ದಾವಣಗೆರೆ, ಅ.23 – ಕೃಷಿ ಇಲಾಖೆ ದಾವಣಗೆರೆ ವತಿಯಿಂದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಆತ್ಮ ಯೋಜನೆಯಡಿ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಆತ್ಮ ಯೋಜ ನೆಯ ಯೋಜನಾ ನಿರ್ದೇಶಕರು ಹಾಗೂ ಉಪ ಕೃಷಿ ನಿರ್ದೇಶಕ ಶಿವಕುಮಾರ್ ನೆರವೇರಿಸಿ ರೈತ ಮಹಿಳೆಯ ರನ್ನುದ್ದೇಶಿಸಿ ಮಾತನಾಡಿ, ನಮ್ಮ ದೇಶ ಕೃಷಿಯಾಧಾರಿತ ದೇಶವಾಗಿದ್ದು, ಕೃಷಿಯಲ್ಲಿ ಬೀಜದಿಂದ ಬೀಜದವರೆಗೆ ಅಂದರೆ ಬಿತ್ತನೆಯಿಂದ ಕಟಾವಿನವರೆಗೆ ಮಹಿಳೆಯರು ನಿರ್ವಹಿಸುವ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ಇದನ್ನು ಸ್ಮರಿಸಿಕೊಳ್ಳಲೆಂದೇ ಅಕ್ಟೋಬರ್ 15ನೇ ದಿನವನ್ನು ರೈತ ಮಹಿಳೆಯರ ದಿನಾಚರಣೆಯನ್ನಾಗಿ ಆಚರಿಸುವುದರ ಮೂಲಕ ರೈತ ಮಹಿಳೆಯರಿಗೆ ದೇಶಾದ್ಯಂತ ಗೌರವ ಸಲ್ಲಿಸಲಾಗುತ್ತದೆ ಎಂದು ಅಭಿಪ್ರಾಯವನ್ನು ಹಂಚಿಕೊಂಡರು.
ಸಹ ಪ್ರಾಧ್ಯಾಪಕರು ಹಾಗೂ ಆಹಾರ ವಿಜ್ಞಾನಿಗಳು ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಕತ್ತಲಗೆರೆಯ ಡಾ. ಮಾರುತೇಶ್ ಅವರು `ಆರೋಗ್ಯವೇ ಭಾಗ್ಯ’ ಶೀರ್ಷಿಕೆಯಡಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನೂ ಆರೋಗ್ಯ ಸಮತೋಲನ ಕಾಪಾಡಿಕೊಳ್ಳಲು ಆರು ರೀತಿಯ ಪೌಷ್ಠಿಕಾಂಶಗಳಾದ ಕಾರ್ಬೋಹೈಡ್ರೇಟ್ಸ್, ಪ್ರೋಟಿನ್ಸ್, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ಸ್, ಮಿನರಲ್ಸ್ಗಳುಳ್ಳ ಆಹಾರ ಪದಾರ್ಥಗಳನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಸಹಾಯಕ ಕೃಷಿ ನಿರ್ದೇಶಕರಾದ ಪ್ರತಿಭಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನಿಂದಲೂ ಬೇಸಾಯದಲ್ಲಿ ಕೌಶಲ್ಯಾಧಾರಿತ ಕೆಲಸಗಳನ್ನು ಮಹಿಳೆಯರು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಅಂದರೆ ಬಿತ್ತನೆ ಬೀಜಗಳ ಶೇಖರಣೆ, ಬಿತ್ತನೆ, ಕಳೆ ನಿರ್ವಹಣೆ, ಕಟಾವು, ಒಕ್ಕಲು ಮಾಡುವುದು ಸೇರಿದಂತೆ, ಒಟ್ಟಾರೆ ಶೇ.50ರಷ್ಟು ಕೃಷಿ ಕೆಲಸಗಳನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿಕಾರಿ ಬಿ. ದುರುಗಪ್ಪ, ಆತ್ಮ ಸಿಬ್ಬಂದಿ ವೆಂಕಟೇಶ್ ಬಿ.ಎಸ್., ರೈತ ಅನುವುಗಾರರಾದ ಸಿದ್ದಲಿಂಗಪ್ಪ, ರಾಜಪ್ಪ, ಪ್ರಭಾಕರ್ ಮತ್ತಿತರರು ಭಾಗವಹಿಸಿದ್ದರು.