ಸಂತ್ರಸ್ತರಿಗೆ ಸ್ಪಂದಿಸುವುದೇ ಮೊದಲ ಕಾರ್ಯ

ಜಿ.ಪಂ. ನೂತನ ಅಧ್ಯಕ್ಷ ಏಕನಾಥ ಭಾನುವಳ್ಳಿ

ರಾಣೇಬೆನ್ನೂರು, ಅ.22- ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಕಳೆದುಕೊಂಡವರು, ಕೈಗೆ ಬಂದ ತುತ್ತು ಕಳೆದುಕೊಂಡ ರೈತರಿಗೆ ನೆರವು ನೀಡುವುದೇ ನನ್ನ ಮೊದಲ ಕೆಲಸ ಎಂದು ಹಾವೇರಿ ಜಿ.ಪಂ. ಅಧ್ಯಕ್ಷ ಏಕನಾಥ ಭಾನವಳ್ಳಿ ಹೇಳಿದರು. 

ಅವರು ಇಂದು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ರಾಣೇಬೆನ್ನೂರಿನ ತಮ್ಮ ನಿವಾಸದಲ್ಲಿ ಪ್ರಥಮ ಪತ್ರಿಕಾಗೋಷ್ಠಿ ನಡೆಸಿದರು.

ಕಳೆದ 8 ತಿಂಗಳಿಂದ ಕೋವಿಡ್ ದಾಳಿಯಿಂದ ನಲುಗಿದ ಎಲ್ಲ ಜನರ ಬದುಕು ಅತಂತ್ರವಾಗಿದೆ. ಅದನ್ನು ಸರಿಪಡಿಸಿಕೊಳ್ಳಲು ಚಡಪಡಿಸುತ್ತಿರುವಾಗ ಮಳೆ ಮತ್ತಷ್ಟು ಜನರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ಅವರ ಸಂಕಷ್ಟಕ್ಕೆ ನೆರವಿನ ಅವಶ್ಯವಿದೆ ಎಂದು ಏಕನಾಥ ಹೇಳಿದರು.

ಈಗಿರುವ ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ನಮ್ಮ ಎಲ್ಲ ಸದಸ್ಯರ ಹಾಗೂ ಜಿಲ್ಲೆಯ ಸಚಿವರು, ಶಾಸಕರೊಂದಿಗೆ ಚರ್ಚಿಸಿ ಅವರೆಲ್ಲರ ಸಹಾಯ, ಸಹಕಾರ ಪಡೆದು ಜನರ ಕಣ್ಣೊರೆಸುವ ಕೆಲಸ ಮಾಡುತ್ತೇನೆ ಎಂದು ಭಾನುವಳ್ಳಿ ಹೇಳಿದರು.

ಜನರ ನೋವಿಗೆ ಸ್ಪಂದಿಸುವ ಆಸೆ ಬಹಳಷ್ಟಿದೆ. ಆದರೆ, ನನಗೆ ಸಿಕ್ಕ ಸಮಯ  ಕಡಿಮೆ ಇದೆ. ಸಿಕ್ಕ ಅವಧಿಯಲ್ಲಿಯೇ ಪಕ್ಷಭೇದ ಮರೆತು ಎಲ್ಲರ ವಿಶ್ವಾಸ ಸಂಪಾದಿಸಿ ಕೆಲಸ ಮಾಡುತ್ತೇನೆ ಎಂದು ಹೇಳಿದ ಏಕನಾಥ ಭಾನವಳ್ಳಿ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್.ಎಂ. ಕುಬೇರಪ್ಪ ಅವರಿಗೆ ಮತ ನೀಡುವಂತೆ ಪದವೀಧರರಿಗೆ ಮನವಿ ಮಾಡಿದರು.

ಜಿ.ಪಂ. ಸದಸ್ಯ ಶಿವಾನಂದ ಕನ್ನಪ್ಪಳವರ, ಗಿರಿಜಮ್ಮ ಬ್ಯಾಲದಹಳ್ಳಿ, ಹನುಮಂತಪ್ಪ ಬ್ಯಾಲದಹಳ್ಳಿ, ಮಾರುತಿ ರಾಠೋಡ ಮತ್ತಿತರರಿದ್ದರು.

error: Content is protected !!