ದಾವಣಗೆರೆ, ಅ.26- ಸನಾತನ ಧರ್ಮವಾದ ಭಾರತೀಯ ಹಿಂದೂ ಸಂಸ್ಕೃತಿ, ಸಂಸ್ಕಾರ, ಅಂತ ಸತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡೋಣ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಶಿಸಿದರು.
ವಿಶ್ವ ಹಿಂದೂ ಪರಿಷದ್ ಹಾಗೂ ಸಾರ್ವಜನಿಕ ವಿಜಯದಶಮಿ ಉತ್ಸವ ಸಮಿತಿ ವತಿಯಿಂದ 36ನೇ ನೇ ಸಾರ್ವಜನಿಕ ವಿಜಯದಶಮಿ ಅಂಗವಾಗಿ ನಗರದ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಇಂದು ಸಂಜೆ ಹಮ್ಮಿಕೊಂಡಿದ್ದ ಅಂಬು ಛೇದನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಶರನ್ನವರಾತ್ರಿ ದಸರಾ ಮಹೋತ್ಸವದಲ್ಲಿ ನವದುರ್ಗಿಯರನ್ನು ಪೂಜಿಸಿ, ಆರಾಧಿಸುವ ಮೂಲಕ ನಮ್ಮಲ್ಲಿರುವ ಷಡ್ವರ್ಗಗಳ ನಾಶಕ್ಕೆ ಹಾಗೂ ರಾಗ, ದ್ವೇಷ, ಅಸೂಯೆಗಳನ್ನು ಸಂಹರಿಸಿಕೊಂಡು ದೇಶ ಭಕ್ತಿ ಮತ್ತು ಪ್ರೇಮವನ್ನು ಮೆರೆಯಲು ಮುಂದಾಗೋಣ. ಬನ್ನಿ ಮುಡಿದು ನಮ್ಮ ನಡೆ-ನುಡಿ, ಆಚಾರ-ವಿಚಾರಗಳ ಸಂಪನ್ನಗೊಳಿಸಿಕೊಂಡು ಬದುಕು ಬಂಗಾರವಾಗಿಸಿಕೊಳ್ಳೋಣ.
ದೇಶದ ಹಿತಕ್ಕಾಗಿ, ಹಿಂದೂ ಸಂಸ್ಕೃತಿ ಉಳಿಸುವಲ್ಲಿ ಪ್ರತಿಯೊಬ್ಬರೂ ಪ್ರತಿ ದಿನ ಒಂದು ಗಂಟೆಯಾದರೂ ಮೀಸಲಿಡುವ ಸಂಕಲ್ಪ ಮಾಡಬೇಕಿದೆ ಎಂದು ತಿಳಿಸಿದರು.
ಪ್ರಸ್ತುತ ಅನ್ನದಾತನ ಬದುಕೇ ಸಂಕಷ್ಟದಲ್ಲಿದ್ದು, ಅನ್ನವಿಲ್ಲದೆ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಅನ್ನದಾತ ಇಂತಹ ಸಂಕಷ್ಟದ ಬದುಕನ್ನು ಸಾಗಿಸುತ್ತಿದ್ದಾನೆ. ದೇಶದ ಸೈನಿಕರು ಮನೆ-ಮಕ್ಕಳು, ತಮ್ಮ ಪರಿವಾರವನ್ನೇ ಬಿಟ್ಟು ಚಳಿ, ಮಳೆ ಎನ್ನದೇ ತ್ಯಾಗ, ಬಲಿದಾನಗಳ ಮೂಲಕ ದೇಶದ ಗಡಿ ಕಾಯುತ್ತಾ ಜನರನ್ನು ರಕ್ಷಿಸುತ್ತಿದ್ದಾರೆ. ಇಂತಹ ಅನ್ನದಾತನ ಬದುಕು ಹಸನಾಗಲಿ, ದೇಶದ ಸೈನಿಕರಿಗೆ ದುರ್ಗಾ ಮಾತೆ ಶಕ್ತಿ ತುಂಬಲಿ.
ಜೊತೆಗೆ ದೇಶದಲ್ಲಿ ಕೊರೊನಾ ಸೇರಿದಂತೆ ಇನ್ನಿತರೆ ಕಾಯಿಲೆಗಳು ದೂರವಾಗಿ ಜನರು ಆರೋಗ್ಯವಂತರನ್ನಾಗಿಡುವಂತೆ ಈ ವಿಜಯದಶಮಿಯಂದು ನಾವುಗಳು ಪ್ರಾರ್ಥಿಸೋಣ ಎಂದು ಕರೆ ನೀಡಿದರು.
ಆರ್ಎಸ್ಎಸ್ನ ಶಿವಮೊಗ್ಗ ವಿಭಾಗದ ಪ್ರಚಾರಕ ನವೀನ್ ಸುಬ್ರಹ್ಮಣ್ಯ ಮಾತನಾಡಿ, ಈ ಬಾರಿಯ ವಿಜಯದಶಮಿ ಪ್ರತಿಯೊಬ್ಬ ಹಿಂದೂವಿಗೆ ಸಂಭ್ರಮ ನೀಡುವ ಹಬ್ಬವಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವ ಮೂಲಕ ಈ ಬಾರಿಯ ವಿಜಯದಶಮಿ ಭಾರತೀಯರ ಸ್ವಾಭಿಮಾನವನ್ನು ಮತ್ತಷ್ಟು ಹುಟ್ಟುಹಾಕಿದೆ. ಮನೆ ಮನೆಯಲ್ಲಿ ವಿಜಯದಶಮಿಯ ಸಂಭ್ರಮ ಇದೆ ಎಂದರು.
ಸಾರ್ವಜನಿಕ ವಿಜಯದಶಮಿ ಉತ್ಸವ ಸಮಿತಿ ಸಂಚಾಲಕ ಸಿ.ಎಸ್. ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ನಗರ ಪಾಲಿಕೆ ಮಹಾಪೌರರಾದ ಬಿ.ಜಿ. ಅಜಯ ಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ. ವೀರೇಶ್, ಸತೀಶ್ ಪೂಜಾರಿ ಮುಂತಾದ ಗಣ್ಯರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಂಬು ಛೇದಿಸಿದ ಡಿಸಿ: ಮಹಾಂತೇಶ್ ಬೀಳಗಿ ಅವರು ದಾವಣಗೆರೆಗೆ ಜಿಲ್ಲಾಧಿಕಾರಿಯಾಗಿ ಬಂದ ನಂತರ ಇದು ಎರಡನೇ ಬಾರಿ ವಿಜಯದಶಮಿಯಲ್ಲಿ ಅಂಬು ಛೇದನ ಮಾಡಿದರು. ಇದಕ್ಕೂ ಮುನ್ನ ಮಾತನಾಡಿದ ಅವರು, ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ಎಲ್ಲರಿಗೂ ಆರೋಗ್ಯ ಭಾಗ್ಯ ದಯಪಾಲಿಸಲಿ. ಇದೊಂದು ರಾಜಕೀಯೇತರ, ಧಾರ್ಮಿಕ ಕಾರ್ಯಕ್ರಮವಾಗಿದೆ ಎಂದರು.
ಬನ್ನಿ ವಿನಿಮಯ: ಅಂಬು ಛೇದನ ನಂತರ ಅಲ್ಲಿದ್ದ ಗಣ್ಯರು ಹಾಗೂ ಸಾರ್ವಜನಿಕರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಬದುಕು ಬಂಗಾರವಾಗಲಿ ಎಂದು ಶುಭ ಕೋರಿದರು.