ಆಧ್ಯಾತ್ಮ ಜ್ಞಾನದಿಂದ ಸಂತೃಪ್ತಿ ಬದುಕು : ರಂಭಾಪುರಿ ಜಗದ್ಗುರುಗಳು

ಬಾಳೆಹೊನ್ನೂರು, ಅ. 22. – ಮನುಷ್ಯ ಜೀವನದಲ್ಲಿ ಭೌತಿಕ ಸಂಪತ್ತು ಗಳಿಸಿದನೇ ವಿನಃ ಒಳಗಿರುವ ಅಧ್ಯಾತ್ಮ ಸಂಪತ್ತನ್ನು ಅರಿಯಲಿಲ್ಲ. ಶಾಂತಿ ಸಂತೃಪ್ತಿಯ ಬದುಕಿಗೆ ಅಧ್ಯಾತ್ಮ ಜ್ಞಾನ ಅವಶ್ಯಕವೆಂದು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀ ರಂಭಾಪುರಿ ಪೀಠದಲ್ಲಿ ನಡೆಯುತ್ತಿರುವ 29ನೇ ವರ್ಷದ ಸಾಂಪ್ರದಾಯಿಕ ಸರಳ ಶರನ್ನವರಾತ್ರಿ ಆಚರಣೆಯ 6ನೇ ದಿನವಾದ ಇಂದಿನ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ಮನುಷ್ಯ ಜೀವನದಲ್ಲಿ ಬಂಗಾರ – ಬೆಳ್ಳಿ, ವಜ್ರ -ವೈಢೂರ್ಯ, ಹಣ, ಆಸ್ತಿ, ಅಂತಸ್ತು ನಿಜವಾದ ಆಸ್ತಿ ಎಂದು ತಿಳಿದಿದ್ದಾನೆ. ಆದರೆ, ಇವು ಯಾವುವೂ ಶಾಶ್ವತವಲ್ಲ. ಗಾಳಿ-ಬೆಳಕು, ನೆಲ – ಜಲ ಅನ್ನ ಇವು ನಿಜವಾದ ಆಸ್ತಿ ಎಂಬುದನ್ನು ಮರೆಯಬಾರದು. ಸತ್ಯ ಶುದ್ಧ ಧರ್ಮಾಚರಣೆಯಿಂದ ಬಾಳ ಬದುಕು ಉಜ್ವಲಗೊಳ್ಳುವುದು. ಮನುಷ್ಯ ಹೂಗಳನ್ನು ಹರಿಯುವುದನ್ನು ಕಲಿತನೇ ವಿನಃ ಹೂವಿನಂತೆ ಬಾಳುವುದನ್ನು ಕಲಿಯಲಿಲ್ಲ. ವಿದ್ಯೆ ಮತ್ತು ಸಂಪತ್ತನ್ನು ಗಳಿಸುವಾಗ ಬಹಳ ದಿನ ಬದುಕುತ್ತೇವೆ ಎಂಬ ಆಶಾದಾಯಕ ಭಾವನೆ ಇರಬೇಕಂತೆ. ಅದೇ ಮರಣ ವಿಚಾರದಲ್ಲಿ ಯಾವ ಘಳಿಗೆಯಲ್ಲಿ ಮೃತ್ಯುದೇವತೆ ಕರೆದೊಯ್ಯುವಳೆಂಬ ಭೀತಿಯಿಂದ ಸತ್ಕಾರ್ಯಗಳನ್ನು ಸಮಾಜದಲ್ಲಿ ಮಾಡಬೇಕೆಂಬುದನ್ನು ಮರೆಯಬಾರದು. ಹರಿಯುವ ನದಿ ನೇರವಾಗಿ ಹರಿದು ಸಾಗರ ಸೇರುವುದಿಲ್ಲ. ತಗ್ಗು ದಿನ್ನೆ ಹಳ್ಳ ಕೊಳ್ಳಗಳನ್ನು ದಾಟಿ ಸಾಗರ ಸೇರುತ್ತದೆ. ಅದೇ ರೀತಿ ಮನುಷ್ಯನ ಜೀವನದಲ್ಲಿ ಏರಿಳಿತಗಳು ಬರುವುದು ಸ್ವಾಭಾವಿಕ. ರೋಗ, ಮುಪ್ಪು, ಮರಣ ಮತ್ತು ಬಡತನ ಯಾರನ್ನೂ ಬಿಟ್ಟಿಲ್ಲ. ಅವುಗಳಿಗೆ ಅಂಜದೇ ಅಳುಕದೇ ಸಮಚಿತ್ತದಿಂದ ಬಾಳಿ ಜೀವನ ದರ್ಶನ ಸಿದ್ಧಾಂತದಿಂದ ಬಾಳಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಸ್ಪಷ್ಪಪಡಿಸಿದ್ದಾರೆ ಎಂದು ಹೇಳಿದರು. 

ನವರಾತ್ರಿಯ 6ನೇ ದಿನದಂದು ಜಗನ್ಮಾತೆ ದೇವಿಯನ್ನು ಕಾತ್ಯಾಯಿನಿ ರೂಪದಲ್ಲಿ ಪೂಜಿಸುತ್ತಾರೆ. ಬಾಳೆಹಣ್ಣು ನೈವೇದ್ಯ ಈ ದೇವಿಗೆ ಅತ್ಯಂತ ಪ್ರಿಯಕರವಾದುದು. ಈ ದೇವಿ ಆರಾಧನೆಯಿಂದ ಆಕರ್ಷಕ ವ್ಯಕ್ತಿತ್ವ ಪ್ರಾಪ್ತವಾಗುವುದೆಂದು ಶಾಸ್ತ್ರ ಸ್ಪಷ್ಟಪಡಿಸುತ್ತದೆ.  ಗೌರಿಗದ್ದೆ ಅವಧೂತ ಆಶ್ರಮದ ಶ್ರೀ ವಿನಯ ಗುರೂಜಿ ನಡೆಸುತ್ತಿರುವ ಗೋ ಸಂರಕ್ಷಣಾ ಅಭಿಯಾನಕ್ಕೆ ತಮ್ಮ ಬೆಂಬಲ ಸದಾ ಇದೆ. ಪ್ರತಿಯೊಬ್ಬರೂ ಭೂ ಮಾತೆ-ಗೋಮಾತೆಯನ್ನು ಗೌರವಿಸಬೇಕು ಎಂದು ಕರೆ ನೀಡಿದರು. 

ಗೌರಿಗದ್ದೆ ಅವಧೂತ ಆಶ್ರಮದ ಶ್ರೀ ವಿನಯ ಗುರೂಜಿ ಮಾತನಾಡಿ, ಮನುಷ್ಯನ ಬದುಕು ಸಂತಸ ಸಮೃದ್ಧದಾಯಕವಾಗಬೇಕು. ಮನುಷ್ಯನ ಜೀವನ ಸಂತೃಪ್ತವಾದರೆ ಬದುಕು ಸಮೃದ್ಧವಾಗುತ್ತದೆ. ಸಾವಿರ ತಂದೆ-ತಾಯಿಗಳ ಆಶೀರ್ವಾದವನ್ನು ಗುರುವಿನಿಂದ ಪಡೆಯಲು ಸಾಧ್ಯ. ಗುರುಭಕ್ತಿಯನ್ನು ವೀರಶೈವರಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದ ಜನರಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.

ಯುವ ಧುರೀಣ ಬೆಳ್ಳೂರು ರಾಘವೇಂದ್ರ ಶೆಟ್ಟರು ಮಾತನಾಡಿದರು. ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನೆ ಶಿವಕುಮಾರ್,  ಕೋಣಂದೂರಿನ ಕೆ.ಆರ್. ಪ್ರಕಾಶ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿ ನುಡಿ ನಮನ ಸಲ್ಲಿಸಿದರು. ಸಮಾರಂಭದಲ್ಲಿ ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯರು ನಾಂದಿ ನುಡಿ ಸಲ್ಲಿಸಿದರು. ಎಂ. ಚಂದರಗಿ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯರು, ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯರು, ಮಳಲಿ ಸಂಸ್ಥಾನ ಮಠದ ಡಾ. ಶ್ರೀ ನಾಗಭೂಷಣ ಶಿವಾಚಾರ್ಯರು,  ಸಂಗೊಳ್ಳಿ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರು, ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಾಚಾರ್ಯರು ಪಾಲ್ಗೊಂಡಿದ್ದರು.

ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ್‍   ನಿರೂಪಿಸಿದರು.  

error: Content is protected !!