ನಮ್ಮನ್ನೂ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ: ವಿದ್ಯುತ್ ಪ್ರತಿನಿಧಿಗಳ ಒತ್ತಾಯ

ದಾವಣಗೆರೆ, ಜು. 24- ತಮ್ಮನ್ನೂ ಸಹ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ, ಆರೋಗ್ಯ ಭದ್ರತೆಯ ಜೀವ ವಿಮೆ ನೀಡಿ, ಮಾಪಕ ಓದಲು ಹಾಗೂ ಕಂದಾಯ ವಸೂಲಾತಿಯಲ್ಲಿ ವಿನಾಯಿತಿ ನೀಡುವಂತೆ ಕರ್ನಾಟಕ ರಾಜ್ಯ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಒಕ್ಕೂಟದ ಜಿಲ್ಲಾ ಘಟಕ ಒತ್ತಾಯಿಸಿದೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದ ಒಕ್ಕೂಟದ ಜಿಲ್ಲಾಧ್ಯಕ್ಷ ಕೊಟ್ರೇಶ್ ಪಿ.ತೆಲಿಗಿ, ರಾಜ್ಯದಲ್ಲಿ ಸುಮಾರು 3500 ಹಾಗೂ ಜಿಲ್ಲೆ ಯಲ್ಲಿ 205 ಗ್ರಾಮ ವಿದ್ಯುತ್ ಪ್ರತಿನಿಧಿಗಳಿದ್ದಾರೆ. ಎಲ್ಲರೂ ಕೊರೊನಾ ಸಂದರ್ಭದಲ್ಲಿ, ಮನೆ ಮನೆಗೆ ತೆರಳಿ ಮಾಪಕ ಓದುವ ಹಾಗೂ ಕಂ ದಾಯ ವಸೂಲಿ ಮಾಡುವ ಕೆಲಸ ಮಾಡುತ್ತಿದ್ದಾರೆ. 

ಕೆಎಸ್ಸಾರ್ಟಿಸಿ ನೌಕರರಾದ ಚಾಲಕ ಹಾಗೂ ನಿರ್ವಾಹಕರಿಗೆ ಕೋವಿಡ್ 19 ಸಂದರ್ಭದಲ್ಲಿ ಪ್ರಾಣ ಹಾನಿಯಾದರೆ ಸಂಸ್ಥೆ ವತಿಯಿಂದ 30 ಲಕ್ಷ ರೂ. ವಿಮೆ ನೀಡುವಂತೆ, ನಮಗೂ ವಿಮಾ ಸೌಲಭ್ಯ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪ್ರಸ್ತುತ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಮಾಪಕ ಓದುವ ಹಾಗೂ ಕಂದಾಯ ವಸೂಲಿಯಲ್ಲಿ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಎನ್.ಐ. ಪ್ರದೀಪ್ ಕುಮಾರ್,  ತಾಲ್ಲೂಕು ಅಧ್ಯಕ್ಷ ಎಂ.ಪಿ. ರಾಜಪ್ಪ, ಹರಿಹರ ತಾ.ಅಧ್ಯಕ್ಷ ಕೆ.ಎ. ನಿಜಗುಣ, ಹೊನ್ನಾಳಿ ತಾ.ಅಧ್ಯಕ್ಷ ಕೆ.ಬಿ. ಸುರೇಶ್, ನ್ಯಾಮತಿ ತಾ.ಅಧ್ಯಕ್ಷ ಟಿ.ಎಂ. ಗಿರಿರಾಜ್ ಇತರರು ಉಪಸ್ಥಿತರಿದ್ದರು.

error: Content is protected !!