ಜಿಲ್ಲೆಯಲ್ಲಿ ಮರಣ ಪ್ರಮಾಣ ತಗ್ಗಿಸಿ

ಜಿಲ್ಲೆಯಲ್ಲಿ ಮರಣ ಪ್ರಮಾಣ ತಗ್ಗಿಸಿ - Janathavaniದಾವಣಗೆರೆ, ಜು. 20- ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜುಗಳು, ಉತ್ತಮ ಆಸ್ಪತ್ರೆಗಳಿದ್ದರೂ ಮರಣ ಪ್ರಮಾಣ ರಾಜ್ಯದ ಸರಾಸರಿಗಿಂತ ಹೆಚ್ಚಾಗಿದೆ. ಮರಣ ಪ್ರಮಾಣ ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್‌ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ ಅವರು, ರಾಜ್ಯದಲ್ಲಿ ಕೋವಿಡ್ ಮರಣ ಪ್ರಮಾಣ ಶೇ.2.1 ರಷ್ಟಿದ್ದರೆ ಜಿಲ್ಲೆಯಲ್ಲಿ  ಶೇ.3.63 ಇದೆ. ಈ ಪ್ರಮಾಣವನ್ನು ಮುಂದಿನ ದಿನಗಳಲ್ಲಿ ತಗ್ಗಿಸಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಂಭವ ಇದೆ ಎಂದು ಕೆಲ ತಜ್ಞರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಸಾಕಷ್ಟು ಬೆಡ್‍ಗಳು, ಆಂಬ್ಯು ಲೆನ್ಸ್, ವೆಂಟಿಲೇಟರ್ ಹೀಗೆ ಈಗಿನಿಂದಲೇ ಎಲ್ಲ ರೀತಿಯ ಸರ್ವ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಹೇಳಿದರು.

ಸ್ವಚ್ಚತೆಗೆ ಗಮನ ಕೊಡಿ: ಮಳೆಗಾಲ ಚುರುಕಾಗಿರುವು ದರಿಂದ ನಗರದಲ್ಲಿ ರೋಗ ರುಜಿನಗಳು ಹೆಚ್ಚಾಗುವ ಸಂಭವ ಇರುತ್ತದೆ. ಪಾಲಿಕೆ ವತಿಯಿಂದ ನಗರ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಿ. ಪೌರಕಾರ್ಮಿಕರ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ಹರಿಸಿ. ಅವರಿಗೆ ಸುರಕ್ಷತಾ ಸಾಮಗ್ರಿಗಳೊಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಖಾದ್ಯಗಳನ್ನು ನೀಡುವಂತೆಯೂ, ಇನ್ನೊಮ್ಮೆ ನಗರದಾದ್ಯಂತ ಸ್ಯಾನಿಟೈಸ್ ಮಾಡಿಸುವಂತೆ  ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಮಾಸ್ಕ್ ಕಡ್ಡಾಯ: ಮಾಸ್ಕ್ ಧರಿಸದೇ ಇರುವವರ ವಿರುದ್ದ ದಂಡ ವಿಧಿಸಿ, ಗುಂಪು ಸೇರುವುದನ್ನು ತಡೆಯಬೇಕು. ಸಾಮಾಜಿಕ ಅಂತರ, ಮಾಸ್ಕ್ ಧಾರಣೆಯಿಂದ ಕೋವಿಡ್ ನಿಯಂತ್ರಣ ಸಾಧ್ಯವಿದ್ದು ಎಲ್ಲರೂ ಇದನ್ನು ಪಾಲಿಸುವಂತೆ ನಿಗಾ ವಹಿಸಬೇಕು ಎಂದರು. ಜಿಲ್ಲೆಯ ಮಳೆ ವಿವರ ಪಡೆದುಕೊಂಡ ಅವರು, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ  ಹಾಗೂಇತರೆ ವಸ್ತುಗಳ ಪೂರೈಕೆಯಲ್ಲಿ ಲೋಪ ಬಾರದಂತೆ ಕ್ರಮ ವಹಿಸುವಂತೆ ಹೇಳಿದರು.

error: Content is protected !!