ಹಿಮೋಫಿಲಿಯಾ ಸೊಸೈಟಿಗೆ ಸಚಿವ ಈಶ್ವರಪ್ಪ ಭೇಟಿ

ಮೂಲಭೂತ ಸೌಲಭ್ಯ, ವಿಕಲಚೇತನರ ಆನುದಾನದ ನೆರವಿಗಾಗಿ ಸೊಸೈಟಿ ಮನವಿ

ದಾವಣಗೆರೆ, ಅ. 23 – ನಗರದ ಕರ್ನಾಟಕ ಪಿಮೋಫಿಲಿಯಾ ಸೊಸೈಟಿಯು ಹಿಮೋಫಿಲಿಯಾ ರೋಗಿಗಳಿಗೆ ನೆರವು ನೀಡಲುವ ಮೂಲಭೂತ ಸೌಲಭ್ಯ ಕಲ್ಪಿಸಲು 2 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ.

ಹಿಮೋಫಿಲಿಯಾ ಸೊಸೈಟಿಗೆ ಕಳೆದ ವಾರ ಈಶ್ವರಪ್ಪ ಆಗಮಿಸಿದ ಸಂದರ್ಭದಲ್ಲಿ ಸೊಸೈಟಿಯ ಅಧ್ಯಕ್ಷ ಡಾ. ಸುರೇಶ ಹನಗವಾಡಿ ಅವರು ಈ ಮನವಿ ಸಲ್ಲಿಸುವ ಜೊತೆಗೆ, ವಿಕಲಚೇತನರಿಗೆ ನೀಡಲಾಗುವ ಶೇ.5ರ ಅನುದಾನದ ನೆರವು ನೀಡುವಂತೆ ಕೋರಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಹಿಮೋಫಿಲಿಯಾ ಸೊಸೈಟಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಅದನ್ನು ನೋಡಲು ಇಲ್ಲಿಗೆ ಬಂದಿದ್ದೇನೆ. ಸೊಸೈಟಿಯ ಅಭಿವೃದ್ಧಿಗಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ರಾಜ್ಯ ಸರ್ಕಾರ 2012ರಲ್ಲಿ 2 ಕೋಟಿ ರೂ. ಅನುದಾನ ವನ್ನು ಬಜೆಟ್‌ನಲ್ಲಿ ಘೋಷಿಸಿತ್ತು, ಇದರಲ್ಲಿ 50 ಲಕ್ಷ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆ ಮಾಡಿದರೆ ರೋಗಿಗಳಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗಲಿದೆ ಎಂದು ಡಾ. ಹನಗವಾಡಿ ಅವರು ತಿಳಿಸಿದರು.

ಇದರ ಜೊತೆಗೆ ಲೈಫ್‌ಲೈನ್ ರಕ್ತ ಭಂಡಾರಕ್ಕೆ ಅವಶ್ಯವಿರುವ ಯಂತ್ರೋಪಕರಣಗಳನ್ನು ಖರೀದಿಸಿ ಉತ್ಕೃಷ್ಟ ರಕ್ತ ಹಾಗೂ ರಕ್ತಾಂಶಗಳ ಚಿಕಿತ್ಸೆ ನೀಡಲು ಅನುದಾನ ನೀಡಬೇಕು ಎಂದು ಕೇಳಿದ್ದಾರೆ. ಹಿಮೋಫಿಲಿಯಾ ರೋಗವನ್ನು ಕೇಂದ್ರ ಸರ್ಕಾರ ವಿಕಲಚೇತರ ಅಧಿನಿಯಮದಲ್ಲಿ ಸೇರಿಸಿದೆ. ಸರ್ಕಾರಿ ಸಂಸ್ಥೆಗಳಲ್ಲಿ ನೀಡುವ ಶೇ.5ರಷ್ಟು ಅನುದಾನವನ್ನು ಹಿಮೋಫಿಲಿಯಾ ಸಮುದಾಯಕ್ಕೂ ಅನ್ವಯವಾಗುತ್ತದೆ. ಹೀಗಾಗಿ ವಿವಿಧ ಇಲಾಖೆಗಳ ಯೋಜನೆಯಲ್ಲಿ ಈ ಮೀಸಲಾತಿ ಅನುದಾನ ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಹನಗವಾಡಿ ಒತ್ತಾಯಿಸಿದರು.

ಹಿಮೋಫಿಲಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಇಲ್ಲದಿರುವುದರಿಂದ, ಗ್ರಾಮ ಪಂಚಾಯ್ತಿ ಮಟ್ಟದಿಂದ ರಾಜ್ಯ ಮಟ್ಟದ ಗ್ರಾಮೀಣಾಭಿವೃದ್ಧಿ ಯೋಜನೆಗಳಲ್ಲಿ ಅದಿಕಾರಿ ವರ್ಗದವರಿಗೆ, ಜನಪ್ರತಿನಿಧಿಗಳಿಗೆ ಅರಿವು ಮೂಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇದರಿಂದ ಹೆಚ್ಚು ರೋಗಿಗಳಿಗೆ ನೆರವಾಗಲು ಸಾಧ್ಯವಾಗುತ್ತದೆ. ಇದಕ್ಕಾಗಿ ತಮ್ಮ ಸಂಸ್ಥೆ ಕೈ ಜೋಡಿಸಲು ಸಿದ್ಧವಿದೆ ಎಂದೂ ಡಾ. ಹನಗವಾಡಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಸೊಸೈಟಿ ಉಪಾಧ್ಯಕ್ಷ   ಡಾ. ಬಿ.ಟಿ. ಆಚ್ಯುತ, ಕಾರ್ಯನಿರ್ವಾಹಕ ನಿರ್ದೇಶಕ ಸದಾಶಿವಪ್ಪ, ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಹವಳಿ, ಸೊಸೈಟಿಯ ಮಹಿಳಾ ವಿಭಾಗದ ಡಾ. ಮೀರಾ ಹನಗವಾಡಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!