ಜಿಲ್ಲಾಸ್ಪತ್ರೆಗೆ ಡಿಸಿ ದಿಢೀರ್ ಭೇಟಿ: ಪರಿಶೀಲನೆ

ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಸಿಗದ ಆರೋಪ ಹಿನ್ನೆಲೆ ವೈದ್ಯಕೀಯ ಸಿಬ್ಬಂದಿಗಳಿಗೆ ಶಿಸ್ತು ಕ್ರಮದ ಎಚ್ಚರಿಕೆ

ದಾವಣಗೆರೆ, ಜು.26- ನಗರದಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ದೊರಕುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಜಿಲ್ಲಾಸ್ಪತ್ರೆಯಲ್ಲೂ ಕೂಡ ಚಿಕಿತ್ಸೆ ಸಿಗದೇ ನಾನ್ ಕೋವಿಡ್ ರೋಗಿಗಳು ಪರದಾಟ ನಡೆಸಿದ್ದು, ಜಿಲ್ಲಾಸ್ಪತ್ರೆಯ ಮುಂಭಾಗ ದಿಕ್ಕು ತೋಚದೆ ರೋಗಿಗಳು ವ್ಹೀಲ್ ಚೇರ್, ಸ್ಟ್ರೆಚ್ಚರ್ ನಲ್ಲಿ ತೊಂದರೆ ‌ಅನುಭವಿಸಿದ್ದಾರೆನ್ನಲಾಗಿದೆ. 

ಕೋವಿಡ್ ಆಸ್ಪತ್ರೆಯಾಗಿ ಜಿಲ್ಲಾಸ್ಪತ್ರೆ ಯನ್ನು ಮಾಡಲಾಗಿದ್ದು, ಇಲ್ಲಿಗೆ ಬಂದರೆ ಖಾಸಗಿ ಆಸ್ಪತ್ರೆಗೆ ರೆಪರ್ ಮಾಡಿ ಕಳಿಸಲಾಗುತ್ತೆ. ಆದರೆ ಖಾಸಗಿಯಲ್ಲಿ ಮಾತ್ರ ಬೆಡ್ ಇಲ್ಲ ಎನ್ನುವ ಉತ್ತರ ಕೇಳಿ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಜಿಲ್ಲಾಸ್ಪತ್ರೆಗೆ ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ರೋಗಿಗಳಿಗೆ ಚಿಕಿತ್ಸೆ ನೀಡದೇ ಸತಾಯಿಸಿದ್ದಲ್ಲಿ ಶಿಸ್ತು ಕ್ರಮ ಜರುಗಿಸುವುದಾಗಿ ವೈದ್ಯಕೀಯ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು. 

ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತ ನಾಡಿದ ಡಿಸಿ, ಈಗಾಗಲೇ ನಗರದಲ್ಲಿರುವ ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಬೆಡ್ ನೀಡಲು ಒಪ್ಪಿಕೊಂಡಿದ್ದಾರೆ. ಇಂದು ನಾನ್ ಕೋವಿಡ್ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಅವರು ಚಿಕಿತ್ಸೆಗಾಗಿ ಮೊದಲು ಬೇರೆ ಬೇರೆ ಆಸ್ಪತ್ರೆಗೆ ಹೋಗಿ ಬಂದು ನಂತರ ಜಿಲ್ಲಾಸ್ಪತ್ರೆಗೆ ಸೇರಿದ್ದಾರೆ ಎಂದು ತಿಳಿಸಿದರು. 

ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲಾ ಸೌಲಭ್ಯವಿದ್ದು, ಚಿಕಿತ್ಸೆಗೆ ನಿರಾಕರಿಸಿದರೇ ಅಂತಹ ಆಸ್ಪತ್ರೆಗಳ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ದೂರು ದಾಖಲಿಸಲಾಗುವುದು. ಯಾರಾದರೂ ಚಿಕಿತ್ಸೆ ಸಿಗದೇ ಇದ್ದರೆ ನನಗೆ ಲಿಖಿತ ದೂರು ನೀಡಬೇಕು. ದೂರು ಸಾಬೀತಾದರೆ ಅಗತ್ಯವಾಗಿ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇನೆಂದು ಸ್ಪಷ್ಟಪಡಿಸಿದ್ದಾರೆ.

error: Content is protected !!