ರಂಭಾಪುರಿ ಪೀಠದಲ್ಲಿ ಸಾಂಪ್ರದಾಯಿಕ ಶರನ್ನವರಾತ್ರಿ ದಸರಾ ದರ್ಬಾರ್

ಪ್ರಾಚೀನ ಭವ್ಯ ಪರಂಪರೆಯ ಇತಿಹಾಸವನ್ನು ಹೊಂದಿರುವ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠವು, ಪಂಚಪೀಠಗಳಲ್ಲಿ ಒಂದಾದ ವೀರಶೈವ ಧರ್ಮ ಸಂಸ್ಥಾಪಕರಾದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರಿಂದ ಸಂಸ್ಥಾಪಿಸಲ್ಪಟ್ಟ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾ ಸಂ ಸ್ಥಾನ ಪೀಠವು ಜ್ಞಾನ ಗಂಗೋತ್ರಿಯಾಗಿ ಆಕರ್ಷಕ ಪ್ರವಾಸಿ ತಾಣವಾಗಿ ಭಕ್ತರನ್ನು ಕೈಬೀಸಿ ಕರೆಯುತ್ತಿದೆ.

ಪ್ರತೀ ವರ್ಷ ಭಕ್ತರ ಅಭಿಲಾಷೆಯಂತೆ ನಾಡಿನ ಮುಖ್ಯ ಕೇಂದ್ರಗಳಲ್ಲಿ ಆಚರಿಸಿಕೊಂಡು ಬರುತ್ತಿದ್ದ ಶ್ರೀ ಪೀಠದ ಪ್ರಮುಖ ಸಾಂಸ್ಕೃತಿಕ ನಾಡ ಹಬ್ಬವಾದ ಶ್ರೀ ರಂಭಾಪುರಿ ಜಗದ್ಗುರುಗಳವರ 29ನೇ ಶರನ್ನವರಾತ್ರಿ ದಸರಾ ದರ್ಬಾರ್ ಸಮ್ಮೇಳನವು ಹಾಸನ ಜಿಲ್ಲೆ ಬೇಲೂರು ಕೇಂದ್ರದಲ್ಲಿ ನಡೆಸಲು ಭಕ್ತ ಸಂಕುಲ ಸನ್ನದ್ಧರಾಗಿದ್ದರು. ಆದರೆ, ಜಗತ್ತಿನಾದ್ಯಂತ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಹಾಗೂ ಸರ್ಕಾರದ ನಿಬಂಧನೆ ಇರುವ ಕಾರಣ ಶ್ರೀ ರಂಭಾಪುರಿ ಮಹಾಪೀಠದ ಪರಿಸರದಲ್ಲೇ ಸಾಂಪ್ರದಾಯಿಕವಾಗಿ ಅತ್ಯಂತ ಸರಳ ರೀತಿಯಲ್ಲಿ ಶರನ್ನವರಾತ್ರಿ ದಸರಾ ಆಚರಿಸಲಾಗುತ್ತಿದೆ.

ಶ್ರೀ ರಂಭಾಪುರಿ ಮಹಾಪೀಠದ ಶ್ರೀಮಂತ ಗುರು ಪರಂಪರೆಯ ಇತಿಹಾಸದಲ್ಲಿ 120 ಜಗದ್ಗು ರುಗಳು ಆಗಿಹೋಗಿದ್ದು, ಅದರಲ್ಲಿ 118 ನೇಯ ಜಗದ್ಗುರು `ಅಭಿನವ ರೇಣುಕರೆಂದೇ’ ಕರೆಯಲ್ಪ ಡುವ ಶ್ರೀ ಶಿವಾನಂದ ರಾಜೇಂದ್ರ ಜಗದ್ಗುರುಗಳವರ ಕಾಲದಲ್ಲಿ ಶ್ರೀ ಪೀಠವು, `ಸ್ವರ್ಣ ಯುಗ’ ಕಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದಿನ ಮೈಸೂರು ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣ ಒಡೆಯರ್‌ ರವರು ಶ್ರೀ ಜಗದ್ಗುರುಗಳವರನ್ನು ಅತ್ಯಂತ ಭಕ್ತಿಯಿಂದ ಅರಮನೆಗೆ ಬರಮಾಡಿಕೊಂಡು ಸಕಲ ರಾಜ ಮರ್ಯಾದೆಯ ಮೂಲಕ ಗೌರವಿಸಿ, ಪೂಜಿಸಿ, ಆಶೀರ್ವಾದ ಪಡೆದದ್ದು ಅಭಿನಂದನೀಯ.

1925 ರಲ್ಲಿ ಅಂದಿನ ಶ್ರೀ ಪೀಠದ ಒಡೆಯರಾದ ಶ್ರೀ ಶಿವಾನಂದ ಜಗದ್ಗುರುಗಳವರ ಕಾಲದಲ್ಲೇ ಪ್ರಾರಂಭವಾದ ಶರನ್ನವರಾತ್ರಿ ದಸರಾ ರಾಜ ವೈಭವ ಪಡೆದಿದ್ದು ಇತಿಹಾಸ. ನಂತರ 119 ನೇಯ  ಶ್ರೀ ಪೀಠದ ಒಡೆಯರಾದ ಲಿಂ. ಶ್ರೀ ವೀರಗಂಗಾಧರ ಜಗದ್ಗುರುಗಳವರು `ಮಾನವ ಧರ್ಮಕ್ಕೆ ಜಯವಾಗಲಿ |  ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’  ಎಂಬ ವಿಶ್ವ ಸಂದೇಶ ಸಾರುವ ಮೂಲಕ ಭೂಲೋಕದಲ್ಲಿ ಶಿವನಾಗಿ ಸಂಚರಿಸಿ, ಇಷ್ಟಲಿಂಗ ಮಹಾಪೂಜಾ ವೈಭವದ ಮೂಲಕ ಶಿವಪೂಜಾ ದುರಂಧರರಾಗಿ ದಸರಾ ದರ್ಬಾರನ್ನು ಭಕ್ತರ ಮನೆ – ಮನಗಳಿಗೆ ಕೊಂಡೊಯ್ಯುವ ಮೂಲಕ ಜಾಗೃತಿಗೊಳಿಸಿದ್ದು ಅವಿಸ್ಮರಣೀಯ.  ಅಲ್ಲದೇ 120 ನೇಯ ಶ್ರೀ ಪೀಠದ ಒಡೆಯರಾದ `ಚತುರ್ಭಾಷಾ ವಿಶಾರದ’  ಲಿಂ. ಶ್ರೀ ವೀರ ರುದ್ರಮುನಿ ಜಗದ್ಗುರುಗಳು ದಸರಾ ದರ್ಬಾರು ಸಮಾರಂಭಕ್ಕೆ ಹೊಸ ಆಯಾಮ ಕಲ್ಪಿಸಿದರು. 

ಪ್ರಸ್ತುತ ಜಗದ್ಗುರುಗಳವರ ಸಾಧನೆ : ಶ್ರೀ ರಂಭಾಪುರಿ ಪೀಠದ ಲಿಂ. ಶ್ರೀ ಶಿವಾನಂದ ಜಗದ್ಗುರುಗಳವರ ಜ್ಞಾನ ಶಕ್ತಿ, ಲಿಂ. ಶ್ರೀ ವೀರಗಂಗಾಧರ ಜಗದ್ಗುರುಗಳವರ ತಪಃಶಕ್ತಿ, ಲಿಂ. ಶ್ರೀ ವೀರ ರುದ್ರಮುನಿ ಜಗದ್ಗುರುಗಳವರ ಕ್ರಿಯಾ ಶಕ್ತಿಯಿಂದ ರೂಪುಗೊಂಡ ವರ್ತಮಾನದ 121 ನೆಯ ವೀರ ಪೀಠದ ಒಡೆಯರಾದ ನವ ಮನ್ವಂತರದ ಅಭಿವೃದ್ಧಿಯ ಹರಿಕಾರರು, ಸಾಧನೆಯ ಸಿದ್ಧಿ ಪುರುಷರಾದ ಶ್ರೀಮದ್ರಂಭಾಪುರಿ ವೀರ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು, ಮಾಘ ಶುದ್ಧ ತೃತೀಯ ದಿನಾಂಕ 06.02.1992 ರಂದು ಸಮಾನ ಪೀಠಾಧೀಶ್ವರರಾದ ಶ್ರೀ ಉಜ್ಜಯಿನಿ,  ಶ್ರೀ ಕೇದಾರ, ಶ್ರೀಶೈಲ, ಶ್ರೀಕಾಶಿ ಜಗದ್ಗುರುಗಳವರ ದಿವ್ಯ ಸಾನ್ನಿಧ್ಯದಲ್ಲಿ, ಹರ – ಗುರು – ಚರಮೂರ್ತಿಗಳ, ಗಣ್ಯಮಾನ್ಯರ ಹಾಗೂ ಅಸಂಖ್ಯಾತ ಭಕ್ತರ ಉಪಸ್ಥಿತಿಯಲ್ಲಿ,  ಕೊಲ್ಲಿಪಾಕಿಯ ಶ್ರೀ ಜಗದ್ಗುರು ರೇಣುಕಾಚಾರ್ಯರು ಪ್ರಾದುರ್ಭವಿಸಿದ ಮೂಲ `ಶ್ರೀ ಸೋಮೇಶ್ವರ’ ನಾಮಾಂಕಿತದೊಡನೆ ಶ್ರೀ ವೀರಸೋಮೇಶ್ವರ ಜಗದ್ಗುರುಗಳವರು ಪೀಠಾರೋಹಣ ಹೊಂದಿ ತಮ್ಮ ಅದ್ಭುತ – ಅನುಪಮ ಕರ್ತೃತ್ವ ಶಕ್ತಿಯ ಮೂಲಕ ಶ್ರೀ ಪೀಠವನ್ನು ವೇದ – ಬೋಧ – ಶೋಧಗಳ ತ್ರಿವೇಣಿ ಸಂಗಮವನ್ನಾಗಿಸಿ, ಕೈಲಾಸವನ್ನೇ ಧರೆಗಿಳಿಸಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರು ಪೀಠಾರೋಹಣ ಹೊಂದಿದ ನಂತರ 1992 ರಲ್ಲಿ ವಿಜಯಪುರ ಜಿಲ್ಲೆ ನಿಡಗುಂದಿಯಲ್ಲಿ ಪ್ರಾರಂಭಿಸಿದ ಪ್ರಥಮ ದಸರಾ ದರ್ಬಾರ್‌ನಿಂದ 2019 ರ ದಾವಣಗೆರೆ ದಸರಾ ದರ್ಬಾರದವರೆಗೆ ಜರುಗಿದ ಐತಿಹಾಸಿಕ ಕಾರ್ಯಕ್ರಮಗಳು ಯಶಸ್ವಿಗೊಂಡು ಜನಮನ್ನಣೆ ಗಳಿಸಿ, ಶ್ರೀಪೀಠದ ಚಾರಿತ್ರ್ಯಿಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ದಾಖಲಿಸಲ್ಪಟ್ಟಿವೆ.

ಇಷ್ಟಲಿಂಗ ಮಹಾಪೂಜೆ : ಶರನ್ನವರಾತ್ರಿ ದಸರಾ ನಿಮಿತ್ತ ಪ್ರತಿದಿನ ಬೆಳಿಗ್ಗೆ ಶ್ರೀ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ನಡೆಯುತ್ತಿದೆ. ಶ್ರೀ ಜಗದ್ಗುರು ರೇಣುಕಾ ಚಾರ್ಯರಿಗೆ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ ಭದ್ರಕಾಳಿ ಅಮ್ಮನವರಿಗೆ, ಶಕ್ತಿಮಾತೆ ಶ್ರೀ ಚೌಡೇಶ್ವರಿಗೆ, ಶ್ರೀ ಸೋಮೇಶ್ವರ ಸ್ವಾಮಿಗೆ, ಪೂರ್ವಾಚಾರ್ಯರ ಜೀವನ್ಮುಕ್ತಿ ಸ್ಥಲದ ಗದ್ದುಗೆಗಳಿಗೆ ವಿಶೇಷ ಪೂಜೆ ಜರುಗಲಿವೆ.

ವಿಜಯ ದಶಮಿಯ ಪರ್ವಕಾಲ – ಶಮೀಪೂಜೆ – ಸಿಂಹಾಸನಾರೋಹಣ : ದಿನಾಂಕ 26-10-2020 ರ ಸೋಮವಾರ ಸಂಜೆ 5 ಘಂಟೆಗೆ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವವು, ಶ್ರೀ ಪೀಠದ ಪರಂಪರೆಯಂತೆ ಶ್ರೀ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ದೇವಸ್ಧಾನದಿಂದ ಪ್ರಾರಂಭಗೊಂಡು ಶ್ರೀ ಸೋಮೇಶ್ವರ ದೇವಸ್ಥಾನದ ಮುಂಭಾಗದ ಪಾದಘಟ್ಟೆ ಮಂಟಪದಲ್ಲಿ ಸಮಾರೋಪಗೊಂಡು ಶಮೀಪೂಜೆ ಸಲ್ಲಿಸಿ,   ಜಗದ್ಗುರುಗಳು ವೀರಸಿಂಹಾಸನಾರೋಹಣಗೈದು ನಾಡಿಗೆ ದಸರಾ ಸಂದೇಶ ದಯಪಾಲಿಸುವರು.


ಶ್ರೀ ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ
ಟಿಎಪಿಸಿಎಂಎಸ್, ಮಾಜಿ ಅಧ್ಯಕ್ಷರು,
ಚಿರಸ್ತಹಳ್ಳಿ, ಹರಪನಹಳ್ಳಿ.

error: Content is protected !!