ಆಗ್ನೇಯ ಪದವೀಧರ ಕ್ಷೇತ್ರದಿಂದ ನಡೆಯುವ ವಿಧಾನ ಪರಿಷತ್ತಿನ ಚುನಾವಣೆಗೆ ಕೇವಲ ಒಂದು ದಿನ ಬಾಕಿ ಉಳಿದಿದೆ. ಹಾಗೆ ನೋಡಿದರೆ ಅಭ್ಯರ್ಥಿಗಳಿಗೆ ಪದವೀಧರ ಮತದಾರರನ್ನು ಮುಖಾಮುಖಿ ತಲುಪಲು ಸಮಯದ ಅಭಾವ ಕಾಡಿದೆ. ಸುಮಾರು ಲಕ್ಷ ಚಿಲ್ಲರೆ ಮತದಾರರನ್ನು ಹೊಂದಿರುವ ಈ ಕ್ಷೇತ್ರ ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೊಳಗೊಂಡಿದೆ.
ಆಗ್ನೇಯ ಪದವೀಧರ ಕ್ಷೇತ್ರವಾದಂದಿ ನಿಂದಲೂ ಹೆಚ್ಚೂ ಕಡಿಮೆ ದಾವಣಗೆರೆ-ಚಿತ್ರದುರ್ಗ ಜಿಲ್ಲೆಯ ಕಡೆಯವರೇ ಹೆಚ್ಚಾಗಿ ಆಯ್ಕೆಯಾಗುತ್ತಾ ಬಂದಿದ್ದರು. ತುಮ ಕೂರಿನ ಎಸ್. ಮಲ್ಲಿಕಾರ್ಜುನಯ್ಯ ಸಹಾ ಗೆದ್ದಿದ್ದರು. ಬಹುತೇಕ ಲಿಂಗಾಯಿತರೇ ಚುನಾಯಿತರಾಗುತ್ತಾ ಬಂದ ಕ್ಷೇತ್ರ ಇದು. ಆದರೆ, ದಶಕದಿಂದ ಈಚೆಗೆ ವೈ. ನಾರಾಯಣ ಸ್ವಾಮಿಯವರು ಕಣಕ್ಕಿಳಿದ ನಂತರ ಲಿಂಗಾ ಯಿತ ಅಭ್ಯರ್ಥಿಗಳ ಗೆಲುವು ಕ್ಷೀಣಿಸುತ್ತಾ ಬಂತು. ಹೆಚ್.ಎಸ್.ಶಿವಶಂಕರ್, ಡಾ|| ಶಿವಯೋಗಿಸ್ವಾಮಿ ಅವರಿಗೆ ಹಿನ್ನಡೆ ಆಗಿ ಸೋಲು ಕಂಡಿದ್ದೂ ಉಂಟು. ಕೋಲಾರದ ಚೌಡರೆಡ್ಡಿ ತೂಪಲ್ಲಿ ಹಿಂದಿನ ಸಾರಿ ಗೆದ್ದಿದ್ದರು. ಶಿವಯೋಗಿಸ್ವಾಮಿ ಸೋತರು.
ಪ್ರಸ್ತುತ ಈ ಚುನಾವಣೆ ತೀವ್ರ ಕುತೂ ಹಲ ಕೆರಳಿಸಿದೆ. ಹದಿನೈದು ಜನ ಸ್ಪರ್ಧಿಗಳಿ ದ್ದರೂ ಮೇಲ್ನೋಟಕ್ಕೆ ಚತುಷ್ಕೋನ ಸ್ಪರ್ಧೆ ಆಗಿ ಕಂಡರೂ ಒಳನೋಟದಲ್ಲಿ ಪಂಚ ಕೋನ ಸ್ಪರ್ಧೆಯಾಗಿ ಮಾರ್ಪಡುತ್ತಿದೆ.
ಆಡಳಿತ ಪಕ್ಷ ಬಿಜೆಪಿ ಆರಂಭದಲ್ಲಿ ತನಗೆ ಈ ಕ್ಷೇತ್ರ ಸುಲಭದ ತುತ್ತು ಅಂದುಕೊಂ ಡಿತ್ತು. ಅದೇ ರೀತಿ ಹಾಲಿ ಸದಸ್ಯ ಜೆಡಿಎಸ್ನ ಚೌಡರೆಡ್ಡಿ ಅವರು ತನ್ನದೇ ಗೆಲುವು ಅಂದು ಕೊಂಡಿದ್ದರು. ಕಾಂಗ್ರೆಸ್ ಇಲ್ಲಿ ಸತತ
ಸೋಲುತ್ತಾ ಬಂದಿದೆ. ಆದರೆ, ಈ ಸಾರಿ ಜೆಡಿ ಎಸ್ನಿಂದ ವಲಸೆ ಬಂದ ರಮೇಶ್ ಬಾಬು ಅವರನ್ನು ಕಣಕ್ಕಿಳಿಸಿ ಭರವಸೆಯಿಂದ ಓಡಾಡುತ್ತಿದೆ.
ಪಕ್ಷ ರಾಜಕಾರಣದ ರೀತಿ ನೋಡಿದರೆ, ಇದು ತ್ರಿಕೋನ ಸ್ಪರ್ಧೆ ಆಗಬೇಕು. ಆದರೆ, ಬಿಜೆಪಿ ತೀವ್ರ ಬಂಡಾಯದ ಪೈಪೋಟಿ ಎದುರಿಸುತ್ತಿದೆ, ಅದು ಸತ್ಯ ಕೂಡಾ..
ಲಿಂಗಾಯಿತ ವಲಯದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಏಳು ಜನರು ಒಟ್ಟಾಗಿ ಸೇರಿ `ನಮ್ಮಲ್ಲಿ ಯಾರಾದರೊಬ್ಬರಿಗೆ ಟಿಕೆಟ್ ಕೊಡಿ. ಗೆಲ್ಲಿಸುತ್ತೇವೆ’ ಎಂದು ಬಿಜೆಪಿ ಹೈಕಮಾಂಡ್ಗೆ ಮನವಿ ಮಾಡಿದರೂ, ಟಿಕೆಟ್ ಸಿಕ್ಕಿದ್ದು, ಜೆಡಿಎಸ್ನಿಂದ ವಲಸೆ ಬಂದ ಚಿದಾನಂದಗೌಡ ಅವರಿಗೆ… ಇದರಲ್ಲಿ ವೈ. ನಾರಾಯಣ ಸ್ವಾಮಿ ಆಟ ಆಡಿ ದಾವಣಗೆರೆ-ಚಿತ್ರದುರ್ಗ ಭಾಗದ ಆಕಾಂಕ್ಷಿಗಳಿಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಈ ಭಾಗದ ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಹಾಗೂ ಎರಡನೇ ಸಾಲಿನ ಕಾರ್ಯಕರ್ತರು, ಲೀಡರ್ಗಳು, ಎಂ.ಪಿ., ಎಲ್.ಎಲ್.ಎ.ಗಳ ಬಳಿ ದೂರಿದ್ದಾರೆ ಎಂಬುದೂ ಸತ್ಯ.
7 ಜನ ಲಿಂಗಾಯಿತ ಆಕಾಂಕ್ಷಿಗಳಲ್ಲಿ ಹೋರಾಟಗಾರ ಡಾ. ಮಂಜುನಾಥ ಗೌಡ ನಿಧನರಾಗಿದ್ದಾರೆ. ಉಳಿದ 6 ಜನ ಒಟ್ಟಾಗಿ ಸೇರಿ ಡಾ. ಹಾಲನೂರ್ ಲೇಪಾಕ್ಷಿ ಅವರನ್ನು ಕಣಕ್ಕಿಳಿಸಿ ತೀವ್ರ ಹೋರಾಟ ನಡೆಸಿದ್ದಾರೆ.
ಹಿರಿಯೂರು ಶಾಸಕರಾದ ಪೂರ್ಣಿಮಾ ಅವರ ಪತಿ ಶ್ರೀನಿವಾಸ್ ಕೂಡಾ ಬಿಜೆಪಿ ಆಕಾಂಕ್ಷಿ ಆಗಿದ್ದರು. ಅವರೂ ಬಂಡಾಯವಾಗಿ ಸ್ಪರ್ಧಿಸಿ, ತೀವ್ರ ಪ್ರಚಾರ ನಡೆಸಿದ್ದಾರೆ. ಉಳಿ ದಂತೆ ಒಟ್ಟಾರೆ 15 ಸ್ಪರ್ಧಿಗಳಿದ್ದರೂ ಸೆಣ ಸಾಟ ಇರುವುದು ಚೌಡರೆಡ್ಡಿ, ಚಿದಾನಂದ ಗೌಡ, ಲೇಪಾಕ್ಷಿ, ಕಾಂಗ್ರೆಸ್ನ ರಮೇಶ್ ಬಾಬು ಹಾಗೂ ಶ್ರೀನಿವಾಸ್ ಮಧ್ಯೆ.
ಚೌಡರೆಡ್ಡಿ ಅವರು ತಮ್ಮ ಹಳೆಯ ಟೀಂ ಜೊತೆ ಪ್ರಚಾರ ನಡೆಸಿದ್ದಾರೆ. ಅವರ ಮತದ ಬುಟ್ಟಿಗೆ ಈ ಸಾರಿ ಇತರೆ ನಾಲ್ಕು ಸ್ಪರ್ಧಿಗಳು ಕೈಹಾಕಿದ್ದಾರೆ. ಇನ್ನು ಕಾಂಗ್ರೆಸ್ಗೆ ಸಾಂಪ್ರದಾಯಿಕ ಮತಗಳ ಜೊತೆಗೆ ಅಭ್ಯರ್ಥಿ ರಮೇಶ್ ಬಾಬು ಪ್ರಜ್ಞಾವಂತ ರಾಜಕಾರಣಿ ಅನ್ನೋ ಹೆಸರಿದೆ. ಆದರೆ, ಮತಪೆಟ್ಟಿಗೆಯಲ್ಲಿ ಅದು
ಸಾಬೀತಾಗಬೇಕು.
ಬಿಜೆಪಿ ಅಭ್ಯರ್ಥಿಗೆ ಕಾರ್ಯಕರ್ತರ ಪಡೆಯೇ ಇದೆ. ಸಂಘ ಪರಿವಾರ ಇದೆ. ಅಂದರೂ ಕೂಡಾ ಎಷ್ಟು ಪ್ರಮಾಣದಲ್ಲಿ? ಎಂಬ ಜಿಜ್ಞಾಸೆ ಎದ್ದಿದೆ. ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಬಂಡಾಯ ಅಭ್ಯರ್ಥಿ ಲೇಪಾಕ್ಷಿ ಪರ ಬಿಜೆಪಿ ಕಾರ್ಯಕರ್ತರು ದುಡಿಯುತ್ತಿರುವುದು ಸುಳ್ಳೇನಲ್ಲ. ಅನೇಕ ಎರಡನೇ ಸಾಲಿನ ಬಿಜೆಪಿ ನಾಯಕರುಗಳು ಒಳಸುಳಿಯಲ್ಲಿ ಲೇಪಾಕ್ಷಿ ಅವರ ಪರ ಕೆಲಸ ಮಾಡುತ್ತಿರು ವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಲೇಪಾಕ್ಷಿ ಬಿಜೆಪಿ ಗೆ ದೊಡ್ಡ ಅಡ್ಡಗಾಲಾಗಿ ದ್ದಾರೆ. ನಾನು ಹುಟ್ಟು ಬಿಜೆಪಿ ಕಾರ್ಯಕರ್ತ ಎಂದು ಹೇಳುತ್ತಾರೆ. ಎರಡೆರಡು ಸಾರಿ ಭರವಸೆ ನೀಡಿ, ತನಗೆ ಟಿಕೆಟ್ ತಪ್ಪಿಸಿದ್ದಾರೆ ನಮ್ಮ ನಾಯಕರು. ಗೆಲುವು ನನ್ನದೇ ಅನ್ನುತ್ತಿದ್ದಾರೆ ಲೇಪಾಕ್ಷಿ. ಅಲ್ಲದೇ ಕೆಲವು ಮಠಾಧಿಪತಿಗಳದ್ದೂ ಲೇಪಾಕ್ಷಿ ಅವರಿಗೆ ಆಶೀರ್ವಾದ ಇದೆ ಎಂದು ಅವರ ಪರ ದುಡಿಯುತ್ತಿರುವ ಯುವಕರು ಹೇಳುತ್ತಾರೆ.
ಇನ್ನು ಶ್ರೀನಿವಾಸ್ ಅವರೂ ಭರ್ಜರಿ ಪ್ರಚಾರ ನಡೆಸಿದ್ದು, ಹಿಂದುಳಿದ ಮತಗಳಿಗೆ ಗಾಳ ಹಾಕಿದ್ದಾರೆ. ಅವರು ಕೂಡ ತಮ್ಮದೇ ಗೆಲುವಿನ ಭರವಸೆ ಇಟ್ಟುಕೊಂಡಿದ್ದಾರೆ.
ಈ ಐವರೂ ಮಾಧ್ಯಮಗಳ ಮುಂದೆ ತಾವೇ ಗೆಲ್ಲುವುದು ಎಂದು ಲೆಕ್ಕಾಚಾರ ಮಾಡಿ ಹೇಳುತ್ತಾರೆ. ಬಹುಶಃ ಈ ಚುನಾವಣೆಯಲ್ಲಿ ಎರಡು-ಮೂರನೇ ಪ್ರಾಶಸ್ತ್ಯದ ಮತಗಳ ಮೇಲೆ ಫಲಿತಾಂಶ ಹೊರ ಬೀಳುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಪ್ರತೀ ಅಭ್ಯರ್ಥಿಗಳು ಎರಡನೇ ಪ್ರಾಶಸ್ತ್ಯದ ಮತವನ್ನಾದರೂ ತಮಗೆ ನೀಡಿ ಎಂದು ದುಂಬಾಲು ಬಿದ್ದಿದ್ದಾರೆ.
ಕೊನೆ ಗಳಿಗೆಯಲ್ಲಿ ಗಿಫ್ಟ್, ಮದ್ಯ-ಮಾಂಸಗಳ ಪ್ರಭಾವ ಕೆಲಸ ತೋರಿಸುವ ಸಂಭವ ಇಲ್ಲದಿಲ್ಲ. ಇಂತಹ ಪ್ರಭಾವಗಳಿಗೆ ಒಳಗಾಗುವ ಪದವೀಧರರೂ ಕೆಲವರಿದ್ದಾರೆ ಅಂತಾರೆ ವಿವಿಧ ಪಕ್ಷಗಳ ಕಾರ್ಯಕರ್ತರುಗಳು.
– ವಿಹಾರಿ