ಎಡಿಜಿಪಿ ಅಮರ್ ಕುಮಾರ್ ಪಾಂಡೆ
ದಾವಣಗೆರೆ, ಜು. 17 – ಕೊರೊನಾ ಸಂದರ್ಭದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಅಪರಾಧದ ಪ್ರಮಾಣ ಸಾಮಾನ್ಯ ಮಟ್ಟದೊಳಗೇ ಇದೆ ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಮರ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಕೆಲಸಗಳು ಸಿಗದೇ ಅಪರಾಧಗಳು ಹೆಚ್ಚಾ ಗುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಅಪರಾಧಗಳ ಸಂಖ್ಯೆ ಯನ್ನು ತುಲನಾತ್ಮಕವಾಗಿ ಪರಿಶೀಲನೆ ಮಾಡಲಾಗಿದೆ. ಎಚ್ಚರಿಕೆ ಗಂಟೆ ಬಾರಿಸ ಬೇಕಾದ ಸ್ಥಿತಿಯೇನೂ ಇಲ್ಲ. ಸಾಮಾನ್ಯ ಸ್ವರೂಪದಲ್ಲಿಯೇ ಅಪರಾಧಗಳಿವೆ ಎಂದು ಹೇಳಿದ್ದಾರೆ.
ಬಿಕ್ಕಟ್ಟಿನ ಪರಿಸ್ಥಿತಿ : ಕೊರೊನಾ ಕಾರಣದಿಂದ ಬಿಕ್ಕಟ್ಟಿನ ಪರಿಸ್ಥಿತಿಗೆ ಹೋಗುತ್ತಿದ್ದೇವೆ. ಈ ಸಂದರ್ಭದಲ್ಲಿ ಪೊಲೀಸರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಈ ಒತ್ತಡದ ಸಂದರ್ಭದಲ್ಲಿಯೂ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದವರು ಹೇಳಿದ್ದಾರೆ. ಪೊಲೀಸರ ಮನೋಬಲ ಹೆಚ್ಚಾಗಿದೆ. ಜನರಿಂದ ಪೊಲೀಸರಿಗೆ ಸದಾಶಯದ ಬೆಂಬಲ ಸಿಕ್ಕಿದೆ. ಇದು ಪೊಲೀಸರಲ್ಲಿ ಚೈತನ್ಯ ತಂದಿದೆ ಎಂದೂ ಎಡಿಜಿಪಿ ತಿಳಿಸಿದ್ದಾರೆ.
‘ತುಂಗ’ಗೆ ಎಡಿಜಿಪಿ ಪ್ರಶಂಸೆ : ಪೊಲೀಸ್ ಅಪರಾಧ ವಿಭಾಗದ ಶ್ವಾನದಳಕ್ಕೆ ಸೇರಿದ ತುಂಗ ಶ್ವಾನ, 11 ಕಿ.ಮೀ. ಸಂಚರಿಸಿ ಕಾಶಿಪುರದಲ್ಲಿ ಅಡಗಿದ್ದ ಕೊಲೆ ಆರೋಪಿಯನ್ನು ಪತ್ತೆ ಮಾಡಿದ್ದು ಎ.ಡಿ.ಜಿ.ಪಿ. (ಕಾನೂನು ಮತ್ತು ಸುವ್ಯವಸ್ಥೆ) ಅಮರ್ ಕುಮಾರ್ ಪಾಂಡೆ ಪ್ರಶಂಸೆಗೆ ಪಾತ್ರವಾಗಿದೆ.
ಶ್ವಾನಕ್ಕೆ ಹಾರ ಹಾಕಿ ಸನ್ಮಾನಿಸಿದ ಪಾಂಡೆ, ಶ್ವಾನದಳದ ಸಿಬ್ಬಂದಿಗೆ ಅಭಿನಂದಿಸಿದರು. ಶ್ವಾನದಳದ ಈ ಸಾಧನೆಯಿಂದ ತಮಗೆ ಸಂತೋಷವಾಗಿದೆ ಎಂದವರು ಹೇಳಿದ್ದಾರೆ.
ಪೊಲೀಸರೂ ಸೈನಿಕರಂತೆ : ಕೊರೊನಾ ಕಾರಣದಿಂದ ಪೊಲೀಸರಲ್ಲಿ ಸೋಂಕು ಹಾಗೂ ಸಾವುಗಳೂ ಉಂಟಾಗಿವೆ. ಕೊರೊನಾದ ಈ ಯುದ್ಧದ ಸಂದರ್ಭದಲ್ಲಿ ಸಮಾಜದಲ್ಲಿ ಆಗುತ್ತಿರುವಂತೆಯೇ ನಮಗೂ ತೊಂದರೆಗಳಾಗಿವೆ ಎಂದವರು ಹೇಳಿದರು.
ಪೊಲೀಸರು ಹಾಗೂ ಸೈನಿಕರ ನಡುವೆ ವ್ಯತ್ಯಾಸ ಇಲ್ಲ. ಸವಾಲುಗಳು ಬಂದಾಗ ಎದುರಿಸಲು ಸನ್ನದ್ಧರಾಗಿರುತ್ತೇವೆ. ಸಿಬ್ಬಂದಿ ಕೊರತೆ ಹಾಗೂ ಕೆಲಸದ ಒತ್ತಡ ನಡುವೆ ಸಮತೋಲನ ಕಾಯ್ದುಕೊಂಡು ಮುನ್ನಡೆಯುತ್ತೇವೆ ಎಂದು ಎಡಿಜಿಪಿ ಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.
ಕುಟುಂಬಗಳಲ್ಲಿ ಅರಿವು : ಪೊಲೀಸ್ ಸಿಬ್ಬಂದಿ ಕೊರೊನಾ ವಾರಿಯರ್ಗಳಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರ ಕುಟುಂಬದವರಲ್ಲೂ ಕಳವಳಗಳಿವೆ. ಈ ಬಗ್ಗೆ ಮುನ್ನಚ್ಚರಿಕೆಯ ಜೊತೆಗೆ ಆಪ್ತ ಸಮಾಲೋಚನೆಯನ್ನೂ ಕೈಗೊಂಡಿದ್ದೇವೆ. ಅವರಲ್ಲಿ ಅರಿವು ಮೂಡಿಸಿದ್ದೇವೆ. ಇದಕ್ಕಾಗಿ ಸೂಕ್ತ ಅಧಿಕಾರಿಗಳನ್ನೂ ನೇಮಿಸಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಎಸ್ಪಿ ಹನುಮಂತರಾಯ, ಎಎಸ್ಪಿ ರಾಜೀವ್ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.