ಬಾಪೂಜಿ ಡೆಂಟಲ್ ಆಸ್ಪತ್ರೆಯಲ್ಲಿ ‘ಕ್ಯಾಡ್ ಕ್ಯಾಮ್’ ತಂತ್ರಜ್ಞಾನ

ದಾವಣಗೆರೆ,ಅ.28- ಈಗಾಗಲೇ ದಂತ ವೈದ್ಯಕೀಯ ಚಿಕಿತ್ಸೆಯಲ್ಲಿ ಮಧ್ಯ ಕರ್ನಾಟಕದಲ್ಲೇ ಹೆಸರು ಮಾಡಿರುವ ನಗರದ ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯವು , ರೋಗಿಗಳಿಗೆ ಮತ್ತಷ್ಟು ಉತ್ಕೃಷ್ಟ ಗುಣಮಟ್ಟದ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಇದೀಗ ಆಧುನಿಕ ‘ಕ್ಯಾಡ್ ಕ್ಯಾಮ್’ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.

ಈ ಸಂಬಂಧ ಕಾಲೇಜಿನಲ್ಲಿ ಮೊನ್ನೆ ವಿಜಯದಶಮಿಯಂದು ಏರ್ಪಾಡಾಗಿದ್ದ ಸರಳ ಸಮಾರಂಭದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ತಗೌರವ ಕಾರ್ಯದರ್ಶಿಯೂ ಆಗಿರುವ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಟೇಪ್ ಕತ್ತರಿಸುವುದರ ಮೂಲಕ ನೂತನ ತಂತ್ರಜ್ಞಾನದ ಉಪಕರಣ ವನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಶುಭ ಹಾರೈಕೆಯ ನುಡಿಗಳನ್ನಾಡಿದ ಎಸ್ಸೆಸ್, ಈ ಆಧುನಿಕ ತಂತ್ರಜ್ಞಾನದ ಸೌಲಭ್ಯವನ್ನು ದಾವಣಗೆರೆ ಸುತ್ತಮುತ್ತಲಿನ ಎಲ್ಲಾ ದಂತ ವೈದ್ಯರು ಮತ್ತು ತಂತ್ರಜ್ಞರು ಸದುಪಯೋಗಪಡಿಸಿಕೊಳ್ಳುವುದರ ಮೂಲಕ ರೋಗಿಗಳಿಗೆ ಗುಣಮಟ್ಟದ ಹಾಗೂ ಶೀಘ್ರ ಸೇವೆ ಸಲ್ಲಿಸಬೇಕು ಎಂದು ಕಿವಿ ಮಾತು ಹೇಳಿದರು.

ಹಿರಿಯ ದಂತ ವೈದ್ಯರೂ ಆಗಿರುವ ಬಾಪೂಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನಿರ್ದೇಶಕ ಡಾ. ಕೆ. ಸದಾಶಿವ ಶೆಟ್ಟಿ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಆಧುನಿಕ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿರುವ ಕೌಶಲ್ಯಪೂರ್ಣತೆ ಕುರಿತಂತೆ ಮಾರ್ಮಿಕವಾಗಿ ವಿವರಿಸಿದರು.

ಈವರೆಗೂ ಕೃತಕ ಹಲ್ಲುಗಳನ್ನು ಕರಕುಶಲತೆಯಿಂದಲೇ ಮಾಡಬೇಕಾಗಿತ್ತು.  ಇದರಿಂದ ನಿಖರವಾದ ಚಿಕಿತ್ಸೆ ಒದಗಿಸುವುದು ಒಂದು ಸವಾಲಾಗಿತ್ತು. ಆದರೆ, ಇದೀಗ ಅಳಡಿಸಿರುವ ‘ಕ್ಯಾಡ್ ಕ್ಯಾಮ್’ ಎಂಬ ಹೆಸರಿನ ಆಧುನಿಕ ತಂತ್ರಜ್ಞಾನ ಉಪಕರಣದ ಸೌಲಭ್ಯದಿಂದ ಚಿಕಿತ್ಸೆಯ ವಿಧಾನವನ್ನು ಸ್ವಲ್ಪವೂ ವ್ಯತ್ಯಾಸವಾಗದಂತೆ ಕಂಪ್ಯೂಟರ್ ನಲ್ಲಿಯೇ ವಿನ್ಯಾಸಗೊಳಿಸಿ ಅದರ ಪಡಿಯಚ್ಚು ಪಡೆಯಬಹುದಾಗಿದೆ ಎಂದು ಡಾ. ಸದಾಶಿವ ಶೆಟ್ಟಿ ತಿಳಿಸಿದರು.

error: Content is protected !!