ಹರಿಹರ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ `ಸಾಮಾನ್ಯ ಮಹಿಳೆ’ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ `ಸಾಮಾನ್ಯ’ ಮೀಸಲಾತಿ ನಿಗದಿ. ಅ.29 ರಂದು ಚುನಾವಣೆ
ಹರಿಹರ, ಅ.22- ಇಲ್ಲಿನ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಗದ್ದುಗೆಗಾಗಿ ಮೂರೂ ಪಕ್ಷಗಳು ತೀವ್ರ ಕಸರತ್ತು ನಡೆಸಲು ಮುಂದಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಅಧ್ಯಕ್ಷ ಗಾದಿ ಏರುವ ಕನಸು ಹೊತ್ತು ಕುಳಿತಿದ್ದ ಪುರುಷ ಸದಸ್ಯರ ಆಸೆ ಠುಸ್ ಎಂದಿದೆ. ಇತ್ತ ಮಹಿಳಾ ಅಭ್ಯರ್ಥಿಗಳು ತಮ್ಮ ನಾಯಕರ ಗಮನ ಸೆಳೆಯಲು ಬಲಾಬಲ ಪ್ರಯತ್ನ ನಡೆಸುವ ಮೂಲಕ ಅಧಿಕಾರ ಹಿಡಿಯುವ ಆಲೋಚನೆಯಲ್ಲಿದ್ದಾರೆ.
ಮ್ಯಾಜಿಕ್ ಸಂಖ್ಯೆ 17: ಯಾವುದೇ ಪಕ್ಷದ ಅಭ್ಯರ್ಥಿ ನಗರಸಭೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯಬೇಕಾದರೆ ಮ್ಯಾಜಿಕ್ ಸಂಖ್ಯೆ 17 ಅತ್ಯಗತ್ಯ. ಪ್ರಸ್ತುತ ಜೆಡಿಎಸ್ ಪಕ್ಷದ 14, ಕಾಂಗ್ರೆಸ್ ಪಕ್ಷದ 10, ಬಿಜೆಪಿ ಪಕ್ಷದ 5 ಸದಸ್ಯರು ಹಾಗೂ 2 ಪಕ್ಷೇತರರು ಸೇರಿ 31 ಸಂಖ್ಯೆಯ ಬಲಾಬಲವುಳ್ಳ ನಗರಸಭೆ ಅಧ್ಯಕ್ಷರಾಗಲು ಕನಿಷ್ಟ 17 ಮತಗಳು ಬೇಕಿದೆ.
ಲೋಕಸಭಾ ಸದಸ್ಯರ ಒಂದು ಮತ ಹಾಗೂ ಓರ್ವ ಶಾಸಕರ ಮತಗಳು ಅಧ್ಯಕ್ಷರ ಆಯ್ಕೆಗೆ ಪರಿಗಣಿಸಲ್ಪಡುತ್ತವೆ. ವಿಧಾನಪರಿಷತ್ ಸದಸ್ಯರ ಮತ ಪರಿಗಣನೆ ಬಗ್ಗೆ ಇನ್ನೂ ಸಮರ್ಪಕ ಮಾಹಿತಿ ಲಭ್ಯವಾಗಿಲ್ಲ.
ಆಡಳಿತಕ್ಕೆ ಬಹುಮತ ಪಡೆಯಲು ಮೂರೂ ಪಕ್ಷಗಳಿಗೆ ಸಾಧ್ಯವಾಗದ ಕಾರಣ ಒಂದು ಪಕ್ಷ ಮತ್ತೊಂದು ಪಕ್ಷಕ್ಕೆ ಬೆಂಬಲ ನೀಡುವುದು ಅನಿವಾರ್ಯವಾಗಿದ್ದು, ತೀವ್ರ ಕುತೂಹಲಕ್ಕೆ ಎಡೆ ಮಾಡಿದೆ. ಅಲ್ಲದೆ ಪಕ್ಷೇತರ ಸದಸ್ಯರಿಗೂ ಭಾರೀ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕುದುರೆ ವ್ಯಾಪಾರ ಹಾಗೂ ರೆಸಾರ್ಟ್ ರಾಜಕೀಯದ ಬೆಳವಣಿಗೆಗಳು ತೆರೆ ಮರೆಯಲ್ಲಿ ನಡೆಯಲಾರಂಭಿಸಿವೆ.
ಹರಿಹರ ನಗರಸಭೆ ಅಧ್ಯಕ್ಷ ಸ್ಥಾನಕ್ಕಾಗಿ ರೇಸ್ ನಲ್ಲಿರುವ ಆಕಾಂಕ್ಷಿಗಳು
ಅತಿ ಹೆಚ್ಚು ಎಂದರೆ 14 ಸದಸ್ಯರ ಬಲ ಹೊಂದಿರುವ ಜೆಡಿಎಸ್ ಸದಸ್ಯರು, ಮುಖಂಡರು ಅಧಿಕಾರ ನಮ್ಮದೇ ಎಂದು ಬೀಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ನೇತೃತ್ವದಲ್ಲಿ ಇತ್ತೀಚೆಗೆ ತಮ್ಮ ಪಕ್ಷದ ಎಲ್ಲಾ ಸದಸ್ಯರೊಂದಿಗೆ ಸಾಧಕ-ಬಾಧಕಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಪಕ್ಷದಿಂದ 20ನೇ ವಾರ್ಡ್ನ ಲಿಂಗಾಯತ ಸಮುದಾಯದ ರತ್ನ ಡಿ.ಉಜ್ಜೇಶ್, 27ನೇ ವಾರ್ಡ್ ನ ಉಷಾ ಮಂಜುನಾಥ್, ಕುರುಬ ಸಮುದಾಯದ 9ನೇ ವಾರ್ಡ್ನ ನಿಂಬಕ್ಕ ಚಂದಾಪೂರ್, ನಾಯಕ ಸಮುದಾಯದ 31ನೇ ವಾರ್ಡ್ನ ಕವಿತಾ ಮಾರುತಿ, ಮುಸ್ಲಿಂ ಸಮುದಾಯದ 15ನೇ ವಾರ್ಡ್ ರೇಷ್ಮಾ ಬಾನು, 19ನೇ ವಾರ್ಡ್ ನೂರ್ ಸಾಬ್ ಸೇರಿದಂತೆ ಇತರೆ ಕೆಲವು ಹೆಸರುಗಳು ರೇಸ್ ನಲ್ಲಿವೆ.
ಕಾಂಗ್ರೆಸ್ ಪಕ್ಷ 10 ಸದಸ್ಯರ ಬಲ ಹೊಂದಿದೆ. ಶಾಸಕ ಎಸ್.ರಾಮಪ್ಪ ಸದ್ಯ ವಿಧಾನ ಪರಿಷತ್ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಶೀಘ್ರವೇ ಸಭೆ ನಡೆಸುವ ಸೂಚನೆಗಳಿವೆ. ಕಾಂಗ್ರೆಸ್ ಪಕ್ಷದಿಂದ ಹಿಂದುಳಿದ ವರ್ಗದ 5ನೇ ವಾರ್ಡ್ನ ನಾಗರತ್ನಮ್ಮ, ಪರಿಶಿಷ್ಟ ಜಾತಿಯ 11ನೇ ವಾರ್ಡ್ನ ಸುಮಿತ್ರಾ ಮರಿದೇವ್, ಕುರುಬ ಸಮುದಾಯದ 16 ನೇ ವಾರ್ಡ್ನ ಪಕ್ಕೀರಮ್ಮ ಹಾಗೂ ಮುಸ್ಲಿಂ ಸಮುದಾಯದ 24ನೇ ವಾರ್ಡ್ ಶಾಹೀನಾ ಬಾನು ಹೆಸರುಗಳು ಮುಂಚೂಣಿಯಲ್ಲಿವೆ.
ಭಾರತೀಯ ಜನತಾ ಪಕ್ಷದಿಂದ ಐವರು ಸದಸ್ಯರು ಆಯ್ಕೆಯಾಗಿದ್ದಾರೆ. ಮಾಜಿ ಶಾಸಕ ಬಿ.ಪಿ. ಹರಿಶ್ ಸಹ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯದಲ್ಲಿದ್ದಾರೆ ಎನ್ನಲಾಗಿದ್ದು, ಸದಸ್ಯರೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದಾರೆ. ಶೀಘ್ರವೇ ಸಂಸದರನ್ನೊಳಗೊಂಡು ಸದಸ್ಯರ ಸಭೆ ನಡೆಸುವ ಸಾಧ್ಯತೆಗಳಿವೆ. ಪ್ರಸ್ತುತ ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದ 30ನೇ ವಾರ್ಡ್ ಅಶ್ವಿನಿ ಕೆ.ಜಿ. ಕೃಷ್ಣ ಹೆಸರು ಮುಂಚೂಣಿಯಲ್ಲಿದೆ.
ಬಹುಮತ ಇರದ ಕಾರಣ ಪಕ್ಷೇತರರ ಮತಗಳಿಗೆ ಭಾರೀ ಬೇಡಿಕೆ ಇದೆ. ಗಂಗಾಮತ ಸಮುದಾಯದ 28ನೇ ವಾರ್ಡ್ನ ಪಾರ್ವತಮ್ಮ ಐರಣಿ ಕೂಡ ಕೊನೆಯಲ್ಲಿ ಯಾಕೆ ನಮಗೂ ಅದೃಷ್ಟದ ಬಾಗಿಲು ತೆರೆಯಬಹುದು ಎಂದು ನೀರಿಕ್ಷೆ ಇಟ್ಟುಕೊಂಡು ಕಸರತ್ತು ಪ್ರದರ್ಶಿಸುವ ಮೂಲಕ ನಗರಸಭೆ ಅಧ್ಯಕ್ಷರಾದರೂ ಅಚ್ಚರಿ ಪಡುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಇಲ್ಲಿನ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ಯಲ್ಲಿ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ, ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಬಿಜೆಪಿ ಸಂಸದ ಜೆ.ಎಂ. ಸಿದ್ದೇಶ್ವರ್, ಮಾಜಿ ಶಾಸಕ ಬಿ.ಪಿ. ಹರೀಶ್ ತೆಗೆದುಕೊಳ್ಳುವ ತೀರ್ಮಾನ ನಿರ್ಣಾಯಕವಾಗಿದೆ.
ಚಿದಾನಂದ ಕಂಚಿಕೇರಿ
[email protected]