ಜಗಳೂರು: ತಂಪೆರೆದ ಮಳೆಗೆ ರೈತರ ಹರ್ಷ

ತುಂಬಿದ ಚೆಕ್ ಡ್ಯಾಮ್‌ಗಳಿಗೆ ಶಾಸಕ ಎಸ್.ವಿ. ರಾಮಚಂದ್ರ ಬಾಗಿನ

ಜಗಳೂರು, ಜು.24- ತಾಲ್ಲೂಕಿನಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಅತಿಹೆಚ್ಚು ಮಳೆಯಾಗಿದ್ದು ಈ ಭಾಗದ ಕೆರೆ ಗೋಕಟ್ಟೆ ಮತ್ತು ಚೆಕ್ ಡ್ಯಾಮ್‌ಗಳು ತುಂಬಿ ಹರಿಯುತ್ತಿವೆ. 

ತಾಲ್ಲೂಕಿನ ಆಕನೂರು ಗ್ರಾಮದಲ್ಲಿ ನಿರ್ಮಿಸಲಾಗಿರುವ 1.50 ಕೋಟಿ ರೂ. ವೆಚ್ಚದ ಚೆಕ್ ಡ್ಯಾಮ್ ತುಂಬಿ ಹರಿಯುತ್ತಿದ್ದು ಸುಮಾರು ಒಂದು ಕಿಲೋಮೀಟರ್ ಉದ್ದ ನೀರು ಸಂಗ್ರಹವಾಗಿದೆ. ಈ  ಚೆಕ್ ಡ್ಯಾಮ್ ಗೆ ಗ್ರಾಮ ಗ್ರಾಮಸ್ಥರು ಹಾಗೂ ಮುಖಂಡರೊಂದಿಗೆ ಶಾಸಕ ಎಸ್.ವಿ. ರಾಮಚಂದ್ರ ಬಾಗಿನ ಅರ್ಪಿಸಿದರು. 

 ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕರು, ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ರೈತರು ಸಂತಸಗೊಂಡಿದ್ದಾರೆ. ಬಿತ್ತನೆ ಕಾರ್ಯ ಚುರುಕಿನಿಂದ ನಡೆದಿದೆ. ಈ ವರ್ಷ ಉತ್ತಮ ಬೆಳೆ ಸಿಗಲಿದೆ ಎಂದು ಆಶಯ ವ್ಯಕ್ತಪಡಿಸಿದರು. 

ಉತ್ತಮವಾದ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಅಂತರ್ಜಲ ಹೆಚ್ಚಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಣೆಯಾಗಿದೆ ಎಂದರು. 

ಆಕನೂರು ಚೆಕ್ ಡ್ಯಾಮ್ ನಿರ್ಮಿಸಿದ ಮೊದಲ ವರ್ಷವೇ ನೀರಿನಿಂದ ಭರ್ತಿಯಾಗಿದೆ. ಈ ಭಾಗದ ಹಲವಾರು  ಹಳ್ಳಿಗಳಿಗೆ ಅಂತರ್ಜಲ ಹೆಚ್ಚಾಗಲಿದೆ. ಕುಡಿಯುವ ನೀರು ಹಾಗೂ ರೈತರ ಬೋರ್ ವೆಲ್‌ಗಳಿಗೆ ಅನುಕೂಲವಾಗಲಿದೆ. 

ತಾಲ್ಲೂಕಿನ 57 ಕೆರೆಗಳನ್ನು ತುಂಬಿಸುವ ಯೋಜನೆ ಭರದಿಂದ ಸಾಗಿದೆ. ಅಪ್ಪರ್ ಭದ್ರಾ ಯೋಜನೆಯು ಸಿದ್ಧವಾಗಿದೆ ಎಂದ ಶಾಸಕರು, ಅಧಿಕಾರವಿದ್ದಾಗ ಅಪ್ಪರ್ ಭದ್ರಾ ಯೋಜನೆಯ ಫೈಲನ್ನು ತಿರುಗಿಯೂ ನೋಡದವರು, ಈಗ ಯೋಜನೆಯ ಬಗ್ಗೆ ಮಾತನಾಡುತ್ತಿದ್ದಾರೆ. ಅಧಿಕಾರವಿದ್ದಾಗ ಏನೂ ಕೆಲಸ ಮಾಡಿದವರಿಗೆ ಈಗ ಅಪ್ಪರ್ ಭದ್ರಾ ಯೋಜನೆ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕರನ್ನು ಟೀಕಿಸಿದರು. 

 ನಮ್ಮ ಪಕ್ಷ  ಅಧಿಕಾರದಲ್ಲಿದೆ ಅಪ್ಪರ್ ಭದ್ರಾ ಯೋಜನೆಯ ಜಾರಿಗೆ ಸಂಸದರು ಮತ್ತು ನಾನು ಶ್ರಮಿಸುತ್ತೇವೆ. ಯೋಜನೆಯ ಡಿಪಿಆರ್‌ ಆಗಿದ್ದು ಟೆಂಡರ್ ಕರೆಯುವ ಹಂತದಲ್ಲಿದೆ ಎಂದು ಶಾಸಕರು ತಿಳಿಸಿದರು. 

ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ನಾಗರಾಜ್, ಮುಖಂಡರಾದ  ಬಿಸ್ತುವಳ್ಳಿ ಬಾಬು, ಪಾತ ಲಿಂಗಪ್ಪ, ಚಟ್ನಿ ಹಳ್ಳಿ ರಾಜಣ್ಣ, ಜೆ.ವಿ. ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು. 

error: Content is protected !!