ಆಗ್ನೇಯ ಕ್ಷೇತ್ರ ಬಿಜೆಪಿಯದ್ದೇ: ಮೊದಲ ಸುತ್ತಿನಲ್ಲೇ ಗೆಲುವು

ದಾವಣಗೆರೆ, ಅ. 24 – ಆಗ್ನೇಯ ಪದವೀಧರ ಕ್ಷೇತ್ರ ಬಿಜೆಪಿಯ ನೆಲೆಯಾಗಿದೆ. ದಾವಣಗೆರೆ ಕ್ಷೇತ್ರದಲ್ಲೂ ಬಿಜೆಪಿ ಬಲವಾಗಿದ್ದು, ಈ ಬಾರಿ  ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮೊದಲ ಸುತ್ತಿನಲ್ಲೇ ಗೆಲ್ಲುವು ದಾಗಿ ಸಂಸದ ಜಿ.ಎಂ. ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಗಾಗಿ ನಗರದ ಶಾಮನೂರು ಜಯದೇವಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ಬಿಜೆಪಿ ಅಭ್ಯರ್ಥಿ ಚಿದಾನಂದ್ ಎಂ. ಗೌಡ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಆಗ್ನೇಯ ಕ್ಷೇತ್ರದಲ್ಲಿ ಕಳೆದ ಒಂಭತ್ತು ಚುನಾವಣೆಗಳಲ್ಲಿ ಬಿಜೆಪಿ ಏಳು ಬಾರಿ ಗೆಲುವು ಸಾಧಿಸಿದೆ. ಚುನಾವಣೆಗೆ ಮೂರು ದಿನಗಳು ಮಾತ್ರವಿದ್ದ, ಶತಾಯಗತಾಯ ಈ ಕ್ಷೇತ್ರದಲ್ಲಿ ಗೆಲ್ಲಲು ಕಾರ್ಯಕರ್ತರು ಹಬ್ಬದ ನಡುವೆಯೇ ಶ್ರಮಿಸಬೇಕು ಎಂದು ಕರೆ ನೀಡಿದರು.

ದಾವಣಗೆರೆಯಲ್ಲಿ ಬಿಜೆಪಿಯ ಐವರು ಶಾಸಕರು, ಎಂ.ಎಲ್.ಸಿ., ಎಂ.ಪಿ. ಇದ್ದು ಇದು ಪಕ್ಷದ ನೆಲೆಯಾಗಿದೆ. ಇಲ್ಲಿ ಹಿನ್ನಡೆಯಾದರೆ, ನಮಗೆ, ಪಕ್ಷಕ್ಕೆ ಅಗೌರವವಾಗುತ್ತದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಅಗೌರವವಾಗುತ್ತದೆ ಎಂದವರು ಹೇಳಿದರು.

ಸಭೆ ಉದ್ಘಾಟಿಸಿ ಮಾತನಾಡಿದ ಶಾಸಕ ಎಸ್.ಎ. ರವೀಂದ್ರನಾಥ್, ಚುನಾವಣೆಯಲ್ಲಿ ಗೆದ್ದ ನಂತರ ಚಿದಾನಂದ ಗೌಡರು ದಾವಣಗೆರೆಯಲ್ಲೇ ಮನೆ ಮಾಡಲಿದ್ದಾರೆ. ಪಾಲಿಕೆಗೆ ಬಿಜೆಪಿ ಪರವಾಗಿ ಇನ್ನೊಂದು ಮತ ತರಲಿದ್ದಾರೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರಿ ಮಾತನಾಡಿ, ಬಿಜೆಪಿಗೆ ಪರಿಷತ್‌ನಲ್ಲಿ ಸಂಖ್ಯಾಬಲದ ಕೊರತೆ ಇದೆ. ಪರಿಷತ್‌ನಲ್ಲೂ ಜನಪರ ಮಸೂದೆಗಳು ಅಂಗೀಕಾರ ಪಡೆಯಲು ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕಿದೆ ಎಂದರು.

ಪರಿಷತ್ ಸದಸ್ಯ ವೈ.ಎ. ನಾರಾಯಣ ಸ್ವಾಮಿ ಮಾತನಾಡಿ, ಈ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಸ್ವತಂತ್ರರಿಗೆ ನೆಲೆ ಇಲ್ಲ. ಎರಡು ಬಾರಿ ಜೆಡಿಎಸ್ ಲಾಟರಿಯಂತೆ ಗೆದ್ದಿದೆಯೇ ಹೊರತು ಮತಗ ಳಿಂದ ಅಲ್ಲ ಎಂದರು.

ಶಾಸಕ ಪ್ರೊ. ಲಿಂಗಣ್ಣ ಮಾತನಾಡಿದರು. ಪಕ್ಷದ ಪ್ರಧಾನ ಕಾರ್ಯದರ್ಶಿ ಜಗದೀಶ್ ಪ್ರಾ ಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ನೀಟ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 55ನೇ ರಾಂಕ್ ಗಳಿಸಿದ ಹೆಚ್.ಎಸ್. ನಿಸರ್ಗ ಅವರನ್ನು ಸನ್ಮಾನಿಸಲಾಯಿತು.

ವೇದಿಕೆ ಮೇಲೆ ಶಾಸಕ ಎಸ್.ವಿ. ರಾಮಚಂದ್ರಪ್ಪ, ಜಿ.ಪಂ. ಅಧ್ಯಕ್ಷೆ ದೀಪಾ ಜಗದೀಶ್, ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್, ಉಪ ಮೇಯರ್ ಸೌಮ್ಯ ನರೇಂದ್ರ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಬಸವರಾಜ ನಾಯ್ಕ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಸುಧಾ ಜಯರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!