ಪಾಲಿಕೆ ಸದಸ್ಯನ ವಿರುದ್ಧ ಪ್ರತಿ ದೂರು

ದಾವಣಗೆರೆ, ಜು.23- ನಗರದ ಕಾಯಿಪೇಟೆಯ 18ನೇ ವಾರ್ಡ್ ನ ಬಿಜೆಪಿ ಪಾಲಿಕೆ ಸದಸ್ಯ ಸ್ವಾಗಿ ಶಾಂತಕುಮಾರ್ ಹಾಗೂ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ್ ರಾವ್ ಜಾಧವ್ ವಿರುದ್ಧ ಪರಾಭವಗೊಂಡ ಸ್ವಪಕ್ಷೀಯ ಎದುರಾಳಿ ಪಕ್ಷೇತರ ಅಭ್ಯರ್ಥಿ‌ ಮಂಜು ಪುರವಂತರ ಪರಿಚಿತನಾದ ಜಿ. ಮಂಜುನಾಥ ಎಂಬಾತ   ಬಸವನಗರ ಪೊಲೀಸ್ ಠಾಣೆಯಲ್ಲಿ ಇಂದು ಪ್ರತಿ ದೂರು ದಾಖಲಿಸಿದ್ದಾರೆ.

ತನ್ನ ಮನೆಯ ಪಕ್ಕದಲ್ಲಿ ಕೊರೊನಾ ಇದ್ದರೂ ಶೀಲ್ ಡೌನ್ ಮಾಡಿಲ್ಲದ ಕಾರಣ ನನ್ನ ಸ್ನೇಹಿತನೋರ್ವ ಈ ಬಗ್ಗೆ ವಾರ್ಡಿನ ಪಾಲಿಕೆ ಸದಸ್ಯ ಶಾಂತಕುಮಾರ್ ಬಳಿ ಮಾತನಾಡಲು ತಿಳಿಸಿದಂತೆ ನಾನು ಹಾಗೂ ಮಂಜುನಾಥ ಪುರವಂತರ ಮತ್ತು ಸ್ನೇಹಿತರು ಸೇರಿ ಶಾಂತಕುಮಾರ್ ಅವರ ಮನೆ ಬಳಿ ಹೋಗಿ ಸೀಲ್‌ ಡೌನ್ ವಿಚಾರದ ಬಗ್ಗೆ ಮನವಿ ಮಾಡಿದೆವು. ಆಗ ನಮ್ಮ ಕಷ್ಟಕ್ಕೆ ಸ್ಪಂದಿಸುವ ಬದಲು ಶಾಂತಕುಮಾರ್ ಅವರು ನಗರ ಪಾಲಿಕೆ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿ ತೊಂದರೆ ಮಾಡಿದ್ದೀಯಾ ಈಗ ನೀನು ಹೇಳಿದ ಹಾಗೆ ಸೀಲ್‌ ಡೌನ್ ವಿಚಾರದಲ್ಲಿ ಸಹಾಯ ಮಾಡುವುದಿಲ್ಲ ಎಂದು ನಮ್ಮ ಜೊತೆಗಿದ್ದ ಮಂಜುನಾಥ ಪುರವಂತರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೇ, ಈ ವಿಚಾರವಾಗಿ ಮುಂದೆ ನನ್ನ ಬಳಿ ಬಂದರೆ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು  ಮಂಜುನಾಥ ದೂರಿದ್ದಾರೆ.

ಶಾಂತ ಕುಮಾರ್ ನನ್ನ ಹಾಗೂ ನನ್ನ ಸ್ನೇಹಿತರ ಮೇಲೆ ದೂರು ನೀಡಿದ್ದು, ಪ್ರಕರಣದ ಸಂಬಂಧ ಅಂದು ರಾತ್ರಿ ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆದು ಕೊಂಡು ಹೋದಾಗ, ಯಶವಂತ ರಾವ್ ಜಾಧವ್ ಏಕಾಏಕಿ ನನ್ನ ಬಳಿ ಬಂದು ಪೊಲೀಸ್ ಲಾಠಿಯಿಂದ ಹಲ್ಲೆ ಮಾಡಿ ಇನ್ನು ಮುಂದೆ ಈ ವಿಷಯದಲ್ಲಿ ಮುಂದುವರೆದರೆ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ವಾರ್ಡ್ ವ್ಯಾಪ್ತಿಯಲ್ಲಿ ಕ್ವಾರಂಟೈನ್, ಬ್ಯಾರಿಕೇಡ್ ನೆಪದಲ್ಲಿ ಮಂಜು ತನ್ನ ಹಿಂಬಾಲಕರೊಂದಿಗೆ ಮನೆ ಬಳಿ ಬಂದು ನನ್ನ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿರುವುದಾಗಿ ಪಾಲಿಕೆ ಸದಸ್ಯ ಶಾಂತ ಕುಮಾರ್  ಇದೇ ದಿನಾಂಕ 20ರಂದು ಪೊಲೀಸರಿಗೆ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

error: Content is protected !!