`ಉಪವಾಸ’ ಇದು ನಿಜಕ್ಕೂ ಉಪವಾಸವೇ?

`ಇಲ್ಲ ಬೇಡಾರೀ, ಇವತ್ತು ನಾನು ಒಪ್ಪತ್ತು’ – ಈ ಮಾತನ್ನು ನಾವೆಷ್ಟು ಬಾರಿ ಕೇಳಿಲ್ಲ! ಊಟ ಬಿಡುತ್ತಾರೆ ಜನ – ಹಲವಾರು ಕಾರಣಗಳಿಗಾಗಿ. ಕೆಲವರು ಹಬ್ಬ, ಹರಿದಿನಗಳಲ್ಲಿ ಕೆಲವರು ಬೇಜಾರಿನಿಂದ, ಸಿಟ್ಟಿನಿಂದ ಬಿಡುತ್ತಾರೆ – ಇದು ಇದ್ದವರ ಕತೆ. ಇಲ್ಲದವರಿಗೆ ಇದು ಅನಿವಾರ್ಯ. ಇನ್ನು ಕೆಲವೊಮ್ಮೆ ಊಟ ಬಿಡುತ್ತೇವೆ – ನಮಗೆ ಬೇಕಾದ್ದು ಸಿಕ್ಕದಂತಹ ಪರಿಸ್ಠಿತಿಗಳಲ್ಲಿ. ಸ್ವ-ಇಚ್ಛೆ ಯಿಂದ ಊಟ ಬಿಡುವುದಕ್ಕೆ ಜನ ಕರೆಯುವುದು `ಉಪವಾಸ’.  ಇದು ನಿಜಕ್ಕೂ ಉಪವಾಸವೇ?

ಸಂಸ್ಕೃತದಲ್ಲಿ `ಉಪ’ ಎಂದರೆ ಸಾನ್ನಿಧ್ಯ, ಸಾಮೀಪ್ಯ, ಹತ್ತಿರ ಎಂದು ಅರ್ಥವಿದೆ. `ವಾಸ’ ಎಂದರೆ ಜೀವಿಸುವುದು. `ಉಪವಾಸ’ ಎಂದಾಗ `ಸಾಮೀಪ್ಯದಲ್ಲಿ ಜೀವಿಸುವುದು’ ಎಂದಾಗುತ್ತದೆ. ಅಂದರೆ, ಊಟ ಬಿಡುವುದಕ್ಕೂ ಉಪವಾಸಕ್ಕೂ ಏನು ಸಂಬಂಧ? ತಿಳಿದವರು ಹೇಳುವಂತೆ, ಉಪವಾಸದ ಸರಿಯಾದ ಅರ್ಥ, `ದೇವರ ಸಾನ್ನಿಧ್ಯದಲ್ಲಿ ವಾಸಿಸುವುದು’ ಎಂದು. `ದೇವೋಪವಾಸ ಎಂದಿದ್ದರೆ ನನ್ನಂತಹ ದಡ್ಡ ಮತಿಗಳಿಗೆ ಸ್ಪಷ್ಟವಾಗಿರುತ್ತಿತ್ತೋ ಏನೋ? ದೇವರ ಸಾನ್ನಿಧ್ಯದಲ್ಲಿರಲು ಊಟ ಬಿಡುವುದೇಕೆ? ಊಟಕ್ಕೆ ಸಾಮಗ್ರಿಗಳನ್ನು ಜೋಡಿಸಿಕೊಳ್ಳಲು, ಅಡುಗೆ ಮಾಡಲು, ತಿನ್ನಲು, ತಿಂದದ್ದನ್ನು ತೊಳೆಯಲು ಮತ್ತು ತಿಂದಾದ ಮೇಲೆ ಜೀರ್ಣಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ. ತಿಂದಾದ ಮೇಲೆ ಶರೀರಕ್ಕೆ ಒಂದು ತರಾ ಜಡತ್ವ ಒದಗುತ್ತದೆ. ಆಗ ಮನಸ್ಸಿನಲ್ಲಿ ದೇವರನ್ನು ಸ್ಥಿರವಾಗಿರಿಸಿಕೊಳ್ಳಲು ಕಷ್ಟವಾಗುತ್ತದೆ. ಈ ಊಟದ ತಾಪತ್ರಯವೇ ಇಲ್ಲದಿದ್ದರೆ, ಆಹಾರದ ಕಡೆ ಗಮನ ಹರಿಯದೇ ದೇವರ ಆಕಾರ ನಮ್ಮ ಮನಸ್ಸಿನಲ್ಲಿ ಸ್ಥಿರವಾಗಿ ಮೂಡಿ ನಿಂತು, ಅವನ ಸಾನ್ನಿಧ್ಯದಲ್ಲಿರಲು ಅನುಕೂಲವಾಗುತ್ತದೆ. ಅನ್ಯ  ಕಾರ್ಯಗಳಲ್ಲಿ ನಿರತರಾಗುವುದರ ಬದಲು ಏಕಾದಶಿ, ಶಿವರಾತ್ರಿ ಇಂತಹ ದಿನಗಳಲ್ಲಿ ವಿಷ್ಣು, ಶಿವ ಇವರ ನೆನಪಿನಲ್ಲಿ ಕಾಲ ಕಳೆಯಲು ಅನುವಾದೀತು. ಇದು `ಉಪವಾಸ’ ಮಾಡುವುದರ ನಿಜವಾದ ಉದ್ದೇಶ. ದೈನಂದಿನ ವಿಷಯಾಸಕ್ತಿಗಳಿಂದ ದೂರವಾಗಿ, ಶಾಂತ ಚಿತ್ತತೆಯಿಂದ ದೈವ ಸಾನ್ನಿಧ್ಯವನ್ನು ಅನುಭವಿಸುವುದೇ `ಉಪವಾಸ’.

ದೈವದ ಅಸ್ತಿತ್ವವನ್ನು ನಂಬಿರುವ ದೈವಾರಾಧಕರು ಅವಶ್ಯ ಉಪವಾಸ ಮಾಡಬೇಕು. `ಉಪವಾಸ’ ಮಾಡಿದರೆ ಅದನ್ನು ಸರಿಯಾದ ರೀತಿಯಲ್ಲಿ ಅರ್ಥಪೂರ್ಣವಾಗಿ ಮಾಡಬೇಕು. ಇಲ್ಲದಿದ್ದರೆ ಮಾಡಲೇ ಬಾರದು. ಊಟ ಮಾಡಿಯೂ ಉಪವಾಸ ಮಾಡಲು ಸಾಧ್ಯ ಎಂಬುದನ್ನು ಅರಿತಿರಬೇಕು – ಹೆಂಡತಿ ಮಕ್ಕಳಿದ್ದೂ ಗಾಂಧೀಜಿ ಬ್ರಹ್ಮಚರ್ಯ ಪಾಲಿಸಿದಂತೆ! ಶಿವರಾತ್ರಿಯ ಕಥೆಯೊಂದುಂಟು. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಕಥೆಯೇ. ಮಹಾರಾತ್ರಿಯ ದಿನವೊಂದರಂದು ಶಿವಭಕ್ತನೆಂದು ತನ್ನ ಬಗ್ಗೆ ತಾನೇ ಉನ್ನತ ಭಾವನೆಯಿಟ್ಟುಕೊಂಡವನೊಬ್ಬ ಅಭ್ಯಂಜನ ಸ್ನಾನ ಮಾಡಿ ಶುಭ್ರ ವಸ್ತ್ರ ತೊಟ್ಟು, ವಿಭೂತಿ ಧರಿಸಿ ಶಿವಾಲಯಕ್ಕೆ ಹೋಗುತ್ತಿರುವಾಗ, ಕುಡಿದು ಅಮಲೇರಿದ ತನ್ನ ಪರಿಚಿತನೊಬ್ಬ ವೇಶ್ಯೆಯೊಬ್ಬಳ ಮನೆಗೆ ಹೋಗುತ್ತಿರುವುದನ್ನು ಕೇಳಿ ತಿಳಿದುಕೊಂಡ. ಶಿವಾಲಯಕ್ಕೆ ಹೋಗಿ ಲಿಂಗಾರ್ಚನೆಯಾಗುತ್ತಿದ್ದರೂ ಅವನ ಮನಸ್ಸು ವೇಶ್ಯೆಯ ಮನೆಗೆ ಹೋದ ವ್ಯಕ್ತಿ ಪಡುತ್ತಿರುವ ಸುಖದ ದೃಶ್ಯವನ್ನೇ ಕಾಣುತ್ತಿತ್ತು. ಇತ್ತ ವೇಶ್ಯೆಯ ಮನೆಗೆ ಬಂದ ಕುಡುಕನ ಮನಸ್ಸು ಅಮಲಿಳಿದು, ತನ್ನ ಬಗ್ಗೆಯೇ ಬೇಸರಗೊಂಡು, ಶಿವಾಲಯದಲ್ಲಿ ಆಗುತ್ತಿರುವ ಲಿಂಗ ಪೂಜೆಯನ್ನೇ ಕಲ್ಪಿಸಿಕೊಳ್ಳುತ್ತಿತ್ತು. ಶಿವನ ಕೃಪೆ ಅವನ ಮೇಲೆ ಬಿದ್ದು ಅವನು ಸ್ವರ್ಗಕ್ಕೆ ಹೋದ. ಶಿವಭಕ್ತ ಎಂದುಕೊಂಡಿದ್ದವನಿಗೆ ಏನೂ ಫಲ ದೊರೆಯಲಿಲ್ಲ. ಕಾರಣವಿಷ್ಟೇ, ಶಿವಭಕ್ತನಿಗೆ ಉಪವಾಸ ಫಲ (ದೇವರ ಸಾಮೀಪ್ಯ) ದೊರೆಯಲಿಲ್ಲ. ಕುಡುಕನಿಗೆ ಉಪವಾಸ ಫಲ ದೊರಕಿತ್ತು! `ಉಪವಾಸ’ ಬರೀ ಫಲಾಪೇಕ್ಷೆಯಿಂದ ದೇಹದಂಡನೆ ಮಾಡಿಕೊಳ್ಳುವುದರಿಂದಲ್ಲ, ಶುದ್ಧ ಮನಸ್ಸಿನಿಂದ ದೇವ ಸಾಮೀಪ್ಯವನ್ನು ಬಯಸಬೇಕು.`ಒಡಲ ದಂಡಿಸಿ ಮುಕ್ತಿ ಪಡೆವೆನೆಂಬುವ ಹೆಡ್ಡ, ಬಡಿಗೆಯಲಿ ಹುತ್ತ ಹೊಡೆಯಲಡಲಿಹ ಸರ್ಪ ಮಡಿಯುವುದೇ? ಹೇಳು ಸರ್ವಜ್ಞ’- ಎಂದು ಸರ್ವಜ್ಞ ಕವಿ ಮನೋಜ್ಞವಾಗಿ ಡಂಭಾಚಾರದ ಭಕ್ತಿಯನ್ನು ಅಲ್ಲಗಳೆದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಲೋಕಾರೂಢಿ: ಈ ದೈವ ಸಾಮೀಪ್ಯವನ್ನು ಮನೆ ಮಂದಿಗೆಲ್ಲಾ ಕಡ್ಡಾಯವಾಗಿ ಒದಗಿಸಿಕೊಡಲು ಹಿಂದಿನವರು ಉಪವಾಸದ ಆಚರಣೆಯನ್ನು ಇಟ್ಟುಕೊಂಡಿದ್ದರು ಎನ್ನಬಹುದು. ಇದು ಹೆಚ್ಚಾಗಿ ಹೆಂಗಸರಿಗೆ ಉಪಯೋಗವಾಗುತ್ತಿತ್ತು ಎನ್ನಿಸುತ್ತದೆ. ಅವರ ದಿನದ ಸುಮಾರು ಭಾಗ ಅಡುಗೆಮನೆಯ ಕೆಲಸಗಳಲ್ಲೇ ಕಳೆದು ಹೋಗುತ್ತಿತ್ತು. ಆ ಕಾಲದ ಗಂಡಸರಿಗೆ “God is always near and within us”  ಮತ್ತು ನಾನೇ ಮನೆಯ ದೇವರು ಎನ್ನುವ ಭಾವನೆ ಹೆಚ್ಚಾಗಿರುತ್ತಿತ್ತು! ಹೆಂಗಸರಿಗೊಂದು ಮನೆಗೆಲಸದಿಂದ “Break” ಕೊಡೋಣ, ಉಪವಾಸದಿಂದ ಅವರೂ ದೇವರನ್ನು ಕಾಣಲಿ ಎಂದು ಅವರಿಗೊಮ್ಮೆ ಒಳ್ಳೆಯ ಬುದ್ಧಿ ಬಂದು ಅದನ್ನು ಜಾರಿಗೆ ತಂದಿದ್ದರು ಎನ್ನಿಸುತ್ತದೆ.  ಕಾಲಕ್ರಮೇಣ, ಹೆಂಗಸರು ಹೆಚ್ಚಾಗಿ ಈ ಉಪವಾಸ ಪದ್ದತಿಯನ್ನು ಮುಂದುವರೆಸಲು ಪುಸಲಾಯಿಸಿ, ಗಂಡಸರು ಇದನ್ನು ಕೈ ಬಿಟ್ಟರು. ಪಾಪ! ಹೆಂಗಸರು ತಾವು ತಿನ್ನದಿದ್ದರೂ, ಉಳಿದ ಮನೆಮಂದಿಗೆ ಅಡುಗೆ ಮಾಡುವುದು ತಪ್ಪಲಿಲ್ಲ. ಆ ಕಾಯಕದಲ್ಲಿ ದೈವ ಸಾಮೀಪ್ಯಕ್ಕೆ ಅವರಿಗೆಷ್ಟು ಸಮಯ ದೊರಕುತ್ತಿತ್ತೋ ಆ ದೇವರೇ ಬಲ್ಲ! ಇಂದಿಗೂ ನಾನು ನೋಡಿರುವ ಪ್ರಕಾರ, ಗಂಡಸರಿಗಿಂತ ನಮ್ಮ ಹೆಂಗಸರೇ ಹೆಚ್ಚಾಗಿ ಊಟ ಬಿಡುವುದು. ಆ ದೇವರು ಈ ಸತ್ಯವನ್ನು ಮನಗಂಡು ಅವನ ಸಹವಾಸವನ್ನಾದರೂ ಅವರಿಗೆ ಕರುಣಿಸುತ್ತಾನೆ ಎಂದುಕೊಳ್ಳೋಣ! `ಉಪವಾಸ’ (ಊಟ ಬಿಡುವ ಭಾಗ) ಕೆಲವು ಸಂದರ್ಭಗಳಲ್ಲಿ ಬಹಳ ಪ್ರಬಲವಾದ ಅಸ್ತ್ರವೂ ಹೌದು. ಉಪವಾಸವೇ ಅಲ್ಲವೇ ನಮ್ಮ ಬಾಪೂಜಿಯವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಶಸ್ವಿಯಾಗಿ ಉಪಯೋಗಿಸಿದ ಅಸ್ತ್ರ? ಭಾಷಾವಾರು ಪ್ರಾಂತ ವಿಂಗಡಣೆಯೂ `ಉಪವಾಸಾಸ್ತ್ರ’ದಿಂದಲೇ ಅಲ್ಲವೇ ಆಗಿದ್ದು? ಇತ್ತೀಚಿನ ಹಲವಾರು ರಾಜಕಾರಣಿಗಳು ಈ ಅಸ್ತ್ರಪ್ರಯೋಗವನ್ನು ಹಲವಾರು ಬಾರಿ ಮಾಡಿ ರುವುದೂ ಉಂಟು. ಇವರಲ್ಲಿ ಕೆಲವರು `Fast unto death’  ಎಂದೇ ಪ್ರಾರಂಭಿಸಿ ದ್ದಾರೆ. ಆದರೆ ಇವರಲ್ಲಿ ಒಬ್ಬರು ಸತ್ತುದನ್ನೂ ನಾನು ಕಾಣೆ!

`ಉಪವಾಸ’ದ ಆಚರಣೆಯಲ್ಲಿ ಈಗೆಲ್ಲ ತುಂಬಾ ಆಧುನೀಕತೆ (modernize)  ಆಗಿರುವುದು ನಿಜ. `ದೇವೋಪವಾಸ’ ಕಡಿಮೆಯಾಗಿ `ಅನ್ಯೋಪವಾಸವೇ ಹೆಚ್ಚಾಗುತ್ತಿದೆ. ದೇವೋಪವಾಸಕ್ಕೆ ಊಟ ಬಿಡುವುದು ಅಗತ್ಯ. ಊಟ ಬಿಡದಿದ್ದರೆ ದೇವರು ಓಡಿ ಹೋದಾನು! ಆದರೆ ಅನ್ಯೋಪವಾಸಕ್ಕೆ ಅಂತಹ ಅಗತ್ಯವಿಲ್ಲ. ಅನ್ಯ ವಿಷಯಾಸಕ್ತಿಗಳ ಸಾಮೀಪ್ಯದಲ್ಲಿ ಇರುವುದು ನಮ್ಮ ದಿನನಿತ್ಯದ ಕರ್ಮವೇ ಆಗಿದೆ. ಪುರಂದರ ದಾಸರು ಹೇಳಿದ ಹಾಗೆ, `ಉದರ ವೈರಾಗ್ಯವಿದು, ನಮ್ಮ ಪದುಮನಾಭನಲಿ ಲೇಶ ಭಕುತಿಯಿಲ್ಲ!’ ಅಮಾವಾಸ್ಯೆ, ಪೂರ್ಣಿಮೆ, ಏಕಾದಶಿ, ಶಿವರಾತ್ರಿ ಎಲ್ಲದರಲ್ಲೂ ನಾವೆಲ್ಲ ಸಾಮಾನ್ಯವಾಗಿ ಮಾಡುವುದು ಅನ್ಯೋಪವಾಸವೇ! ಕಾಲೇಜು ದಿನಗಳಲ್ಲಿ  ನಾವೆಲ್ಲಾ ಊಟ ಬಿಡುತ್ತಿದ್ದೆವು – ಅಂದರೆ ಅನ್ನ, ಹುಳಿ, ಚಪಾತಿ, ಪಲ್ಯ ಇಂತಹ ದೊಡ್ಡ ತಟ್ಟೆಯಲ್ಲಿ ಬಡಿಸುವಂತಹವು. ಅದರ ಬದಲು ಉಡುಪಿ ಹೋಟೆಲ್‌ನಲ್ಲಿ ದೋಸೆ, ವಡೆ ಇಂತಹುಗಳನ್ನು ಸಣ್ಣ ಪ್ಲೇಟ್‍ನಲ್ಲಿ  ತಿಂದು, ನಂತರ ಸಿನಿಮಾ – ಸೆಕೆಂಡ್ ಷೊ -`ಸಿನಿಮೋಪವಾಸ’ ಮಾಡುತ್ತಿದ್ದೆವು! ಶಿವರಾತ್ರಿಯ ಮರುದಿನ ತುಳುಕಿರುತ್ತಿತ್ತು ಅದೊಂದು ತರಾ ಪವಿತ್ರ ಭಾವನೆ ಹಾಗೂ ಜಾಗರಣೆ ಮಾಡಿದ ಸಮಾಧಾನ. ಇನ್ನು ಕೆಲವರ ಹಾಸ್ಟೆಲ್ ರೂಮುಗಳಲ್ಲಿ ಸಾಗಿರುತ್ತಿತ್ತು ರಾತ್ರಿಯಿಡೀ ಇಸ್ಪೀಟಾಟ. ಮಹಾಶಿವನಿಗೆ `Hai’ ಎಂದು ಹೇಳಿದ್ದ ಸಂತೃಪ್ತಿ!

ಗೃಹಸ್ಥ ಜೀವನಕ್ಕೆ ಕಾಲಿಟ್ಟ ಮೇಲೆ ಸ್ವಲ್ಪ `ದೇವೋಪವಾಸ’ದ ಕಡೆಗೆ ಗಮನ ನೀಡಬೇಕೆಂಬ ನಿಯಮ! ಆದರೆ ಆ ದೇವರಿಗೇ `ನರೋಪವಾಸ ಅಷ್ಟು ಒಗ್ಗುವುದಿಲ್ಲವೇನೋ ಎನ್ನುವ ಸಂದೇಹ ಆಗಾಗ ಬರುವುದುಂಟು. ನಮ್ಮ modern  ಮನೆಗಳಲ್ಲಿ ಇರಲು ದೇವರಿಗೆ ಏನೋ ಅಂಜಿಕೆ… ಆದರೂ ನಮ್ಮ ಕರ್ತವ್ಯ ನಾವು ಮಾಡಬೇಕಲ್ಲವೇ? ದೇವಸ್ಥಾನಕ್ಕೆ ಹೋಗುತ್ತೇವೆ, ಹುಂಡಿಗೆ ಕಾಣಿಕೆ ಸಲ್ಲಿಸುತ್ತೇವೆ, ಹೂವು ಹಣ್ಣು ಅರ್ಪಿಸುತ್ತೇವೆ, ನಮ್ಮ ಅಡ್ರೆಸ್‌ ಕೊಟ್ಟು ನಮ್ಮ ಭಕ್ತಿಯನ್ನು ದೇವರಿಗೆ ಸಮರ್ಪಿಸು ಎಂದು ಪೂಜಾರಿಗೆ ಮೊರೆಯಿಡುತ್ತೇವೆ. ದೇವಸ್ಥಾನ ಕಾಣಿಸುತ್ತದೆ, ಪೂಜಾರಿ ಕಾಣಿಸುತ್ತಾನೆ, ದೇವರ ಮೂರ್ತಿ ಇಣುಕು ನೋಟಕ್ಕೆ ಮಾತ್ರ ಸಿಕ್ಕುತ್ತದೆ. ಮನಸ್ಸು ದುರ್ಬಲವಾಗಿ `ದೇವೋಪವಾಸ’ ದುರ್ಲಭವಾಗುತ್ತದೆ! ಬಾಹ್ಯ ದೇವೋಪವಾಸಕ್ಕೆ `Visa’  ದೊರಕಿಸಿಕೊಳ್ಳಲು ಇಷ್ಟೆಲ್ಲಾ ತಾಪತ್ರಯಗಳಿದ್ದರೂ ಸಹ, ಒಂದು ಸಮಾಧಾನವೆಂದರೆ ನಮ್ಮ ಹಿರಿಯರು ನಮಗೆ ಕಲಿಸಿದ ಒಂದು ಮಹಾನ್ ಸತ್ಯ. 

`ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆ ಎನಲೇತಕ್ಕೆ?’ ಎಂಬ ಮಹಾದೇವಿಯಕ್ಕ) `ಹೊಳೆವ ಕನ್ನಡಿ ಕೈಯೊಳಗಿರ್ದು ನೋಡದೆ ನೀರ ನೆಳಲಲ್ಲಿ ಮೊಗವ ನೋಳ್ಪಂತೆ! ಬಳಲುತಿಹುದು ಹೊರಗಾಡಿ’ (ರತ್ನಾಕರ)

ಆ ದೇವರೆಲ್ಲಿ ಹೋಗುತ್ತಾನೆ? ನಮ್ಮಲ್ಲೇ ಇದ್ದಾನೆ `Cancer Gene’ನ ತರಹ ನಮ್ಮ ದೇಹದ ಪ್ರತಿ ಕಣ ಕಣದಲ್ಲೂ – ಗಂಭೀರವಾಗಿ, ಗುಪ್ತವಾಗಿ, ಸುಪ್ತವಾಗಿ. ಅವನನ್ನು ಏಳಿಸೋಣ, ಎದ್ದೇಳಿಸೋಣ – `ಉಪವಾಸ’ ಮಾಡಿ ಅವನ `ಸಹವಾಸ’ ಗಳಿಸೋಣ!


ಅಣ್ಣಾಪುರ್‌ ಶಿವಕುಮಾರ್, ಲಿಬರ್ಟಿವಿಲ್
ಇಲಿನಾಯ್, ಯುಎಸ್ಎ.
[email protected]

error: Content is protected !!