ ಆರ್.ಲೋಕೇಶ್‌, ತಾಲ್ಲೂಕು ಬಿಜೆಪಿ ಎಸ್ಟಿ ಘಟಕದ ಅಧ್ಯಕ್ಷ ಟಿ.ಮನೋಜ್, ತಾಲ್ಲೂಕು ಬಿಜೆಪಿ ಯುವ ಘಟಕದ ಅಧ್ಯಕ್ಷ ವಿನಯ್‌ಕುಮಾರ್‌, ಕಾರ್ಯದರ್ಶಿ ಟಿ.ಶಿವಾನಂದ್‌, ಪುರಸಭೆ ಸದಸ್ಯರಾದ ದ್ಯಾಮಜ್ಜಿ ರೊಕ್ಕಪ್ಪ, ಎಂ.ಕೆ.ಜಾವೀದ್, ಕಿರಣ್‌ಕುಮಾರ್ ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಯಡಿಹಳ್ಳಿ ಶೇಖರಪ್ಪ, ಆರ್.ಕರೇಗೌಡ, ಚೌಡಪುರ ಷಣ್ಮುಖಪ್ಪ, ಕೆಂಗಳ್ಳಿ ಪ್ರಕಾಶ್‌, ರಾಘವೇಂದ್ರ ಶೆಟ್ಟಿ, ತಿಮ್ಮಣ್ಣ, ಎಂ.ಸಂತೋಷ್‌, ಯು.ಪಿ.ನಾಗರಾಜ್‌, ಡಿವೈಎಸ್ಪಿ ಮಲ್ಲೇಶ್‌ ದೊಡ್ಮನಿ, ಸಿಪಿಐ ಕೆ.ಕುಮಾರ್‌, ಪಿ.ಎಸ್.ಐ. ಪ್ರಕಾಶ್‌ ಸೇರಿದಂತೆ ಇತರರು ಇದ್ದರು.

error: Content is protected !!