ದಾವಣಗೆರೆ, ಅ. 28- ಜಾನಪದ ತಜ್ಞ ಎಂದೇ ಗುರುತಿಸಿಕೊಂಡಿರುವ, ಸರಳ ಹಾಗೂ ಸಜ್ಜನಿಕೆಗೆ ಹೆಸರಾದ ಡಾ.ಎಂ.ಜಿ. ಈಶ್ವರಪ್ಪ ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಶೈಕ್ಷಣಿಕ ನಗರಿ ಯಾದ ದಾವಣಗೆರೆಗೆ ಹೆಮ್ಮೆಯ ಗರಿ.
ಜಾನಪದ ಬದುಕು ಹಾಗೂ ಸಂಸ್ಕೃತಿಯಲ್ಲಿ ಅಂತರ್ಗತವಾಗಿರುವ ಅವೈಜ್ಞಾನಿಕವಾದ, ಸಮಾಜದ ಪ್ರಗತಿಗೆ ಮಾರಕವಾದ ಅಂಶಗಳನ್ನು ಗುರುತಿ ಸುವ ಮೂಲಕ ಜಾನಪದವನ್ನು ಪರಿಷ್ಕ ರಣೆ ಮಾಡುವತ್ತ ತಮ್ಮ ವಿದ್ವತ್ತನ್ನು ಪ್ರದ ರ್ಶಿಸಿದ ಕೀರ್ತಿ ಈಶ್ವರಪ್ಪ ಅವರದ್ದು.
ಜನಪದ ಬದುಕಿನೊಳಗೆ ಅಂತ ರ್ಗತವಾಗಿರುವ ಬಾಲ್ಯವಿವಾಹ, ದೇವ ದಾಸಿ ಪದ್ಧತಿ, ಪ್ರಾಣಿ ಬಲಿಯಂತಹ ಮಾರಕ ಅಂಶಗಳನ್ನು ವಿರೋಧಿಸುವ ಮೂಲಕ, ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವಂತಹ ಕಲೆ ಹಾಗೂ ಸಂಸ್ಕೃತಿಯನ್ನು ಪೋಷಿಸುವ ಮೂಲಕ ಜಾನಪದದ ಉಳಿವಿಗಾಗಿ ತಮ್ಮದೇ ಆದ ನಿಲುವುಗಳನ್ನು ಎತ್ತಿ ಹಿಡಿದ್ದಾರೆ.
ಡಿಸೆಂಬರ್ 2, 1950ರಲ್ಲಿ ಜನಿ ಸಿದ ಡಾ. ಎಂ.ಜಿ. ಈಶ್ವರಪ್ಪ, 1972 ರಲ್ಲಿ ಕನ್ನಡದಲ್ಲಿ ಎಂ.ಎ., ಡಿಪ್ಲೋಮಾ ಇನ್ ಇಂಗ್ಲಿಷ್, 1990ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್ಡಿ ಪದವಿ ಪಡೆದರು. ಮೈಸೂರು ವಿವಿ ಸೆನೆಟ್ ಸದಸ್ಯರಾಗಿ, ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಎರಡು ಬಾರಿ ಕರ್ನಾಟಕ ಜನಪದ ಅಕಾಡೆಮಿ ಸದಸ್ಯರಾಗಿ (1991-94, 1994-97), ಹಂಪಿ ಕನ್ನಡ ವಿಶ್ವವಿದ್ಯಾ ನಿಲಯದ ಸಿಂಡಿಕೆಟ್ ಸದಸ್ಯ, ಕುವೆಂಪು ವಿವಿ ಶಿಕ್ಷಣ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. `ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ’ ವಿಷಯದಲ್ಲಿ ಪಿಹೆಚ್.ಡಿ. ಪದವಿ ಪಡೆದ ಈಶ್ವರಪ್ಪ, ಹಲವಾರು ವಿಷಯಗಳ ಕುರಿತು ಅಧ್ಯಯನ ನಡೆಸಿ ಸಾಕಷ್ಟು ಲೇಖನ ಹಾಗೂ ಕೃತಿಗಳನ್ನು ಸಾಹಿತ್ಯ ವಲಯಕ್ಕೆ ನೀಡಿದ್ದಾರೆ. ಜಾನಪದ ಕೃತಿಗಳಲ್ಲಿ `ಮ್ಯಾಸಬೇಡರು’ ಇವರ ಮೊದಲ ಅಧ್ಯಯನದ ಕೃತಿಯಾಗಿದೆ.
ಜಾನಪದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿದ್ದರ ಫಲವಾಗಿ 2011ರಲ್ಲಿ ಶಿವಮೊಗ್ಗ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, 2014ರಲ್ಲಿ ದಾವಣಗೆರೆ ಜಿಲ್ಲಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2017ರಲ್ಲಿ ದಾವಣಗೆರೆ ತಾಲ್ಲೂಕು ಶ್ಯಾಗಲೆಯಲ್ಲಿ ನಡೆದ ಕುವೆಂಪು ನುಡಿ ಜಾತ್ರೆಯ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಈಶ್ವರಪ್ಪ ಅವರಿಗೆ ಸಂದ ಪ್ರಶಸ್ತಿಗಳ ಪೈಕಿ ಗುಂಡ್ಮಿ ಜಾನಪದ ಪ್ರಶಸ್ತಿ, ಕು.ಶಿ. ಹರಿದಾಸಭಟ್ಟ ಪ್ರಶಸ್ತಿ, ಕರ್ನಾಟಕ ಅಕಾಡೆಮಿ ಗೌರವ ಫೆಲೋಶಿಪ್, ಕರ್ನಾಟಕ ಜಾನಪದ ಅಕಾಡೆಮಿ ತಜ್ಞ ಪ್ರಶಸ್ತಿ, ರಂಗಸಂಸ್ಥಾನ ಜಾನಪದ ಪ್ರಶಸ್ತಿ, ಮಹಾಲಿಂಗ ರಂಗ ಪ್ರಶಸ್ತಿಗಳು ಪ್ರಮುಖವು.
ಈಶ್ವರಪ್ಪ ಅವರು, ಇದುವರೆವಿಗೂ 16 ಪುಸ್ತಕಗಳನ್ನು ಬರೆದಿದ್ದಾರೆ. ಮ್ಯಾಸಬೇಡರು, ಬೇಸಾಯ ಪದ್ದತಿ, ಬಂಗಾರ ಕೂದಲ ಜೈರಾನಿ, ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ (ಮಹಾಪ್ರಬಂಧ), ಗ್ರಾಮೀಣ ಸಂಸ್ಕೃತಿ ಸಂದರ್ಭಕೋಶ-ನಾಟಕ, ಜಾನಪದ ಇಬ್ಬನಿಗಳು (ಸಂಪ್ರಬಂಧಗಳು), ಹುನಗುಂದ ಬಾಬಣ್ಣ, ಕೃಷಿ ಜಾನಪದ ಇವು ಪ್ರಮುಖ ಪುಸ್ತಕಗಳಾಗಿವೆ.
ದಾವಣಗೆರೆಯ ಪ್ರತಿಷ್ಠಿತ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ಪ್ರತಿಮಾ ಸಭಾದ ಕಾರ್ಯದರ್ಶಿ, ಉಪಾಧ್ಯಕ್ಷ, ಅಧ್ಯಕ್ಷರಾಗಿಯೂ ಈಶ್ವರಪ್ಪ ಕಳೆದ 25 ವರ್ಷಗಳಿಂದ ವಿವಿಧ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.