`ಪಂಚಮಸಾಲಿ’ಯನ್ನು ಪ್ರವರ್ಗ 2ಎ ಗಾಗಿ ಶ್ರೀಗಳಿಂದ ಸತ್ಯಾಗ್ರಹ : ಸರ್ಕಾರದ ಭರವಸೆ

ಸತ್ಯಾಗ್ರಹದ ಸಂದರ್ಭದಲ್ಲಿ ಸ್ವಾಮೀಜಿಗೆ ದೂರವಾಣಿ ಕರೆ ಮಾಡಿದ ಮುಖ್ಯಮಂತ್ರಿ :  ಸರ್ಕಾರದ ಭರವಸೆಯ ಕಾರಣ, ಸತ್ಯಾಗ್ರಹ ಹಿಂತೆಗೆದುಕೊಂಡ ಸ್ವಾಮೀಜಿ

ಗಡುವಿನಲ್ಲಿ ಭರವಸೆ ಈಡೇರದಿದ್ದರೆ ಸಂಗಮದಿಂದ ರಾಜಧಾನಿಗೆ ಪಾದಯಾತ್ರೆ : ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ 

ಬೆಳಗಾವಿ, ಅ.28-  ಬರುವ ನವೆಂಬರ್​ ಅಂತ್ಯದೊಳಗೆ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2 ಎ ಹಾಗೂ ಕೇಂದ್ರದಿಂದ ಒಬಿಸಿ ಮೀಸಲಾತಿಯನ್ನು ನೀಡದಿ ದ್ದರೆ, ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರವನ್ನು ಎಚ್ಚರಿಸಿದ್ದಾರೆ. 

ಮೀಸಲಾತಿಗೆ ಆಗ್ರಹಿಸಿ ಸುವರ್ಣ ವಿಧಾನಸೌಧದ ಎದುರು ಸ್ವಾಮೀಜಿ ಇಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸಮಾಜದ ನೂರಾರು ಸಂಖ್ಯೆಯಲ್ಲಿ ಜನರು ಕೂಡ ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಸ್ವಾಮೀಜಿ ನವೆಂಬರ್ 28ರೊಳಗೆ ನಮ್ಮ ಬೇಡಿಕೆ ಈಡೇರದಿದ್ದರೆ,  ಸಂಗಮದಿಂದ ರಾಜಧಾನಿಗೆ ಪಾದಯಾತ್ರೆ ನಡೆಸಲಾಗುವುದು ಎಂದು ಒಂದು ತಿಂಗಳ ಗಡವನ್ನು ನೀಡಿದರು. ಈ ವೇಳೆ ಸ್ವಾಮೀಜಿ ಮುಖ್ಯಮಂತ್ರಿಯೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ ಎಚ್ಚರಿಕೆ ನೀಡಿದರು.

ಸ್ವಾಮೀಜಿಯವರ ಈ ಗಡುವಿನ ಬಳಿಕ ಸಿಎಂ ಬಿ.ಎಸ್.​ ಯಡಿಯೂರಪ್ಪ, ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತುಕತೆ ನಡೆಸಿದರು. ಈ ಕುರಿತು ಮಾತನಾಡಿದ ಡಿಸಿಎಂ ಸವದಿ, ಪಂಚಮಸಾಲಿ ಸಮಾಜದ ಋಣ ಭಾರ ನನ್ನ ಮೇಲಿದೆ. ವಿಧಾನಸಭೆಯ ಮೂರನೇ ಮೆಟ್ಟಿಲು ಏರಲು ಸಮುದಾಯ ಕೊಡುಗೆ ನೀಡಿದೆ. ಋಣವನ್ನು ತೀರಿಸಿವ ಕೆಲಸವನ್ನು ಮಾಡುತ್ತೇನೆ ಎಂದರು. ಅಲ್ಲದೇ ಮುಖ್ಯ ಮಂತ್ರಿಗಳು ಎಲ್ಲಾ ಶಾಸಕರನ್ನು ಕರೆದುಕೊಂಡು ಬರುವಂತೆ ಸೂಚನೆ ನೀಡಿದ್ದಾರೆ. ಸಿಎಂಗೆ ಮನವರಿಕೆ ಮಾಡಿಕೊಟ್ಟು ನ್ಯಾಯ ಕೊಡಿಸುತ್ತೇವೆ. ಉಪವಾಸ ಸತ್ಯಾಗ್ರಹ ವಾಪಸ್ ಪಡೆಯುವಂತೆ ಮನವಿ ಮಾಡಿದರು. 

ಈ ಹಿನ್ನೆಲೆಯಲ್ಲಿ ಸವದಿ ಮನವಿ ಮೇರೆಗೆ ಎಳನೀರು ಸೇವಿಸಿದ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.

ಪಂಚಮಸಾಲಿ ಸಮಾಜದ ಶೇ. 90ರಷ್ಟು ಜನರು ಬಡವರಾಗಿದ್ದು, ಕೃಷಿಯನ್ನೇ ಜೀವನಾ ಧಾರವಾಗಿ ಮಾಡಿಕೊಂಡಿದ್ದಾರೆ. ಸಮುದಾಯಕ್ಕೆ ಮೀಸಲಾತಿ ಬೇಕು ಎನ್ನುವುದು 2012ರಿಂದ ನಮ್ಮ ಬೇಡಿಕೆಯಾಗಿದ್ದು, ಇದು ನ್ಯಾಯಯುತವಾಗಿದೆ. 

ಆಗಿನ ಸರ್ಕಾರ ನಮ್ಮ ಬೇಡಿಕೆ ಮನಗಂಡು ಈ ಕುರಿತು ಸಂಪುಟ ಉಪ ಸಮಿತಿ ರಚಿಸಿತ್ತು. ಅಲ್ಲದೇ, ಸಮಿತಿ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು, ಆದರೆ, ನಮ್ಮ ಬೇಡಿಕೆ ಇಂದಿಗೂ ಈಡೇರಿಲ್ಲ ಎಂದು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ನಾವು ನಮಗಾಗಿ ಹೋರಾಟ ಮಾಡುತ್ತಿಲ್ಲ. ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ಈ ಆಗ್ರಹವಾಗಿದೆ, ಈ ಬೇಡಿಕೆಗೆ ಮುಖ್ಯಮಂತ್ರಿಗಳು ಸ್ಪಂದಿಸಬೇಕು ಎಂದರು.

error: Content is protected !!