ಕೊರೊನಾ ಸಾವು ನಿಯಂತ್ರಣಕ್ಕಾಗಿ ದುರ್ಬಲರ ಸರ್ವೇಗೆ ಜಿಲ್ಲಾಧಿಕಾರಿ ಸೂಚನೆ
ದಾವಣಗೆರೆ, ಜು.22- ಕಂಟೈನ್ಮೆಂಟ್ ಮತ್ತು ಬಫರ್ ವಲಯಗಳು ಮಾತ್ರವಲ್ಲದೇ ಆರೋಗ್ಯ ಇಲಾಖೆಗೆ ಮಾಹಿತಿ ಇರುವ ದುರ್ಬಲ ವರ್ಗ ಎಂದು ಪರಿಗಣಿಸಲಾಗುವ ಶುಗರ್, ಬಿಪಿ, ಟಿಬಿ, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ರೋಗಗಳನ್ನು ಹೊಂದಿರುವವರನ್ನು ಪರೀಕ್ಷೆಗೊಳಪಡಿಸಿ ಸೂಕ್ತ ಚಿಕಿತ್ಸೆ ನೀಡಿ ಸಾವಿನ ಸಂಭವದಿಂದ ಅವರನ್ನು ಪಾರು ಮಾಡಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವೈದ್ಯಕೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಿನ್ನೆ ನಡೆದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಜಿಲ್ಲಾ ಆರೋಗ್ಯ ಅಭಿಯಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಒಂದು ವಾರದೊಳಗೆ ಮನೆ ಮನೆಗೆ ತೆರಳಿ ಸರ್ವೇ ಮಾಡಿ, ಇಂತಹವರಿಗೆ ಕೊರೊನಾ ಸೋಂಕು ತಗುಲಿದರೆ ಅವರ ಜೀವ ಉಳಿಸುವುದು ಕಷ್ಟಸಾಧ್ಯವಾಗುವ ಹಿನ್ನೆಲೆಯಲ್ಲಿ ಈ ವಿಷಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸೂಚನೆ ನೀಡಿದರು.
ಸರ್ಕಾರಿ ನೌಕರರ ಸಮಸ್ಯೆ ಬಗೆಹರಿಸಲು ಕ್ರಮ : ಡಿಸಿ
ಜಿಲ್ಲಾ ಸರ್ಕಾರಿ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭರವಸೆ ನೀಡಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಿನ್ನೆ ಆಯೋಜಿಸಲಾಗಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಮಟ್ಟದ ಜಂಟಿ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕ್ರೀಡಾಂಗಣ ಹಾಗೂ ಸಮುಚ್ಚಯಕ್ಕೆ ಬೇಕಾದ ಜಾಗಕ್ಕೆ ಸಂಬಂಧಪ ಟ್ಟಂತಹ ವಿಷಯದ ಕುರಿತು ನಮ್ಮ ಅಧೀನಕ್ಕೆ ಒಳಪಡುವ ಜವಾಬ್ದಾರಿ ನಿಭಾಯಿಸುತ್ತೇವೆ. ದೂಡಾ ಹಾಗೂ ಕಾರ್ಪೊರೇಷನ್ ಅಧಿಕಾರಿಗ ಳೊಂದಿಗೆ ಪರಿಶೀಲಿಸಿ ಅನುಕೂಲ ಮಾಡಿಕೊಡ ಲಾಗುವುದು ಎಂದು ಭರವಸೆ ನೀಡಿದರು.
ನೌಕರರಿಗೆ ವಿಶೇಷ ತರಬೇತಿ ಕಾರ್ಯಾ ಗಾರ, ಫೆಬ್ರವರಿ ಹಾಗೂ ಹಿಂದಿನ ತಿಂಗಳ ನೌಕರರ ವೇತನ, ಸ್ವಯಂ ಚಾಲಿತ ವೇತನ ಭಡ್ತಿ, ಜೇಷ್ಠತೆ, ವರ್ಗಾವಣೆ, ಗಳಿಕೆ ರಜೆ ಸೌಲಭ್ಯ, ಖಾಲಿ ಹುದ್ದೆಗಳ ಭರ್ತಿಗೆ ಶಿಫಾರಸ್ಸು, ನೌಕರರ ವಸತಿ ಗೃಹ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಪಾಲಾಕ್ಷಿ ಮಾತನಾಡಿ, ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶಿಫಾರಸ್ಸು ಮಾಡಬೇಕು. ವಿಶೇಷ ಕಾರ್ಯಾಗಾರ ನಡೆಸಬೇಕು. ಅಧಿಕಾರಿ ಮತ್ತು ನೌಕರರ ನಡುವೆ ಸಾಮರಸ್ಯ, ಉತ್ತಮ ಬಾಂಧವ್ಯ ಮೂಡಿಸಲು ಜನಸ್ಪಂದನದ ರೀತಿಯಲ್ಲಿ ನೌಕರರ ಸ್ಪಂದನ ಕಾರ್ಯಕ್ರಮ ನಡೆಸಬೇಕು. ಸಮುದಾಯ ಭವನದ ಎದುರಿನ ತೆರೆದ ಜಾಗವನ್ನು ನೌಕರರ ಸಂಘಕ್ಕೆ ಒಳಾಂಗಣ ಕ್ರೀಡೆಗಳಿಗೆ ಮಂಜೂರು ಹಾಗೂ ನೌಕರರ ಸಮುಚ್ಚಯಕ್ಕೆ ಒಂದು ಎಕರೆ ಜಮೀನು ಮಂಜೂರು ಸೇರಿದಂತೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದರು.
ಸಭೆಯಲ್ಲಿ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಜೀವ್, ಡಿಎಚ್ಓ ಡಾ.ರಾಘವೇಂದ್ರ ಸ್ವಾಮಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.
ಆಸ್ಪತ್ರೆಯಲ್ಲಿರುವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಿ
ಕೊರೊನಾ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿರುವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಜೈವಿಕ ಮತ್ತು ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಿನ್ನೆ ನಡೆದ ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಮೇಲ್ವಿಚಾರಣಾ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತ್ಯಾಜ್ಯಗಳನ್ನು ಸಂಸ್ಕರಿಸಿ ವಿಲೇವಾರಿ ಮಾಡುವ ಅಗತ್ಯವಿದೆ ಎಂದ ಅವರು, ಜಿಲ್ಲಾ ಮಟ್ಟದಲ್ಲಿ ಜೀವ ವೈದ್ಯಕೀಯ ತ್ಯಾಜ್ಯ ವಿಲೇವಾರಿ ನಿಯಮಗಳ ಪರಿಣಾಮಕಾರಿ ಅನುಷ್ಠಾನಗೊಳಿಸುವಿಕೆಗೆ ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ತ್ಯಾಜ್ಯಗಳನ್ನು ಸಂಸ್ಕರಿಸಿ ವಿಲೇವಾರಿ ಮಾಡಲು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ, ಜನರಲ್ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಒಂದು ಬೆಡ್ಗೆ ಸರ್ಕಾರಿ ಬೆಲೆ ನಿಗದಿಯಂತೆ 7 ರೂ. ಹಾಗೂ ಸಿಸಿ ಸೆಂಟರ್ಗಳಲ್ಲಿ 10 ರೂ.ನಂತೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಿಂಗಳಿಗೆ 1,500 ರೂ. ರಂತೆ ಸಭೆಯಲ್ಲಿ ನಿಗದಿ ಪಡಿಸಿದರು.
ಇದೇ ವೇಳೆ ಸುಶಾಂತ್ ಎನ್ವಿರಾನ್ ಮೆಂಟಲ್ ಟೆಕ್ನಾಲಜಿಯ ಮಹೇಶ್, ತ್ಯಾಜ್ಯ ವಿಲೇವಾರಿ ದರ ಹೆಚ್ಚಿಸುವಂತೆ ಮನವಿ ಮಾಡಿದರು.
ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆ/ನರ್ಸಿಂಗ್ ಹೋಂಗಳು ತಮ್ಮಲ್ಲಿಗೆ ಬರುವ ಎಬಿ-ಎಆರ್ಕೆ ಕಾರ್ಡುದಾರರು, ಬಿಪಿಎಲ್ ಕಾರ್ಡುದಾರ ನಾನ್ ಕೋವಿಡ್ ರೋಗಿಗಳನ್ನು ಎಷ್ಟೊತ್ತಿಗೇ ಬಂದರೂ ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲವಾದಲ್ಲಿ ಕೆಪಿಎಂಇ ಅಡಿ ನೋಂದಣಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆರ್ಸಿಹೆಚ್ಓ ಡಾ. ಮೀನಾಕ್ಷಿ ಮಾತನಾಡಿ ಲಾಕ್ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ನಿಂದ ಗರ್ಭಿಣಿಯರ ದಾಖಲಾತಿ ಕಡಿಮೆ ಆಗಿದೆ. ಏಪ್ರಿಲ್ನಿಂದ ಇಲ್ಲಿಯವರೆಗೆ ಒಟ್ಟು 15 ತಾಯಿಂದಿರ ಮರಣ ಸಂಭವಿಸಿದ್ದು 3 ಜನರು ಬೇರೆ ಜಿಲ್ಲೆಗೆ ಸೇರಿದವರಾಗಿದ್ದಾರೆ. 77 ಶಿಶು ಮರಣ ಸಂಭವಿಸಿದ್ದು, 41 ಹೊರ ಜಿಲ್ಲೆಯವರಾಗಿದ್ದರೆ 36 ನಮ್ಮ ಜಿಲ್ಲೆಗೆ ಸೇರಿವೆ ಎಂದರು.
ಎನ್ವಿಬಿಡಿಸಿಪಿ ಅಧಿಕಾರಿ ಡಾ.ನಟರಾಜ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಗಂಗಾಧರ್ ಮಾಹಿತಿ ನೀಡಿದರು. ಇದೇ ವೇಳೆ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓ ಸಮ್ಮುಖದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್ಓ ಡಾ.ರಾಘವೇಂದ್ರಸ್ವಾಮಿ, ಡಿಎಸ್ ಡಾ.ನಾಗರಾಜ್, ಸರ್ವೇಕ್ಷಣಾ ವೈದ್ಯಾಧಿಕಾರಿ ಡಾ.ಶ್ರೀಧರ್, ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಆಡಳಿತಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.