ಆಸ್ಪತ್ರೆಯಲ್ಲಿ ಅಮಾಯಕರ ಪ್ರಾಣಗಳನ್ನು ಉಳಿಸಲಿ

ಮಾನ್ಯರೇ,

ರಾಜ್ಯದಲ್ಲಿ  ಕೋವಿಡ್ ಪ್ರಕರಣಗಳು ದಿನೇ ದಿನೇ ತೀವ್ರಗತಿಯಲ್ಲಿ ಏರುತ್ತಿರುವ ಬೆನ್ನಲ್ಲೇ ಒಂದೆಡೆ ಸೋಂಕಿತರು/ಶಂಕಿತರ ಸಂಖ್ಯೆ, ಇನ್ನೊಂದೆಡೆ ಅಷ್ಟೇ ವೇಗದಲ್ಲಿ  ಸಾವಿನ ಸಂಖ್ಯೆಯೂ ಕೂಡ ಹೆಚ್ಚಾಗಿ ಇಡೀ ರಾಜ್ಯವೇ ಅಕ್ಷರಶಃ ಬೆಚ್ಚಿ ಬೀಳುವಂತಾಗಿದೆ. 

ಮುಂಜಾಗ್ರತಾ ಕ್ರಮವಾಗಿ ಸರ್ಕಾರವೂ ಕೂಡ ಚಿಕಿತ್ಸೆಗಾಗಿ  ಖಾಸಗಿ ಆಸ್ಪತ್ರೆಗಳ ನೆರವು ಪಡೆದುಕೊಂಡಿದೆ. ದುರಂತ ಎಂದರೆ ತೀವ್ರವಾಗಿ ರೋಗಲಕ್ಷಣ ಹೊಂದಿರುವವರು ಆಸ್ಪತ್ರೆಯಿಂದ ಆಸ್ಪತ್ರೆಗೆ ಎಷ್ಟೇ ಅಲೆದರೂ ಕೂಡ ಯಾವುದೇ ರೀತಿಯಲ್ಲೂ ಖಾಸಗಿ ಆಸ್ಪತ್ರೆ ಯವರು ಸ್ಪಂದಿಸುತ್ತಿಲ್ಲ. ಜೊತೆಗೆ ಕನಿಷ್ಠ ಪ್ರಾಥಮಿಕ ಚಿಕಿತ್ಸೆಯನ್ನು ನೀಡಬೇಕೆನ್ನುವ ಸೌಜನ್ಯವನ್ನೂ ಆಸ್ಪತ್ರೆಗಳು ತೋರಿಸುತ್ತಿಲ್ಲ. 

ರೋಗಿಗಳನ್ನು ದಾಖಲಿಸಿಕೊಳ್ಳಲು 18ರಿಂದ 20 ತಾಸು ಕಾಯಬೇಕಾದ ಕೆಟ್ಟ ಅನಿವಾರ್ಯ ಸ್ಥಿತಿ ಬಂದೊದಗಿದೆ. ಕೇಳಿದರೆ ಸರ್ಕಾರ ರೂಪಿಸಿರುವ ನೀತಿ ನಿಯಮಗಳು ಮತ್ತು ಮಾನದಂಡಗಳ ಬಗ್ಗೆ ಹೇಳುತ್ತಾರೆ. ಪ್ರತಿ ನಿತ್ಯ ಇಂತಹ ನೂರಾರು  ಪ್ರಕರಣಗಳನ್ನು  ಸುದ್ದಿ ವಾಹಿನಿಗಳಲ್ಲಿ ನೋಡುತ್ತಿದ್ದೇವೆ. ಜನರ ಜೀವಕ್ಕಿಂತ ಇವರಿಗೆ ನೀತಿ-ನಿಯಮಗಳೇ ದೊಡ್ಡದಾ?  ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಇದು ಸರ್ಕಾರದ ನಿರ್ಲಕ್ಷ್ಯವೋ ಅಥವಾ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷವೋ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದೇ ದಿನೇ ದಿನೇ ಅಮಾಯಕ ಬಡ ಜೀವಗಳ ಪ್ರಾಣ ಪಕ್ಷಿಗಳಂತೂ  ಹಾರಿ ಹೋಗುತ್ತಿವೆ. 

ಯಾರೇ ಆಗಲಿ ಇನ್ನು ಮುಂದೆಯಾದರೂ ಅಮಾಯಕ ಬಡ ಜೀವಗಳ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಲಿ. ಎಲ್ಲೋ ಒಂದು ಕಡೆ ಇಡೀ ನಮ್ಮ ಸಮಾಜದ ಮಾನವೀಯತೆಯೇ ಸತ್ತುಹೋಗಿದೆಯೇನೋ ಎಂದೆನಿಸುತ್ತದೆ. ಕೂಡಲೇ ಸರ್ಕಾರ ತುರ್ತಾಗಿ ಇತ್ತ ಗಮನ ಹರಿಸಿ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷತನಕ್ಕೆ ಕಡಿವಾಣ ಹಾಕಬೇಕಾಗಿದೆ. ಇಲ್ಲವೇ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ರೂಪಿಸಿರುವ  ನಿಯಮಗಳು ಮತ್ತು ಷರತ್ತುಗಳನ್ನು ಸಡಿಲಗೊಳಿಸಿ ಅಮಾಯಕರ ಪ್ರಾಣವನ್ನು ಉಳಿಸಲು ನೆರವಾಗಬೇಕಾಗಿದೆ.

– ಡಿ. ಮುರುಗೇಶ್, ದಾವಣಗೆರೆ.
[email protected]

error: Content is protected !!