ಜು.25ರ ನಂತರ ಮಲೇಬೆನ್ನೂರು ವಿಭಾಗಕ್ಕೆ ನೀರು ಬಿಡುಗಡೆ
ಶಿವಮೊಗ್ಗ, ಜು.21- ಭದ್ರಾ ಜಲಾಶಯದಿಂದ ಅಚ್ಚುಕಟ್ಟಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ನಾಳೆ ದಿನಾಂಕ 22ರ ಬುಧವಾರದಿಂದ ನೀರು ಬಿಡುಗಡೆ ಮಾಡಲಾಗುವುದೆಂದು ತಿಳಿದು ಬಂದಿದೆ.
ನೀರು ಬಿಡುಗಡೆ ಮಾಡುವ ಕುರಿತು ಭದ್ರಾ ಅಚ್ಚುಕಟ್ಟು ಪ್ರಾಧಿಕಾರ (ಕಾಡಾ)ದಿಂದ ಬುಧವಾರ ಅಧಿಕೃತ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ ಎಂದು ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ.ದ್ಯಾವಪ್ಪ ರೆಡ್ಡಿ ತಿಳಿಸಿದ್ದಾರೆ.
ಈ ಸಂಬಂಧವಾಗಿ ಮಂಗಳವಾರ ಭದ್ರಾ ಕಾಡಾ ಕಚೇರಿಯಲ್ಲಿ ಭದ್ರಾ ಮುಖ್ಯ ಇಂಜಿನಿಯರ್ ಯತೀಶ್ ಚಂದ್ರನ್ ಅವರು ಪ್ರಭಾರ ಭದ್ರಾ ಅಧೀಕ್ಷಕ ಇಂಜಿನಿಯರ್ ರವಿಚಂದ್ರ, ದಾವಣಗೆರೆ ವಿಭಾಗದ ಇಇ ಮಲ್ಲಪ್ಪ, ಮಲೇಬೆನ್ನೂರು ವಿಭಾಗದ ಇಇ ಚಿದಂಬರ್ ಲಾಲ್ ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನೀರು ಹರಿಸುವ ತೀರ್ಮಾನ ಕೈಗೊಂಡಿದ್ದಾರೆ.
ಭದ್ರಾ ಎಡ ಮತ್ತು ಬಲದಂಡೆ ನಾಲೆಗಳಲ್ಲಿ 120 ದಿವಸ ಸತತವಾಗಿ ನೀರು ಹರಿಸುವುದನ್ನು ಮುಂದಿನ ಮಳೆ ಪ್ರಮಾಣ ಆಧರಿಸಿ ನಿರ್ಧಾರ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದಾರೆಂದು ತಿಳಿದು ಬಂದಿದೆ.
ಅಲ್ಲದೇ, ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಮತ್ತು ಭಾರತೀಯ ರೈತ ಒಕ್ಕೂಟದ ಪದಾಧಿಕಾರಿಗಳು ಜುಲೈ 20 ರಿಂದಲೇ ನಾಲೆಗೆ ನೀರು ಹರಿಸುವಂತೆ ಮನವಿ ಮಾಡಿದ್ದನ್ನು ಮತ್ತು ಹರಿಹರ ಶಾಸಕ ಎಸ್.ರಾಮಪ್ಪ ಅವರು ಜುಳೇ 25ರ ನಂತರ ನೀರು ಹರಿಸಿ ಎಂಬ ಅಭಿಪ್ರಾಯದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ, ಬುಧವಾರದಿಂದ ಭದ್ರಾ ಬಲದಂಡೆಗೆ ಬಿಡುಗಡೆ ಮಾಡುವ ಪೂರ್ಣ ಪ್ರಮಾಣದ ನೀರನ್ನು ದಾವಣಗೆರೆ ವಿಭಾಗಕ್ಕೆ ಹರಿಸಿ, ಜುಲೈ 25ರ ನಂತರ ಮಲೇಬೆನ್ನೂರು ವಿಭಾಗಕ್ಕೆ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಸಾವಿರ ಕ್ಯೂಸೆಕ್ಸ್ ನೀರು : ಜಲಾಶಯದಿಂದ ಬಲದಂಡೆ ನಾಲೆಗೆ ಒಂದು ಸಾವಿರ ಕ್ಯೂಸೆಕ್ಸ್ ನೀರು ಹರಿಸಿ, ನಂತರ ರೈತರ ಬೇಡಿಕೆಗೆ ಅನುಗುಣವಾಗಿ ನೀರಿನ ಬಿಡುಗಡೆ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಗೊತ್ತಾಗಿದೆ.
ತೊಂದರೆ ಇಲ್ಲ : 71.535 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಭದ್ರಾ ಜಲಾಶಯದಲ್ಲೀಗ 36.602 ಟಿಎಂಸಿ ನೀರು ದಾಖಲಾಗಿದ್ದು, ಜುಲೈ ಕೊನೆಯ ವಾರ ಅಥವಾ ಆಗಸ್ಟ್ ತಿಂಗಳಿನಲ್ಲಿ ನಿರೀಕ್ಷೆಯಂತೆ ಹೆಚ್ಚು ಮಳೆ ಬರುವ ಸಾಧ್ಯತೆ ಇರುವುದರಿಂದ ಮುಂಗಾರು ಹಂಗಾಮಿನ ಬೆಳೆಗೆ ಜಲಾಶಯದಿಂದ ನೀರಿನ ತೊಂದರೆ ಆಗುವುದಿಲ್ಲ ಎಂಬುದು ಮಾಜಿ ಶಾಸಕ ಬಿ.ಪಿ.ಹರೀಶ್ ಅವರ ಅಭಿಪ್ರಾಯವಾಗಿದ್ದು, ಸತತವಾಗಿ 120 ದಿನ ನೀರು ಹರಿಸಬೇಕೆಂಬುದು ಅವರ ಒತ್ತಾಯವಾಗಿದೆ.
ಮಲೇಬೆನ್ನೂರು ವಿಭಾಗಕ್ಕೆ ಒಂದು ವಾರ ತಡವಾಗಿ ನೀರು ಹರಿಸುವುದಕ್ಕೆ ನಮ್ಮ ವಿರೋಧವಿಲ್ಲ. ಈ ವಾರದ ಅವಧಿಯನ್ನು ಕೊನೆಯ ದಿನಗಳಲ್ಲಿ ಮುಂದುವರಿಸಬೇಕೆಂದು ಭಾನುವಳ್ಳಿ ಜಿ.ಪಂ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ ಅವರ ಮನವಿ ಆಗಿದೆ.
ಹೆಚ್ಚು ನೀರು ಸಂಗ್ರಹ : ಮಂಗಳವಾರ ವರದಿ ಪ್ರಕಾರ ಭದ್ರಾ ಜಲಾಶಯಕ್ಕೆ 4957 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಜಲಾಶಯದ ನೀರಿನ ಮಟ್ಟ 153 ಅಡಿ ಆಗಿದೆ. ಕಳೆದ ವರ್ಷ ಈ ದಿನ ಜಲಾಶಯದಲ್ಲಿ 137 ಅಡಿ ನೀರಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಜಲಾಶಯದಲ್ಲಿ 16 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ.
ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಯಿಂದಾಗಿ ಒಂದೇ ವಾರದಲ್ಲೇ ಜಲಾಶಯ ಭರ್ತಿಯಾಗುವ ಮೂಲಕ ದಾಖಲೆ ಸೃಷ್ಟಿ ಆಗಿತ್ತು. ಈ ವರ್ಷ ಅಂತಹ ಮಹಾ ಮಳೆ ಬಾರದಿದ್ದರೂ ವಾಡಿಕೆಯಂತೆ ಬರುವ ಮಳೆ ಬಂದರೂ ಡ್ಯಾಂ ಭರ್ತಿ ಆಗಲಿದೆ ಎಂಬುದು ಅಚ್ಚುಕಟ್ಟಿನ ರೈತರ ವಿಶ್ವಾಸದ ಮಾತಾಗಿದೆ.
ಸಸಿ ಮಡಿ ಸಿದ್ಧತೆ : ತುಂಗಭದ್ರಾ ನದಿ ಪಾತ್ರದ ರೈತರು ಮತ್ತು ದೇವರಬೆಳಕೆರೆ ಪಿಕಪ್ ನೀರು ಆಶ್ರಿತ ರೈತರು ಈಗಾಗಲೇ ಭತ್ತದ ನಾಟಿ ಮಾಡಿದ್ದಾರೆ. ಬೋರ್ವೆಲ್ ನೀರಿನ ಸೌಲಭ್ಯ ಇರುವ ರೈತರು ಹಾಗೂ ಹಳ್ಳದ ನೀರಿನ ಸೌಲಭ್ಯ ಇರುವ ಭತ್ತದ ಸಸಿ ಮಡಿಗಾಗಿ ಬೀಜ ಚೆಲ್ಲಿದ್ದಾರೆ.
ಇನ್ನೂ ಕೆಲವು ರೈತರು ಭದ್ರಾ ಡ್ಯಾಂನಿಂದ ನೀರು ಬಂದ ಮೇಲೆಯೇ ಬೀಜ ಚೆಲ್ಲಿ ಸಸಿ ಮಡಿ ಬೆಳೆಸುವ ಯೋಜನೆಯಲ್ಲಿದ್ದಾರೆ. ಒಟ್ಟಾರೆ ರೈತರ ಅಭಿಪ್ರಾಯ ಆಗಸ್ಟ್ ಮೊದಲ ವಾರದಿಂದ ನೀರು ಬಿಟ್ಟರೆ ಸಾಕಿತ್ತು ಎಂಬುದಾಗಿದೆ.