ಮಳೆ ಬಂದರೇನು? ಲಾಕ್‌ಡೌನ್ ಇದ್ದರೇನು? ಅಗತ್ಯ ವಸ್ತುಗಳ ಸೇವೆಗೆ ಅಡೆ ತಡೆ ಇಲ್ಲ. ದಾವಣಗೆರೆಯ ಅಶೋಕ ರಸ್ತೆಯಲ್ಲಿ ದ್ವಿಚಕ್ರ ಸವಾರನೊಬ್ಬ ಮಳೆಯಲ್ಲಿಯೇ ಸರಿಸಿದ್ದ ಬ್ಯಾರಿಕೇಡ್‌ಗಳ ನಡುವೆ ಬಾಳೆ ಎಲೆ ಕೊಂಡೊಯ್ಯುತ್ತಿರುವುದು.
___________________________________________________
ಒಳ ರಸ್ತೆಗಳನ್ನು ಹೊರತುಪಡಿಸಿ, ಬಹುತೇಕ ಮುಖ್ಯ ರಸ್ತೆಗಳು ಸ್ತಬ್ದ
ದಾವಣಗೆರೆ, ಜು.26- ನಾಲ್ಕನೇ ಭಾನುವಾರದ ಲಾಕ್‌ಡೌನ್ ಗೂ ನಗರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಈ ವಾರವೂ ನಗರ ಸ್ತಬ್ಧವಾಗಿತ್ತು.
ಕಳೆದ ಮೂರನೇ ಭಾನುವಾರದ ಲಾಕ್ ಡೌನ್ ನಂತೆಯೇ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬಹುತೇಕ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬಡಾವಣೆಯ ಒಳರಸ್ತೆಗಳಲ್ಲಿ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳನ್ನು ಬಿಟ್ಟರೆ ಬಹುತೇಕ ಮುಖ್ಯರಸ್ತೆಗಳಲ್ಲಿ ವ್ಯಾಪಾರ ವಹಿವಾಟಿಲ್ಲದೆ ಸ್ತಬ್ಧವಾಗಿದ್ದು ಕಂಡುಬಂತು.
ನಿತ್ಯ ಬಳಕೆ ವಸ್ತುಗಳಾದ ತರಕಾರಿ, ಹಾಲು, ಆಸ್ಪತ್ರೆ, ಮೆಡಿಕಲ್ ಅಂಗಡಿಗಳನ್ನು ಹೊರತುಪಡಿಸಿ, ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಂಜಾನೆಯಿಂದಲೇ ವರ್ತಕರು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ್ದು ಕಂಡುಬಂತು. ದಿನಸಿ, ಹಾಲು, ಮೆಡಿಕಲ್‌ಗಳಲ್ಲಿ ಅಂತರ ಕಾಯ್ದುಕೊಂಡು ಖರೀದಿಯಲ್ಲಿ ತೊಡಗಿದ್ದರು. ಭಾನುವಾರ ಮಾಂಸದೂಟಕ್ಕಾಗಿ ಮುಂಜಾನೆಯಿಂದಲೇ ಕೋಳಿ, ಮಟನ್ ಅಂಗಡಿಗಳ ಮುಂದೆ ಜನರು ಮುಗಿಬಿದ್ದಿದ್ದರು. ಕೆಲ ಪ್ರಮುಖ ದ್ವಿಮುಖ ರಸ್ತೆಗಳನ್ನು ಏಕಮುಖ ಮಾಡಲಾಗಿತ್ತು. ಕೆಲ ರಸ್ತೆಗಳಿಗೆ ಬ್ಯಾರಿಕೇಡ್ ಎಳೆದು ಬಂದ್ ಮಾಡಲಾಗಿತ್ತು.
ಉಲ್ಲಂಘನೆಗೆ ದಂಡದ ಬಿಸಿ: ಈ ವಾರವೂ ಸಂಡೇ ಲಾಕ್ ಡೌನ್ ಉಲ್ಲಂಘನೆ ಮಾಡಿ ಅನವಶ್ಯಕವಾಗಿ ಓಡಾಟ ಮಾಡಿದ ವಾಹನಗಳ ಸವಾರರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ.
1.21 ಲಕ್ಷ ರೂ. ದಂಡ ವಸೂಲಿ : ಜಿಲ್ಲೆಯಲ್ಲಿ ಮೂರನೇ ಭಾನುವಾರದ ಲಾಕ್ ಡೌನ್ ಗೆ ಹೋಲಿಸಿದರೆ ಈ ವಾರ ನಾಲ್ಕನೇ ಲಾಕ್ ಡೌನ್ ನ ನಿಯಮ ಉಲ್ಲಂಘನೆ ಹಾಗೂ ಹೆಲ್ಮೆಟ್ ಮತ್ತು ಲೈಸೆನ್ಸ್ ಇಲ್ಲದೇ ವಾಹನಗಳು ರಸ್ತೆಗಿಳಿದ ಪ್ರಕರಣಗಳು ಹೆಚ್ಚಾಗಿವೆ.
ಭಾರತೀಯ ಮೋಟಾರು ವಾಹನ (ಐಎಂವಿ) ಕಾಯ್ದೆಯಡಿ ಜಿಲ್ಲಾ ಪೊಲೀಸ್ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೇ ಕೊರೊನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಮಾಸ್ಕ್ ಧರಿಸದವರಿಗೂ ದಂಡದ ಬಿಸಿ ತಟ್ಟಿದೆ.
ಈ ಭಾನುವಾರ ಒಟ್ಟು 376 ಮಾಸ್ಕ್ ಧರಿಸದ ಪ್ರಕರಣಗಳನ್ನು ದಾಖಲಿಸಿ 56 ಸಾವಿರ ದಂಡ ವಸೂಲಾಗಿದ್ದು, 287 ಐಎಂವಿ ಪ್ರಕರಣಗಳನ್ನು ದಾಖಲಿಸಿ 1 ಲಕ್ಷದ 21 ಸಾವಿರದ 300 ರೂ. ದಂಡ ವಸೂಲಿ ಮಾಡಲಾಗಿದೆ. ಕಳೆದ ಮೂರನೇ ಭಾನುವಾರದ ಲಾಕ್ ಡೌನ್ ವೇಳೆ ಒಟ್ಟು 182 ಮಾಸ್ಕ್ ಧರಿಸದ ಪ್ರಕರಣಗಳನ್ನು ದಾಖಲಿಸಿ 33 ಸಾವಿರ ದಂಡ ವಸೂಲಾಗಿತ್ತು. 112 ಐಎಂವಿ ಪ್ರಕರಣಗಳನ್ನು ದಾಖಲಿಸಿ 48,500 ದಂಡ ವಸೂಲಿ ಮಾಡಲಾಗಿತ್ತು.
ನಗರ ಪ್ರದೇಶದಲ್ಲಿ ಒಟ್ಟು 185 ಮಾಸ್ಕ್ ಧರಿಸದ ಪ್ರಕರಣಗಳನ್ನು ದಾಖಲಿಸಿ 37 ಸಾವಿರ ದಂಡ ವಸೂಲಾಗಿದ್ದು, 153 ಐಎಂವಿ ಪ್ರಕರಣಗಳನ್ನು ದಾಖಲಿಸಿ 56 ಸಾವಿರದ 200 ದಂಡ ಸಂಗ್ರಹಿಸಲಾಗಿದೆ.
ದಾವಣಗೆರೆ ಗ್ರಾಮಾಂತರ ಉಪವಿಭಾಗದಲ್ಲಿ 125 ಮಾಸ್ಕ್ ಪ್ರಕರಣಗಳನ್ನು ದಾಖಲಿಸಿ 11 ಸಾವಿರದ 900 ದಂಡ ವಸೂಲಾಗಿದೆ. 22 ಐಎಂವಿ ಪ್ರಕರಣಗಳನ್ನು ದಾಖಲಿಸಿ 9 ಸಾವಿರದ 100 ದಂಡ ಸಂಗ್ರಹವಾಗಿದೆ. ಚನ್ನಗಿರಿ ಉಪವಿಭಾಗದಲ್ಲಿ 66 ಮಾಸ್ಕ್ ಪ್ರಕರಣಗಳ ದಾಖಲಿಸಿ 7 ಸಾವಿರದ 100 ದಂಡ ವಸೂಲಿ ಮಾಡಲಾಗಿದೆ. 112 ಐಎಂವಿ ಪ್ರಕರಣಗಳನ್ನು ದಾಖಲಿಸಿ 56 ಸಾವಿರ ದಂಡ ಸಂಗ್ರಹವಾಗಿರುವುದಾಗಿ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಸಂಡೇ ಲಾಕ್ ಡೌನ್ ಇದ್ದರೂ ಸಹ ಅನಾವಶ್ಯಕವಾಗಿ ರಸ್ತೆಗಿಳಿದ ವಾಹನ ಸವಾರರು ಪೊಲೀಸರ ಕೈಗೆ ಸಿಕ್ಕು ದಂಡ ಹಾಕಿಸಿಕೊಂಡರು. ಮತ್ತೆ ಕೆಲವರು ಪೊಲೀಸರು ಇಲ್ಲದ ಜಾಗದಲ್ಲಿ ಸಾಗಿ ದಂಡದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಹೀಗೆ ಲಾಕ್ ಡೌನ್ ಉಲ್ಲಂಘಿಸಿ ಸುಮಾರು 20ಕ್ಕೂ ಹೆಚ್ಚು ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
ವಾಗ್ವಾದಕ್ಕಿಳಿದ ಯುವತಿ: ವಾಹನಗಳ ಸಂಚಾರ ನಿಯಂತ್ರಿಸಲು ಪೊಲೀಸರು ಕೆಲ ಪ್ರಮುಖ ದ್ವಿಮುಖ ರಸ್ತೆಗಳು ಏಕಮುಖ ಮಾಡಲಾಗಿತ್ತು. ಲಾಕ್ ಡೌನ್ ಇದ್ದರೂ ಸಹ ಬೈಕ್ ನಲ್ಲಿ ಮಾಸ್ಕ್, ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದ ಯುವಕ-ಯುವತಿ ಡಾ.ಎಂ.ಸಿ. ಮೋದಿ ವೃತ್ತದಲ್ಲಿ ಕೈಗೆ ಸಿಕ್ಕಾಗ ಪೊಲೀಸರು ತಡೆದು ದಂಡ ವಿಧಿಸಲು ಮುಂದಾರು. ಆಗ ಈ ಬಗ್ಗೆ ಪ್ರಶ್ನೆ ಮಾಡಿದ ಬಡಾವಣೆ ಠಾಣೆ ಅಪರಾಧ ವಿಭಾಗದ ಸಬ್ ಇನ್ ಸ್ಪೆಕ್ಟರ್ ಚಿದಾನಂದ ಜೊತೆ ಯುವತಿ ವಾಗ್ವಾದಕ್ಕಿಳಿದು ಫೈನ್ ಕಟ್ಟುವುದಿಲ್ಲ ಎಂದು ವಾದಕ್ಕಿಳಿದಿದ್ದು ಕಂಡುಬಂತು.
ಮಾರುಕಟ್ಟೆಯಲ್ಲಿ ಜನಸಂದಣಿ: ಸಂಡೇ ಲಾಕ್ ಡೌನ್ ಇದ್ದರೂ ಕೆಎಸ್ಆರ್ ಟಿಸಿ ಬಳಿಯ ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ ಮುಂಜಾನೆಯಿಂದಲೇ ಇದ್ದದ್ದು ಕಂಡುಬಂತು. ಅನೇಕರು ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೇ ವ್ಯಾಪಾರ – ವಹಿವಾಟು ನಡೆಸಿದರು. ವಾಹನಗಳ ಮೂಲಕ ಅನೌನ್ಸ್ ಮಾಡುತ್ತಾ ಪೊಲೀಸರು ಜನ ಜಾಗೃತಿ ಮೂಡಿಸಿದರು.
ಸರಳ ಮದುವೆ : ನಗರದ ರಾಜನಹಳ್ಳಿ ಕಲ್ಯಾಣ ಮಂಟಪದಲ್ಲಿ ಲಾಕ್ ಡೌನ್ ನಡುವೆಯೇ ಪ್ರಿಯಾಂಕ ಹಾಗೂ ಶಿವಕುಮಾರ್ ಜೋಡಿಯು ಸರಳ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹದಲ್ಲಿ 50 ಜನ ನಿಗದಿಯಂತೆ ಕುಟುಂಬ ವರ್ಗ, ಸಂಬಂಧಿಕರು ಪಾಲ್ಗೊಂಡಿದ್ದರು.