ನ್ಯಾಮತಿ, ಅ.21- ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ರೈತ ಮಹಿಳಾ ದಿನಾಚರಣೆ ಆಚರಿಸಲಾಯಿತು. ಗ್ರಾಮೀಣ ಭಾಗದಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ಯಶಸ್ಸು ಗಳಿಸಿರುವ 8 ಗ್ರಾಮೀಣ ಮಹಿಳೆಯರು ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡರು.
ನ್ಯಾಮತಿ ತಾಲ್ಲೂಕು ರಾಮೇಶ್ವರ ಗ್ರಾಮದ ಶ್ರೀಮತಿ ಯಶೋಧಮ್ಮನವರು ಪ್ರತಿ ನಿತ್ಯ ದಿನಸಿ ಅಂಗಡಿ ನೋಡಿಕೊಳ್ಳುವುದರ ಜೊತೆಗೆ ಶೇಂಗಾ, ಮೆಕ್ಕೆಜೋಳ, ತೊಗರಿ, ತರಕಾರಿಗಳು, ನಿಂಬೆ, ಬಾಳೆ ಮುಂತಾದವುಗಳನ್ನು ಬೆಳೆಯುತ್ತಿದ್ದಾರೆ ಹಾಗೂ ರೈತರು ದಿನನಿತ್ಯದ ಬಳಕೆಯ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವುದನ್ನು ಕಡಿಮೆ ಮಾಡಬೇಕೆಂದರು.
ನ್ಯಾಮತಿ ತಾಲ್ಲೂಕು ಆರುಂಡಿ ಗ್ರಾಮದ ಶ್ರೀಮತಿ ಇಂದಿರಮ್ಮ ಅವರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿ ಸಾವಯವ ಒಳಸುರಿಗಳನ್ನು ತಾವೇ ಉತ್ಪಾದಿಸಿಕೊಳ್ಳುತ್ತಿದ್ದಾರೆ. ದಾವಣಗೆರೆ ತಾಲ್ಲೂಕು ಕಂದಗಲ್ಲು ಗ್ರಾಮದ ಶ್ರೀಮತಿ ರಾಜೇಶ್ವರಿಯವರು ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆಯ ಜೊತೆಗೆ ಈಚೆಗೆ ನಿರ್ಮಿಸಿರುವ ‘ಪಂಚವಟಿ’ ವನದ ಅನುಭವ ಹಂಚಿಕೊಂಡರು.
ಚನ್ನಗಿರಿ ತಾಲ್ಲೂಕು ಕತ್ತಲಗೆರೆ ಗ್ರಾಮದ ಶ್ರೀಮತಿ ವಸಂತಮ್ಮನವರು, ತಮ್ಮ ಸುದೀರ್ಘ ಕೃಷಿ ಬದುಕಿನಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳು ಹಾಗೂ ಜೈವಿಕ ವೈವಿಧ್ಯತೆಯ ಬಗ್ಗೆ ಮಾತನಾಡುತ್ತಾ ರೈತರು ಬಹುದಿನದ ಬೇಡಿಕೆಯಾದ ಸೂಕ್ತ ಬೆಲೆಗಳು ಸಿಗುತ್ತಿಲ್ಲದಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಸರ್ಕಾರ ಕೃಷಿಯಲ್ಲಿ ತೊಡಗಿರುವ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಕರೆಕೊಟ್ಟರು.
ದಾವಣಗೆರೆ ತಾಲ್ಲೂಕಿನ ಹಾಲುವರ್ತಿ ಗ್ರಾಮದ ಶ್ರೀಮತಿ ಇಂದಿರಮ್ಮನವರು, ಸಮಗ್ರ ಕೃಷಿಯಲ್ಲಿನ ಮತ್ತು ಮಹಿಳಾ ಸಂಘಗಳ ಮೂಲಕ ಸಾಧನೆಗಳನ್ನು ಹಂಚಿಕೊಂಡರು.
ಹರಿಹರ ತಾಲ್ಲೂಕಿನ ಜಿಗಳಿ ಗ್ರಾಮದ ಶ್ರೀಮತಿ ಮಮತರವರು, ಸಾವಯವ ಸಮಗ್ರ ಕೃಷಿ ಮತ್ತು ಅರಣ್ಯ ಕೃಷಿಯ ಬಗ್ಗೆ ತಮ್ಮ ಅನುಭವ ವ್ಯಕ್ತಪಡಿಸಿದರು. ನುಗ್ಗೆಯ ಭಾಗ್ಯ (ಕೆಡಿಎಂ-1) ತಳಿಯ ಬೀಜ ಮಾಡಿ, ರೈತರಿಗೆ ವಿತರಿಸಿದ್ದನ್ನು ನೆನಪಿಸಿಕೊಂಡರು.
ಶ್ರೀಮತಿ ಪ್ರೇಮ ಜಗಳೂರು ತಾಲ್ಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ಸಾವಯವ ಕೃಷಿಯಲ್ಲಿ ತೊಡಗಿ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುತ್ತಿದ್ದು, ಅದರಲ್ಲೂ ಸಾವಯವ ಚಕ್ಕಲಿ, ಕೋಡುಬಳೆ, ಚಟ್ನಿಗಳು, ಉಪ್ಪಿನಕಾಯಿ ಮುಂತಾದವುಗಳನ್ನು ಉತ್ಪಾದಿಸಿ, ಅವುಗಳ ಮಾರಾಟದ ಅನುಭವ ಹಂಚಿಕೊಂಡರು. ಹೊನ್ನಾಳಿ ತಾಲ್ಲೂಕು ಯರೇಹಳ್ಳಿ ಗ್ರಾಮದ ಶ್ರೀಮತಿ ಪರಿಮಳಾರವರು, ಹಲವಾರು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿದ್ದು, ಭತ್ತ ಮತ್ತು ಅಡಿಕೆ ಬೆಳೆಯುತ್ತಿದ್ದಾರೆ. ಸಾವಯವ ಅಕ್ಕಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಬೆಂಡೆ, ಬದನೆ, ಬೀನ್ಸ್, ಟೊಮ್ಯಾಟೋ ಮುಂತಾದ ದೇಶೀಯ ತರಕಾರಿಗಳನ್ನು ಬೆಳೆದು ಬೀಜ ಸಂರಕ್ಷಿಸುತ್ತಿರುವ ಶ್ಲ್ಯಾಘನೀಯ ಕಾರ್ಯದ ಬಗ್ಗೆ ಅನುಭವ ಹಂಚಿಕೊಂಡರು.
ಕೃಷಿ ಬದುಕಿನ ಯಶಸ್ಸಿನಲ್ಲಿ ಎಲೆಮರೆಯ ಕಾಯಿಯಂತೆ ಕೆಲಸಗಳಲ್ಲಿ ನಿರಾಂತರವಾಗಿರುವ ಗ್ರಾಮೀಣ ಮಹಿಳೆಯರನ್ನು ಹೊರ ಜಗತ್ತಿಗೆ ಪರಿಚಯಿಸುವ ಕಾರ್ಯಕ್ರಮದಲ್ಲಿ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಟಿ.ಎನ್.ದೇವರಾಜ್ ಮತ್ತು ವಿಸ್ತರಣಾ ತಜ್ಞ ಜೆ.ರಘುರಾಜ ಅವರುಗಳು ಭಾಗವಹಿಸಿದ್ದರು.