ಜೆಜೆಎಂ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಸ್ಪಷ್ಟನೆ
ದಾವಣಗೆರೆ, ಜು. 16- ತಮಗೆ ಶಿಷ್ಯ ವೇತನ ನೀಡುವ ಬಗ್ಗೆ ಸರ್ಕಾರವು ಲಿಖಿತ ಆದೇಶವನ್ನು ಸೋಮವಾರದ ಒಳಗೆ ನೀಡಬೇಕು. ಇಲ್ಲದಿದ್ದರೆ ಮತ್ತೆ ಅನಿವಾರ್ಯವಾಗಿ ರಸ್ತೆಗಿಳಿದು ಮುಷ್ಕರ ನಡೆಸುತ್ತೇವೆ ಎಂದು ನಗರದ ಜೆ.ಜೆ.ಎಂ. ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ.
ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ.ಹರೀಶ್, ಕಳೆದ ಹಲವಾರು ದಿನಗಳಿಂದ ಶಿಷ್ಯವೇತನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಿನ್ನೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದೆವು.
ಈ ವೇಳೆ ಮಾರ್ಚ್ 2019ರಿಂದ ಜೂನ್ 2020ರವರೆಗೆ ಬಾಕಿ ಶಿಷ್ಯವೇತನವನ್ನು ಭರಿಸುತ್ತದೆ ಎಂದು ಜಿಲ್ಲಾಧಿಕಾರಿಗಳು
ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೌಖಿಕವಾಗಿ ಹೇಳಿದ್ದಾರೆ. ಆದರೆ ಲಿಖಿತವಾಗಿ ನೀಡಬೇಕೆಂಬುದು ನಮ್ಮ ವಾದ ಎಂದರು.
ನಾವು ಮುಂದಿಟ್ಟ ಎರಡು ಪ್ರಮುಖ ಬೇಡಿಕೆಗಳ ಪೈಕಿ ಒಂದನ್ನು ಮಾತ್ರ ಈಡೇರಿಸುವ ಭರವಸೆ ನೀಡಿದ್ದಾರೆ. ಆದರೆ ಜುಲೈ 2020ರಿಂದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನವನ್ನು ಯಾರು ನೀಡಬೇಕೆಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲು ಅವರು ಕಾಲಾವಕಾಶ ಕೇಳಿದ್ದಾರೆ.
ನಮಗೆ ಸದಾ ಬೆಂಬಲ ಮತ್ತು ಸಹಕಾರ ನೀಡುತ್ತಾ ಬಂದವರಿಗೆ ಗೌರವ ಸೂಚಕವಾಗಿ ನಾವು ಭಾನುವಾರದವರೆಗೆ ಮುಷ್ಕರವನ್ನು ತಡೆ ಹಿಡಿದಿದ್ದೇವೆ. ಆದರೆ ಹಿಂಪಡೆದಿಲ್ಲ ಎಂದು ಹೇಳಿದರು. ಒಂದು ವೇಳೆ ಮುಂಬವ ದಿನಗಳಲ್ಲಿ ನೀಡುವ ಶಿಷ್ಯವೇತನವನ್ನು ಆಡಳಿತ ಮಂಡಳಿಯೇ ನೀಡುವುದಾದರೆ, ಹಣವನ್ನು ಸರ್ಕಾರದ ಖಾತೆಗೆ ನೀಡಿ. ಸರ್ಕಾರ ನಮಗೆ ಶಿಷ್ಯವೇತನ ನೀಡುವಂತಾಗಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ.ಹಿತಾ, ಡಾ.ಸುಧಾಕರ, ಡಾ.ನಿಧಿ ಹಾಗೂ ಇತರರು ಉಪಸ್ಥಿತರಿದ್ದರು.