ಸೂಳೆಕೆರೆ ಗುಡ್ಡದಲ್ಲಿ ಯುವಕನ ಕೊಲೆ ಪ್ರಕರಣ : ಮತ್ತೆ ನಾಲ್ವರ ಬಂಧನ

22.93 ಲಕ್ಷ ರೂ. ಮೌಲ್ಯದ ಬೆಳ್ಳಿ – ಬಂಗಾರದ ಆಭರಣ ಮತ್ತು ಇತರೆ ವಸ್ತುಗಳ ವಶ

ದಾವಣಗೆರೆ, ಜು.23- ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಗುಡ್ಡದ ಬಳಿ ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ನಾಲ್ವರನ್ನು ಪೊಲೀಸರು  ಬಂಧಿಸಿದ್ದಾರೆ. 

ಇದೇ ದಿನಾಂಕ 10ರಂದು ನಾಗರಕಟ್ಟೆ ಗ್ರಾಮದ ಯುವಕ ಚಂದ್ರನಾಯ್ಕನನ್ನು ಶೂಟೌಟ್ ಮಾಡಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿದ್ದ ಬಸವಾಪಟ್ಟಣ ಪೊಲೀಸರು ಪ್ರಮುಖ ಆರೋಪಿ ಚೇತನ್ ಎಂಬಾತನನ್ನು ಪೊಲೀಸ್ ಶ್ವಾನ ತುಂಗ ಕಾರ್ಯಾಚರಣೆಯಿಂದ ಪತ್ತೆ ಮಾಡಿ ಬಂಧಿಸಲಾಗಿತ್ತು. 

ತಲೆ ಮರೆಸಿಕೊಂಡಿದ್ದ ಇನ್ನುಳಿದ ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ ಡಿವೈಎಸ್‍ಪಿ ಸಂತೋಷ್ ಜಿ. ಮನೋಳಿ, ಸಿಪಿಐ ಆರ್.ಆರ್. ಪಾಟೀಲ್ ನೇತೃತ್ವದ ತಂಡವು ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಸಚಿನ್, ಮಂಜಾನಾಯ್ಕ, ಕಿರಣ್ ಮತ್ತು ಓರ್ವ ಬಾಲಕನನ್ನು ಬಂಧಿಸಿದ್ದು, ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ನಾಲ್ಕು ಕಳವು ಪ್ರಕರಣಗಳನ್ನು ಬೇಧಿಸಿ 19 ಲಕ್ಷದ 70 ಸಾವಿರ ಮೌಲ್ಯದ ಬೆಳ್ಳಿ – ಬಂಗಾರದ ಆಭರಣ, ಎರಡು ಲ್ಯಾಪ್‍ಟಾಪ್, 2 ವಾಚ್ ಗಳು, 1 ಪಿಸ್ತೂಲ್, 5 ಜೀವಂತ ಗುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಬೈಕ್ ಸೇರಿದಂತೆ 22.93 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಎಸ್ಪಿ ಹನುಮಂತರಾಯ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಕರಣ ಪತ್ತೆ ಕಾರ್ಯಾಚರಣೆಯಲ್ಲಿ ಚನ್ನಗಿರಿ ಸಿಪಿಐ ಆರ್.ಆರ್. ಪಾಟೀಲ್, ಸಂತೇಬೆನ್ನೂರು ಪಿಎಸ್ಐ ಶಿವರುದ್ರಪ್ಪ ಮೇಟಿ, ಬಸವಾಪಟ್ಟಣ ಪೊಲೀಸ್ ಠಾಣೆ ಪಿಎಸ್ಐ ಭಾರತಿ ಕಂಕಣವಾಡಿ, ಚನ್ನಗಿರಿ ಠಾಣೆ ಪಿಎಸ್ಐ ರೂಪ್ಲಿಬಾಯಿ ಮತ್ತು ಸಿಬ್ಬಂದಿಗಳಾದ ಎಸ್.ಆರ್. ರುದ್ರೇಶ್, ಎಂ. ರುದ್ರೇಶ್, ಮಹೇಶ್ ನಾಯ್ಕ್, ಸತೀಶ ಧರ್ಮಪ್ಪ, ಮಂಜನಾಯ್ಕ, ಶ್ರೀನಿವಾಸ್, ಪರಶುರಾಮ್, ನಾಗರಾಜ ತಳವಾರ, ಬಸವರಾಜ ಕೋಟೆಪ್ಪನವರ್, ರವಿ, ರವಿಕುಮಾರ್, ನವೀನ್ ಕುಮಾರ್, ದೇವರಾಜ್, ಶಾಂತ ಕುಮಾರ್, ಕೊಟ್ರೇಶ, ರಘು ರೇವಣಸಿದ್ದಪ್ಪ, ಸೋಮಶೇ ಖರಪ್ಪ, ಸಂತೋಷ್, ರಾಘವೇಂದ್ರ ಭಾಗವಹಿಸಿದ್ದರು.

error: Content is protected !!