ಪಂಚಮಸಾಲಿಗರನ್ನು 2ಎಗೆ ಸೇರಿಸಬೇಕೆಂಬ ಕೂಗು ಇಂದು, ನಿನ್ನೆಯದಲ್ಲ: ವಚನಾನಂದ ಶ್ರೀ

ಪಂಚಮಸಾಲಿಗರನ್ನು 2ಎಗೆ ಸೇರಿಸಬೇಕೆಂಬ ಕೂಗು ಇಂದು, ನಿನ್ನೆಯದಲ್ಲ: ವಚನಾನಂದ ಶ್ರೀ - Janathavaniದಾವಣಗೆರೆ, ಅ. 26- ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಬಿಗೆ ಸೇರಿಸುವ ಒತ್ತಾಯಕ್ಕೆ ಮತ್ತೆ ಪುಷ್ಠಿ ಬಂದಿದೆ. ಪಂಚಮಸಾಲಿ ಸಮಾಜದ ಎರಡು ಪ್ರಮುಖ ಮಠಗಳ ಮಠಾಧೀಶರು ಮತ್ತೆ ದನಿ ಎತ್ತಿದ್ದಾರೆ. 

ಪ್ರಸ್ತುತ ಪಂಚಮಸಾಲಿ ಸಮುದಾಯದವರು 3ಬಿ ಮೀಸಲು ಪಡೆಯುತ್ತಿದ್ದಾರೆ.  ಇದರ ಕೋಟಾ ಪ್ರತಿಶತ 5 ಮಾತ್ರ. 2ಎ ಮೀಸಲು ಸಿಕ್ಕರೆ ಅದು ಪ್ರತಿಶತ 15ರಷ್ಟಾಗುತ್ತದೆ. ಇದರಿಂದ ಉದ್ಯೋಗ, ಶಿಕ್ಷಣದಲ್ಲಿ ಹೆಚ್ಚಿನ ಮೀಸಲು ದೊರೆತು ಸಮಾಜ ಮುಂದುವರೆಯಲು ಸಾಧ್ಯವಾಗುತ್ತದೆ ಎಂಬ ನಿಟ್ಟಿನಲ್ಲಿ  ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ.

ಇದೇ 28 ರಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರು 2ಎ ಮೀಸಲಾತಿಗಾಗಿ ಬೆಳಗಾವಿಯ ವಿಕಾಸ ಸೌಧದ ಬಳಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಇತ್ತ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ  ಸ್ವಾಮೀಜಿ ಅವರೂ ಸಹ ಸಮಾಜವನ್ನು ಸಂಘಟಿಸಿ, ಮೀಸಲಾತಿಗಾಗಿ ಹೋರಾಟದ ರೂಪು ರೇಷೆಗಳನ್ನು ಸಿದ್ಧಪಡಿಸಲು ಸಮಾಜದ ಮುಖಂಡರು, ತಜ್ಞರೊಂದಿಗೆ ಸಮಾಲೋಚನೆಯಲ್ಲಿದ್ದಾರೆ.

ಈ ಮಧ್ಯೆ ಮಾಧ್ಯಮದವರೊಂದಿಗೆ ಮಾತನಾ ಡಿದ ಶ್ರೀ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಬೇಕು ಎನ್ನುವ ಕೂಗು ಇಂದು ನಿನ್ನೆಯದಲ್ಲ. ಕಳೆದ ಇಪ್ಪತ್ತೈದು ವರ್ಷಗಳ ಹಿಂದಿನದ್ದು ಎಂದಿದ್ದಾರೆ.

ಲಿಂಗಾಯತದಲ್ಲಿ ನೂರೊಂದು ಪಂಗಡಗಳಿವೆ. ಅದರಲ್ಲಿ ಪಂಚಮಸಾಲಿ ಅಗ್ರಗಣ್ಯ ಉಪ ಪಂಗಡ. ಇಂದು ಪಂಚಮಸಾಲಿಗಳು ಬಹು ಸಂಖ್ಯಾತರಿದ್ದಾರೆ ಎನ್ನುವ ಕಾರಣಕ್ಕೆ ಅವರ ಪರಿಸ್ಥಿತಿ ಚೆನ್ನಾಗಿರದಿದ್ದರೂ ಅವರಿಗೆ ಮೀಸಲು ಸೌಲಭ್ಯ ಸಿಗುತ್ತಿಲ್ಲ. ಇದು ಬಹುದೊಡ್ಡ ಅನ್ಯಾಯ ಎಂದು ವಚನಾನಂದ ಶ್ರೀಗಳು ಹೇಳಿದರು.

1994ರಲ್ಲಿ ವೀರಪ್ಪ ಮೋಯಿಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ರಾಜ್ಯದಲ್ಲಿ ಪ್ರವರ್ಗ 2ಎ ಗೆ ಹಾಗೂ ಕೇಂದ್ರದಲ್ಲಿ ಒಬಿಸಿಗೆ ಸೇರಿಸಬೇಕು ಎಂದು ಪಂಚಮಸಾಲಿ ಸಮುದಾಯದ ನಾಯಕರೆಲ್ಲ ಮನವಿ ಮಾಡಿದ್ದರು. ಅಂದಿನಿಂದ ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಈ ಕುರಿತ ಅಹವಾಲು ಸಲ್ಲಿಸುತ್ತಲೇ ಬರಲಾಗಿದೆ ಎಂದರು.

ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಜಾತಿ ಎಂಬ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂಬುದೇ ಇರಲಿಲ್ಲ. ಆಗ ಸಮುದಾಯದ ನಾಯಕರಾದ ಬಿ.ಎಂ. ಹನುಮನಾಳ  ಅವರು ಮುಂಚೂಣಿಯಲ್ಲಿ ನಿಂತು ರಾಜ್ಯದಲ್ಲಿ ವಿವಿಧೆಡೆ ಸಮೀಕ್ಷೆ ನಡೆಸಿದರು. 85 ಲಕ್ಷಕ್ಕಿಂತ ಅಧಿಕ ಸಂಖ್ಯೆಯಲ್ಲಿ ಪಂಚಮಸಾಲಿಗಳು ಇದ್ದಾರೆಂದು ಸ್ಪಷ್ಟಪಡಿಸಿಕೊಂಡರು.

2009ರಲ್ಲಿ ಸಚಿವರಾಗಿದ್ದ ಸಮುದಾಯದ ಮುಖಂಡರೇ ಆದ ಮುರುಗೇಶ್ ನಿರಾಣಿ ಅವರ ಒತ್ತಾಸೆಯಿಂದ ಸಾಮಾನ್ಯ ವರ್ಗದಿಂದ 3ಬಿ ಕೆಟ ಗರಿಗೆ ಸೇರಿಸಲಾಯಿತು. ಈಗ 2ಎಗೆ ಸೇರಿಸಬೇಕು ಎಂದು ಆಗ್ರಹಿಸಲಾಗುತ್ತಿದೆ ಎಂದು ಹೇಳಿದರು.

ಪಂಚಮಸಾಲಿಗಳಲ್ಲಿ ರೈತರೇ ಹೆಚ್ಚು, ಈಗ ರೈತ ಸಮುದಾಯ ಸಂಕಷ್ಟದಲ್ಲಿದೆ. ಶಿಕ್ಷಣ, ಉದ್ಯೋಗ ಎರಡರಲ್ಲೂ ಮೀಸಲಾತಿ  ಬಯಸುತ್ತಿದ್ದೇವೆ. ಮೀಸಲಾತಿ ವಿಷಯದಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆಯಬೇಕಿದೆ. ಅದಕ್ಕೆ ಪೂರ್ವಭಾವಿಯಾಗಿ ಸಮುದಾಯದ ರಾಜಕರಾಣಿಗಳು, ನಾಯಕರು ಒಂದೆಡೆ ಸೇರಿ ರೂಪುರೇಷೆ ಸಿದ್ಧಪಡಿಸಬೇಕಿದೆ ಎಂದರು.

ಪಂಚಮಸಾಲಿಗಳಿಗೆ 2ಎ ಮೀಸಲು ಸೌಲಭ್ಯ ಬೇಕಾದರೆ ಕಾನೂನುಬದ್ಧವಾಗಿ ಸರ್ಕಾರಕ್ಕೆ ಕುಲ ಶಾಸ್ತ್ರೀಯ ಅಧ್ಯಯನ ಕೈಗೊಂಡು ಅದರ ಪುಸ್ತಕ ರಚಿಸಿ ಅದನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಇದನ್ನು ಮಾಡಲು ಮೈಸೂರು ವಿವಿಯಲ್ಲಿ ಒಂದು ವಿಭಾಗವಿದೆ. ಇದಕ್ಕೆ ನಾವು ಪ್ರಯತ್ನ ಮಾಡುತ್ತಿದ್ದೇವೆ. ಸಮುದಾಯದ ಹಿರಿಯರು ಹಾಗೂ ತಜ್ಞರ ಜೊತೆ ಚರ್ಚಿಸಿ ಇದಕ್ಕೆ ಅಂತಿಮ ರೂಪ ನೀಡುತ್ತವೆ. ನಂತರ ಸರ್ಕಾರ ಮೀಸಲು ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ ಎಂದರು.

ಸಮಾಜದ ಹಿರಿಯರೆಲ್ಲಾ ಒಟ್ಟಾಗಿ ಸೇರಿಸಿ 2ಎ ಮೀಸಲು ಪಡೆಯಲೇಬೇಕೆಂಬ ಹೋರಾಟ ಅಣಿಗೊಳಿಸಲು ಸಿದ್ಧವಾಗಿದ್ದೇವೆ. ಸದ್ಯ ನಮ್ಮ ಹೋರಾಟ ಪ್ರಾಥಮಿಕ ಹಂತದಲ್ಲಿದ್ದು, ಹಂತ ಹಂತವಾಗಿ ಗುರಿ ಮುಟ್ಟುವರೆಗೊ ತೆಗೆದುಕೊಂಡು ಹೋಗಲಾಗುವುದು. ಮೀಸಲು ಪಡೆದೇ ತೀರುತ್ತೇವೆ ಎಂದರು.

ಕೂಡಲ ಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿಗಳಿಗೆ 2ಎ ಮೀಸಲು ನೀಡಬೇಕೆಂದು ಹೋರಾಟ ರೂಪಿಸುತ್ತಿದ್ದಾರೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೋರಾಟಕ್ಕೆ ಬೆಂಬಲ ನೀಡುವಂತೆ ಸಮುದಾಯದವರಿಗೆ ಸೂಚಿಸಿದ್ದೇವೆ ಎಂದು ವಚನಾನಂದ ಶ್ರೀಗಳು ಹೇಳಿದರು.

error: Content is protected !!